ADVERTISEMENT

ಕಲಬುರ್ಗಿ ಬಂದ್‌ ವಿಫಲ; ಮುಖಂಡರ ಬಂಧನ

ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿದ್ದ ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 29 ಮೇ 2018, 8:39 IST
Last Updated 29 ಮೇ 2018, 8:39 IST
ಕಲಬುರ್ಗಿಯ ನಗರೇಶ್ವರ ಶಾಲೆಯ ಹತ್ತಿರ ಪ್ರತಿಭಟನೆಗೆ ಮುಂದಾಗಿದ್ದ ಬಿಜೆಪಿ ಯುವ ಮುಖಂಡ ಚಂದ್ರಕಾಂತ ಪಾಟೀಲ ಅವರನ್ನು ಪೊಲೀಸರು ಬಂಧಿಸಿದರು
ಕಲಬುರ್ಗಿಯ ನಗರೇಶ್ವರ ಶಾಲೆಯ ಹತ್ತಿರ ಪ್ರತಿಭಟನೆಗೆ ಮುಂದಾಗಿದ್ದ ಬಿಜೆಪಿ ಯುವ ಮುಖಂಡ ಚಂದ್ರಕಾಂತ ಪಾಟೀಲ ಅವರನ್ನು ಪೊಲೀಸರು ಬಂಧಿಸಿದರು   

ಕಲಬುರ್ಗಿ: ರಾಜ್ಯ ಸರ್ಕಾರ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ‘ಕಲಬುರ್ಗಿ ಬಂದ್‌’ ಸಂಪೂರ್ಣ ವಿಫಲವಾಯಿತು.

ನಗರ ಸಾರಿಗೆ ಹಾಗೂ ಹೊರ ಊರಿಗೆ ಹೋಗುವ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ನಗರದಲ್ಲಿ ವಾಹನ ಸಂಚಾರ ಎಂದಿನಂತಿತ್ತು. ಜನಜೀವನ ಸಹಜವಾಗಿತ್ತು.

ಬಿಜೆಪಿಯ ಕಲಬುರ್ಗಿ ಉತ್ತರ ಮತ್ತು ದಕ್ಷಿಣ ಮಂಡಳದವರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಯುವ ಮುಖಂಡ ಚಂದ್ರಕಾಂತ ಪಾಟೀಲ ನೇತೃತ್ವದಲ್ಲಿ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ನೇತೃತ್ವದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತ್ಯೇಕವಾಗಿ ಮೆರವಣಿಗೆ ನಡೆಸಲು ಮುಂದಾಗಿದ್ದರು.

ADVERTISEMENT

ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ರಾಜಕೀಯ ಪಕ್ಷಗಳು ಪ್ರತಿಭಟನೆ, ಧರಣಿ ನಡೆಸಲು ಅನುಮತಿ ನೀಡಿಲ್ಲ ಎಂಬ ಕಾರಣ ನೀಡಿ ಪೊಲೀಸರು ಅವರನ್ನು ತಡೆದರು.

ಪೊಲೀಸರ ಸಲಹೆ ಧಿಕ್ಕರಿಸಿ ಪ್ರತಿಭಟನೆಗೆ ಮುಂದಾದ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

‘ತಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಎಲ್ಲ ಬಗೆಯ ಸಾಲವನ್ನು ಮನ್ನಾ ಮಾಡುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆಯಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ಮಾತು ಬದಲಿಸಿದ್ದಾರೆ. ಅವರು ರೈತರ ಸಾಲ ಮನ್ನಾ ಮಾಡಲೇಬೇಕು. ಇಲ್ಲದಿದ್ದರೆ ಅಧಿಕಾರದಿಂದ ನಿರ್ಗಮಿಸಬೇಕು’ ಎಂದು ಆಗ್ರಹಿಸಿದರು.

‘ರೈತ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಮುಂದುವರೆದಿದ್ದರೆ ಇಷ್ಟೊತ್ತಿಗಾಗಲೇ ರೈತರ ಸಾಲ ಮನ್ನಾ ಆಗುತ್ತಿತ್ತು. ಆದರೆ, ಜನಾದೇಶಕ್ಕೆ ವಿರುದ್ಧವಾಗಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನವರು ಅಪವಿತ್ರ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ಮುಂದುವರಿಯದಂತೆ ಮಾಡಿದ್ದಾರೆ. ರೈತ ವಿರೋಧಿಯಾಗಿರುವ ಈ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ’ ಎಂದರು.

ಬಿಜೆಪಿ ರಾಜ್ಯ ಘಟಕದ ಸಹ ವಕ್ತಾರ ಶಶೀಲ್‌ ನಮೋಶಿ, ಸಂಗಣ್ಣ ಇಜೇರಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.