ADVERTISEMENT

ಆಶ್ರಯ ಕಾಲೊನಿಗೆ ಸೌಲಭ್ಯ ಮರೀಚಿಕೆ

ಸುಮಿತ್ರಾ ಮಾಲಿಪಾಟೀಲ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಗುಲ್ಬರ್ಗ: ವಿದ್ಯುತ್ ಕಂಬ ಇದೆ, ಆದರೆ ಸಂಪರ್ಕ ಇಲ್ಲ. ನೀರಿನ ಪೈಪ್ ಲೈನ್ ವ್ಯವಸ್ಥೆ ಇದೆ, ನಲ್ಲಿ ಕೂಡಿಸಿಲ್ಲ. ರಸ್ತೆಗಳಿವೆ, ಸಿಸಿ ಅಥವಾ ಡಾಂಬರೀಕರಣ ನಡೆದಿಲ್ಲ. ಶೌಚಾಲಯ ಮಂಜೂರಾಗಿವೆ, ಆದರೆ ಕಾಮಗಾರಿ ಆರಂಭ­ವಾಗಿಲ್ಲ. ಒಳ ಚರಂಡಿ ವ್ಯವಸ್ಥೆ ಇಲ್ಲ. ಶುದ್ಧೀಕರಣ ಘಟಕದ ನೀರು ಹರಿದು ಹೋಗಲು ನಾಲೆ ಇಲ್ಲ. ಇದು ಯಾವ ಹಳ್ಳಿಯ ಸ್ಥಿತಿಯೂ ಅಲ್ಲ. ಗುಲ್ಬರ್ಗ ನಗರದ ಹೃದಯ ಭಾಗದಲ್ಲಿರುವ ಫಿಲ್ಟರ್‌ ಬೆಡ್ ಪ್ರದೇಶದಲ್ಲಿರುವ ಆಶ್ರಯ ಕಾಲೊನಿಯ ದುಃಸ್ಥಿತಿ.  

ಇದು ಗುಲ್ಬರ್ಗದ ಕಾಟನ್ ಮಾರ್ಕೆಟ್, ಗಂಜ್‌, (ಜಿಡಿಎ) ಗೋಕುಲ ನಗರ ನಡುವೆ ಇದ್ದರೂ ಮೂಲ ಸೌಲಭ್ಯ ಮರೀಚಿಕೆಯಾಗಿದೆ.
200 ಮನೆ ಹೊಂದಿರುವ ಈ ಕಾಲೊನಿ 15 ವರ್ಷಗಳ ಹಿಂದೆ ಆಶ್ರಯ ಇಲ್ಲದವರಿಗೆ ಆಶ್ರಯ ಒದಗಿಸಿಕೊಟ್ಟಿದ್ದು ನಿಜ. ಆದರೆ ಇಲ್ಲಿವರೆಗೆ ಕಾಲೊನಿಗೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಈ ಮನೆಗಳಿಗೆ ಸೂರೊಂದು ಬಿಟ್ಟರೆ ಬೇರೆನೂ ಇಲ್ಲ. ಮನೆಯಲ್ಲ... ಕ್ಷಮಿಸಿ ತಂಗುದಾಣದಂತಿರುವ ಇವಕ್ಕೆ ಮನೆಗಳು ಅನ್ನುವಂತಿಲ್ಲ. ಯಾಕೆಂದರೆ ಮನೆಗಿರಬೇಕಾದ ಯಾವ ಸವಲತ್ತುಗಳು ಇಲ್ಲಿಲ್ಲ.

ಹದಗೆಟ್ಟ ರಸ್ತೆ: ಕಾಲೊನಿಯೊಳಗೆ ಹೋಗುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ರಸ್ತೆಯ ತಗ್ಗು ಗುಂಡಿಗಳಿಂದಾಗಿ ವಾಹನಗಳು ಸಂಚರಿಸಬೇಕಾದರೆ ಸರ್ಕಸ್‌ ಮಾಡಬೇಕಾಗಿದೆ. ಅಲ್ಲದೇ ರಸ್ತೆ ಬದಿ ತಿಪ್ಪೆ ಗುಂಡಿಗಳು, ಮುಳ್ಳುಕಂಟಿಗಳು ಎಲ್ಲೆಂದರಲ್ಲಿ ಕಂಡು ಬರುತ್ತವೆ. ರಸ್ತೆ ಬದಿಯಲ್ಲಿ ಜನ ಶೌಚ ಮಾಡಿರುವುದರಿಂದ ಕಾಲೊನಿಯೊಳಗೆ ಮೂಗುಮುಚ್ಚಿ­ಕೊಂಡೆ ಹೋಗಬೇಕಾದ ಪರಿಸ್ಥಿತಿಯಿದೆ. 15ವರ್ಷಗಳು ಸಂದರೂ ಈ ರಸ್ತೆಗಳಿಗೆ ಇನ್ನೂ ಡಾಂಬರು ಭಾಗ್ಯ ಬಂದಿಲ್ಲ.

