ADVERTISEMENT

ಜಾನಪದ ಸಂಗೀತ ಸಂಸ್ಕೃತಿಯ ಜೀವಾಳ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 7:36 IST
Last Updated 15 ಅಕ್ಟೋಬರ್ 2017, 7:36 IST

ಸೇಡಂ: ‘ಮೊಬೈಲ್, ವಿದ್ಯುನ್ಮಾನ ಯಂತ್ರಗಳ ಬಳಕೆಯಿಂದ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಗೀತ ನಶಿಸುತ್ತಿದೆ. ಸಂಗೀತ ಆಲಿಸುವವರಿದ್ದರೆ ಈ ಕ್ಷೇತ್ರ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ’ ಎಂದು ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠದಲ್ಲಿ ಈಚೆಗೆ ಅಕ್ಕಮಹಾದೇವಿ ಮಹಿಳಾ ಕಲಾ ಮಂಡಳಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಾನಪದ ಸಂಗೀತ ಸಂಸ್ಕೃತಿಯ ಜೀವಾಳವಾಗಿದೆ. ಗ್ರಾಮೀಣ ಭಾಗದ ಜನರು ಪ್ರೋತ್ಸಾಹಿಸಬೇಕಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಗಯ್ಯಸ್ವಾಮಿ ಬೊಮ್ಮನಳ್ಳಿ ಮಾತನಾಡಿ, ‘ಪೂರ್ವಜರು ಸಂಗೀತ ಕೇಳುತ್ತಿದ್ದರಿಂದ ಧೀರ್ಘಾಯುಷ್ಯ ಹೊಂದಿದ್ದರು. ಆಗ ಅಂತಹ ಜಾನಪದ ಹಾಡುಗಳು ಇದ್ದವು. ಇತ್ತೀಚಿನ ದಿನಗಳಲ್ಲಿ ಡಿ.ಜೆ ಹಾಡುಗಳು ಮಾನವನನ್ನು ಬಲಿ ತೆಗೆದುಕೊಳ್ಳುತ್ತಿವೆ’ ಎಂದು ವಿಷಾದಿಸಿದರು.

ADVERTISEMENT

ಶಿವಶರಣೆ ಅಕ್ಕಮಹಾದೇವಿ ಮಹಿಳಾ ಕಲಾ ಮಂಡಳಿ ಉಪಾಧ್ಯಕ್ಷೆ ಶಾರದಾಬಾಯಿ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಮಹಿಳಾ ಮಂಡಳಿ ಅಧ್ಯಕ್ಷೆ ರುಕ್ಮಿಣಿ ಕಾಳಗಿ, ದೇವಿಂದ್ರಪ್ಪ ಮಾಸ್ತರ, ಶಾಖಾಂಬರಿ, ಶರಣಯ್ಯಸ್ವಾಮಿ ಇದ್ದರು.

ಬಸವರಾಜ ಬಾಳಿ ತತ್ವಪದ, ಭವಾನಿ ಕೇಶ್ವಾರ ಜಾನಪದ, ರಕ್ಷಿತಾ ರುಸ್ತಾನಪೂರ, ಕೃಷ್ಣ ಪಂಚಾಳ ವಚನ, ಶೃತಿ ಆಡಕಿ ಭಕ್ತಿಗೀತೆಯನ್ನು ಹಾಡಿದರು. ಪ್ರವೀಣಕುಮಾರ ವಿಶ್ವಕರ್ಮ ತಬಲಾ ನುಡಿಸಿದರು. ಜಯಶ್ರೀ ಸ್ವಾಗತಿಸಿದರು. ಬಸವರಾಜ ಬಾಳಿ ನಿರೂಪಿಸಿ, ಮನೋಹರ್ ವಿಶ್ವಕರ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.