ADVERTISEMENT

ಟೆಂಡರ್‌ನಲ್ಲಿ ನಿಯಮ ಉಲ್ಲಂಘನೆ: ಆರೋಪ

ಅರಣ್ಯ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರ ಸಂಘ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 12:47 IST
Last Updated 24 ಸೆಪ್ಟೆಂಬರ್ 2021, 12:47 IST
ಜಿ.ಚಂದ್ರಪ್ಪ
ಜಿ.ಚಂದ್ರಪ್ಪ   

ಹಾವೇರಿ: ‘ಜಿಲ್ಲೆಯ ಅರಣ್ಯ ಇಲಾಖೆಯಿಂದ ಕರೆದಿರುವ ಟೆಂಡರ್‌ಗಳಲ್ಲಿ ಪಾರದರ್ಶಕ ನಿಯಮ ಪಾಲಿಸಿಲ್ಲ. ತಮಗೆ ಬೇಕಾದವರಿಗೆ ಟೆಂಡರ್‌ ನೀಡಲು ಅರಣ್ಯ ಅಧಿಕಾರಿಗಳು ಹುನ್ನಾರ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ಅರಣ್ಯ ಗುತ್ತಿಗದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಚಂದ್ರಪ್ಪ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಿವಿಲ್‌ ಕಾಮಗಾರಿಗಳ ಅಧಿಸೂಚನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ನೋಂದಣಿ ಮಾಡಿಸಿಕೊಳ್ಳಲು ದಿನಾಂಕ ನಿಗದಿಪಡಿಸಲಾಗಿದೆ. ಮತ್ತೊಂದು ಅಧಿಸೂಚನೆಯಲ್ಲಿ ದಿನಾಂಕದ ನಿರ್ಬಂಧವಿಲ್ಲ. ಮೇಲ್ನೋಟಕ್ಕೆ ತಾರತಮ್ಯ ಕಂಡುಬಂದಿದ್ದು, ಕೆಟಿಟಿಪಿ ಕಾಯ್ದೆ ಅನ್ವಯ ಕ್ರಮಬದ್ಧವಾಗಿಲ್ಲ ಎಂದು ದೂರಿದರು.

ಟೆಂಡರ್‌ ನಿಬಂಧನೆಗಳ ಪಟ್ಟಿಯಂತೆ ಕೆಡಬ್ಲ್ಯೂ1 ಮತ್ತು ಕೆಬ್ಲ್ಯೂ 2 ಪ್ರಕಾರ ಬ್ಯಾಂಕ್‌ ಎಲ್‌ಒಸಿಗೆ ಶೇ 30ರಷ್ಟು ಮಾತ್ರ ಅವಕಾಶವಿದ್ದು, ಎಲ್ಲ ಕಾಮಗಾರಿಗಳಿಗೂ ₹50 ಲಕ್ಷ ಎಲ್‌ಒಸಿ ಕೇಳಿರುತ್ತಾರೆ. ಇದು ಕೂಡ ಕ್ರಮಬದ್ಧವಲ್ಲ. ಅರಣ್ಯ ಇಲಾಖೆಯ ಅವೈಜ್ಞಾನಿಕ ನಿರ್ಧಾರದಿಂದ ರಾಜ್ಯದ ನೋಂದಾಯಿತ ಗುತ್ತಿಗೆದಾರರು ಕಳೆದ ನಾಲ್ಕು ವರ್ಷಗಳಿಂದ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ ಎಂದು ಸಮಸ್ಯೆ ತೋಡಿಕೊಂಡರು.

ADVERTISEMENT

ಅರಣ್ಯ ಇಲಾಖೆಯೇ ಸಂಪೂರ್ಣ ಕಾಮಗಾರಿಗಳನ್ನು ನಿಭಾಯಿಸುವ ಯೋಚನೆಯೇ ಗುತ್ತಿಗೆದಾರರನ್ನು ಹೊರಗಿಡಲು ಪ್ರಮುಖ ಕಾರಣ ಎನ್ನಲಾಗಿದೆ. ನಾಲ್ಕು ವರ್ಷಗಳಿಂದ ಟೆಂಡರ್‌ದಾರರೇ ಸಸಿಗಳನ್ನು ಬೆಳೆಸಬೇಕು ಎಂಬ ನಿಯಮವೊಡ್ಡಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸುವ ಗುತ್ತಿಗೆದಾರರು ಸಸಿಗಳನ್ನು ಬೆಳೆಸಲು ಆಯ್ಕೆ ಮಾಡಿದ ಸ್ಥಳ ಟೆಂಡರ್‌ದಾರರ ಹೆಸರಲ್ಲಿ ಇರಬೇಕು ಎಂಬ ನಿಯಮ ಇಡಲಾಗಿದೆ. ಇದು ಗುತ್ತಿಗೆದಾರರಿಗೆ ಅಸಾಧ್ಯ ಎಂದರು.

ಈಗ ಕರೆದಿರುವ ಟೆಂಡರ್‌ ರದ್ದುಪಡಿಸಿ ಮರು ಟೆಂಡರ್‌ ಕರೆಯಬೇಕು. ಇಲ್ಲದಿದ್ದರೆ ನಾವು ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಶಂಕರ್‌ ಎಂ., ಶಶಿಧರ್‌ ಎಸ್‌.ಜಿ., ಪರಶುರಾಮ್‌ ನಿಪ್ಪಾಣಿಕರ್‌, ಭಕ್ತಪ್ರಹ್ಲಾದ, ನಾಗರಾಜ್‌ ಕೆ.ಇ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.