ADVERTISEMENT

‘ಮುಕ್ತಿಧಾಮ’ದಿಂದ ‘ಮುಕ್ತಿ’ಗೆ ಕಾಯ್ದ ನಿವಾಸಿಗಳು!

ಸುಮಿತ್ರಾ ಮಾಲಿಪಾಟೀಲ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಗುಲ್ಬರ್ಗ: ಬೆಳಗಾದರೆ ಸಾಕು. ಅಳು, ಚೀರಾಟ, ಗದ್ದಲ, ಹೆಣವನ್ನು ಸುಡುವು­ದರಿಂದ ಸಹಿಸಲು ಅಸಾಧ್ಯವಾದ ವಾಸನೆ, ಇದರಿಂದ ಸುತ್ತಣ ಪರಿಸರದ ನಿವಾಸಿಗಳಿಗೆ ಮಾನಸಿಕ ಕಿರಿಕಿರಿ, ಆರೋಗ್ಯದ ಮೇಲೆ ದುಷ್ಪರಿಣಾಮ.

–ಇವು ನಗರದ ಹೃದಯ ಭಾಗದ­ಲ್ಲಿರುವ ಸ್ಮಶಾನ ಪರಿಸರ­ದಲ್ಲಿರುವ ನಿವಾಸಿಗಳ ನಿತ್ಯದ ಗೋಳು. ಈ ಮುಕ್ತಿಧಾಮಗಳಿಂದ ‘ಮುಕ್ತಿ’ ಯಾವಾಗ ಎನ್ನುವುದು ನಿವಾಸಿಗಳು ಕೇಳುವ ಪ್ರಶ್ನೆಯಾಗಿದೆ.

ನಗರಪಾಲಿಕೆಯು ಶವಗಳ ಸಂಸ್ಕಾರ­ಕ್ಕಾಗಿ ನಗರದಲ್ಲಿ ಒಟ್ಟು 41 ಸ್ಮಶಾನ­ಗಳನ್ನು ನಿರ್ಮಿಸಿದೆ. ಹೀರಾಪುರ, ಪ್ರಕಾಶ ಚಿತ್ರಮಂದಿರದ ಎದುರು ಇರುವ ಭವಾನಿ ಸಮಾಜ ನಿಲಯ, ಬಸವನಗರ ಹರಿಜನ ವಾಡಾ, ಮಾಣಿ­ಕೇಶ್ವರಿ ಕಾಲೊನಿ, ಜೇವರ್ಗಿ ರಸ್ತೆಯ­ಲ್ಲಿರುವ ಚಿತ್ತಾರಿ ಸಾ ಮಿಲ್, ಚಂದ್ರ­ಶೇಖರ್ ಪಾಟೀಲ ಕ್ರೀಡಾಂಗಣ, ಚಂದನಕೇರಿ ಹನುಮಾನ್‌ ದೇವ­ಸ್ಥಾನದ ಹತ್ತಿರ, ಆರ್.ಟಿ.ಒ. ಕಚೇರಿ ಹಿಂದುಗಡೆ ಇರುವ ಈ ಸ್ಮಶಾನಗಳಲ್ಲಿ ಮಾತ್ರ ಶವಗಳನ್ನು ಸುಡಲಾಗುತ್ತದೆ.

ಶವ ದಫನ್‌ ಹಾಗೂ ಶವ ದಹನ ಸೂತಕದ ಪ್ರಕ್ರಿಯೆಗಳು. ಹೀಗಾಗಿ ಈ ಸಂದರ್ಭದಲ್ಲಿ ಇಡೀ ವಾತಾವರಣ ನಿಸ್ತೇಜ ಹಾಗೂ ನೀರವ ಆಗಿರುತ್ತದೆ. ಇದರಿಂದ  ಸ್ಮಶಾನಗಳ ಪರಿಸರದಲ್ಲಿ ವಾಸಿಸುವವರಲ್ಲಿಯೂ ಖಿನ್ನತೆ ಆವರಿಸುತ್ತಿದೆ. ಈ ಸ್ಮಶಾನಗಳು ನಗರದ ಹೃದಯ ಭಾಗದಲ್ಲಿರುವುದರಿಂದ ಇದರ ಸುತ್ತಲು ವಾಸಿಸುವ ಜನತೆಗೆ ಬೇರೆಡೆಗೆ ಮನೆಗಳನ್ನು ಸ್ಥಳಾಂತರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಅನೇಕ ನಿವೇಶನಗಳು ಖಾಲಿ ಉಳಿದಿವೆ. ನಿವೇಶನಗಳು ಸ್ಮಶಾನದ ಪಕ್ಕದಲ್ಲಿಯೇ ಇರುವುದರಿಂದ ಮನೆ ಕಟ್ಟಲು ಯಾರೂ ಮುಂದಾಗುತ್ತಿಲ್ಲ. ಖಾಲಿ ನಿವೇಶನದಲ್ಲಿ ಮುಳ್ಳು–ಕಂಟಿ ಬೆಳೆದು ಬಯಲು ಶೌಚಾಲಯಗಳಾಗಿ ಮಾರ್ಪಟ್ಟಿವೆ.