ವಿದ್ಯುತ್ ಇಲ್ಲ:  ಇಲ್ಲಿ ಪ್ರತಿಯೊಂದು ಪ್ರದೇಶಗಳಲ್ಲೂ ವಿದ್ಯುತ್ ಕಂಬಗಳನ್ನು ನೆಡಲಾಗಿದೆ. ಆದರೆ ಅದಕ್ಕೆ ಸಂಪರ್ಕ ಭಾಗ್ಯ ಮಾತ್ರ ಒದಗಿ ಬಂದಿಲ್ಲ. ಕತ್ತಲಾದರೆ ಜನರು ಬ್ಯಾಟರಿ ಹಿಡಿದು ತಿರುಗಬೇಕಾದ ಸ್ಥಿತಿ ಇದೆ. ‘ಭಾಗ್ಯಜ್ಯೋತಿ’ ಯೋಜನೆಯಂತೆ ಪ್ರತಿ ಮನೆಗೆ  ವೈರಿಂಗ್‌ ಮಾಡಲಾಗಿದೆ. ಆದರೆ  ವಿದ್ಯುತ್‌ ಸಮಪರ್ಕ ನೀಡದೆ ಸೀಮೆಣ್ಣೆ ದೀಪಗಳನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.

ನೀರಿಲ್ಲ: ಕಾಲೊನಿ ಆರಂಭವಾಗುವಲ್ಲೇ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಆದರೆ ನಲ್ಲಿ ಮಾತ್ರ ಕೂರಿಸಿಲ್ಲ. ಇದರಿಂದ ರೋಸಿ ಹೋದ ಜನ ಎಲ್ಲೆಂದರಲ್ಲಿ ನೆಲ ಬಗೆದು ಪೈಪ್‌ಗಳಿಗೆ ನಲ್ಲಿಗಳನ್ನು ಜೋಡಿಸಿ ನೀರು ಪಡೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಕುಡಿಯುವ ನೀರಿನ ಜೊತೆ ಚರಂಡಿ ನೀರು ಸೇರಿಕೊಳ್ಳುತ್ತಿದೆ. ಈ ನೀರನ್ನು ಕುಡಿದು ಇಲ್ಲಿನ ಜನ ಹಲವು ಬಾರಿ ಅನಾರೋಗ್ಯ  ಪೀಡಿತರಾಗಿದ್ದಾರೆ. ಬಟ್ಟೆ ಒಗೆಯಲು ನಾಲೆಯ ವ್ಯವಸ್ಥೆ ಇಲ್ಲದ ಕಾರಣ ಶುದ್ಧೀಕರಣ ಘಟಕದಿಂದ ಬರುವ ಕಾಲುವೆ ನೀರು ಚರಂಡಿಗೆ ಸೇರುತ್ತಿದೆ. ಅದರಲ್ಲೇ ಜನರು ಹಲವು ವರ್ಷಗಳಿಂದ ಬಟ್ಟೆ ಒಗೆಯುತ್ತಿದ್ದಾರೆ.

ಇದ್ದೂ ಇಲ್ಲದ ಶೌಚಾಲಯ: ಮಹಿಳೆಯರಿಗಾಗಿ ಇಲ್ಲಿ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಅದು ಬಳಕೆಗೆ ಯೋಗ್ಯವಲ್ಲದ ಕಾರಣ  ಮಹಿಳೆಯರು ಪಕ್ಕದ  ಮುಳ್ಳುಕಂಟಿಗಳನ್ನೇ ಶೌಚಾಲಯವಾಗಿ(ಬಯಲು ಶೌಚಾಲಯ) ಬಳಸಿಕೊಳ್ಳುತ್ತಿ­ದ್ದಾರೆ.
‘ರಾತ್ರಿ ಹೊತ್ತು ಹಾವು ಚೇಳಿನ ಭಯದಿಂದ ರಸ್ತೆಯ ಪಕ್ಕದಲ್ಲಿಯೇ ಕೂರಬೇಕಾಗುತ್ತದೆ. ಮನೆಗೊಂದು ಶೌಚಾಲಯ ನಿರ್ಮಿಸಲು ಅನುದಾನ ಜಾರಿಯಾಗಿದೆ. ಆದರೆ ಶೌಚಾಲಯ ನಿರ್ಮಾಣಗೊಂಡಿಲ್ಲ’ ಎಂದು ಮಹಿಳೆಯರು ದೂರಿದ್ದಾರೆ.

ಶೌಚಾಲಯವಾದ ಉದ್ಯಾನ: ಕಾಲೊನಿಗೆ ಉದ್ಯಾನ ನಿರ್ಮಿಸ­ಬೇಕು ಎನ್ನುವ ಉದ್ದೇಶದಿಂದ ಸುತ್ತಲೂ ಆವರಣಗೋಡೆ ನಿರ್ಮಿಸಲಾಗಿದೆ. ಆದರೆ ಅದರಲ್ಲಿ ಹುಲ್ಲಿನ ಪೊದೆ ಬೆಳೆದಿರುವುದರಿಂದ  ಸಾರ್ವಜನಿಕರು ಶೌಚಾಲಯವಾಗಿ ಬಳಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.