ಸ್ಮಶಾನದಲ್ಲಿ ಶವ ಸುಡುವುದರಿಂದ ಹೊಮ್ಮುವ ವಾಸನೆ ಒಂದೆಡೆಯಾದರೆ, ಈ ಶೌಚದಿಂದ ಬರುವ ದುರ್ವಾಸನೆ ಇನ್ನೊಂದೆಡೆ. ಈ ಎಲ್ಲದರಿಂದ ಇಲ್ಲಿಯ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.


‘ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ, ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುವುದು ಸ್ಮಶಾನದ ಸುತ್ತ ನೆಲೆಸಿರುವ ನಿವಾಸಿಗಳ ಬೇಸರ.

‘ಬೆಳಿಗ್ಗೆ ಎದ್ದು ದೇವರಚಿತ್ರ ನೋಡುವ ಬದಲು, ರುದ್ರಭೂಮಿ­ಯನ್ನು ನೋಡುವ ಅನಿವಾರ್ಯತೆ ಇದೆ. ವೈಜ್ಞಾನಿಕವಾಗಿ ಸ್ಮಶಾನ ಭೂಮಿಯಿಂದ ಕನಿಷ್ಠ ಒಂದು ಕಿಲೋಮೀಟರ್‌ ದೂರ ಇರುವುದು ಒಳಿತು’ ಎನ್ನುತ್ತಾರೆ ರುದ್ರಭೂಮಿ ಸಮೀಪದ ನಿವಾಸಿಗಳು.

ADVERTISEMENT

‘ಅನೈತಿಕ ಚಟುವಟಿಕೆಗಳ ತಾಣ’
ಇಲ್ಲಿನ ಸ್ಮಶಾನಕ್ಕೆ ಕಾವಲುಗಾರರಿಲ್ಲ. ಸಂಜೆಯಾದರೆ ಸಾಕು ಅನೈತಿಕ ಚಟುವಟಿಕೆಗಳ ತಾಣವಾಗುತ್ತದೆ.  ಬಯಲು ಶೌಚಾಲಯವಾಗಿಯೂ ಮಾರ್ಪಟ್ಟಿದೆ. ಅಧಿಕಾರಿಗಳು ಈ ಕಡೆ ಗಮನ ಹರಿಸಬೇಕು.  ಗಿಡ ಗಂಟಿಗಳನ್ನು ತೆರವುಗೊಳಿಸಿ ಉತ್ತಮವಾಗಿ ನಿರ್ವಹಣೆ ಮಾಡಬೇಕು.

– ಮಿರ್ಜಾ ಅಲ್ಫಾಖರ

‘ಚಿತಾಗಾರ ಸ್ಥಳಾಂತರಿಸಿ’

‘ಪ್ರತಿದಿನ ಬೆಳಗಾದರೆ ಸಾಕು 2-–-3 ಹೆಣಗಳನ್ನು ಇಲ್ಲಿ ಸುಡಲಾಗುತ್ತದೆ. ಮನೆ ಮುಂದೆಯೇ ಸ್ಮಶಾನ ಇರುವುದರಿಂದ ವಾಸನೆ ಸಹಿಸಲು ಆಗುತ್ತಿಲ್ಲ. ಇಡೀ ದಿನ ಬಾಗಿಲು, ಕಿಟಕಿ ಹಾಕಿಕೊಂಡೇ ಇರಬೇಕು. ಅಲ್ಲದೇ ಶವದ ಜೊತೆ ತರವ ಹೂ ಹಾರ, ಬಟ್ಟೆ, ಬೆಡ್ ಎಲ್ಲವನ್ನು ಇಲ್ಲಿಯೇ ಎಸೆದು ಹೋಗ್ತಾರೆ. ಚೀರಾಟ ಗಲಾಟೆ ಯಾವಾಗಲೂ ಇರುವುದರಿಂದ ನೆಮ್ಮದಿ ಇಲ್ಲದಂತಾಗಿದೆ. ಮಕ್ಕಳು ಹೆಣಗಳನ್ನು ನೋಡಿ ತುಂಬಾ ಹೆದರಿಕೊಳ್ಳುತ್ತಾರೆ. ನಗರದ ಮಧ್ಯ ಭಾಗದಲ್ಲಿರುವುದರಿಂದ ಸುತ್ತಲು ಇರುವ ಎಲ್ಲ ಮನೆಯವರು ಇದೇ ಸಮಸ್ಯೆಯನ್ನು ಎದುರಿಸುವಂತಾಗಿದೆ. ಈ ಚಿತಾಗಾರವನ್ನು ಬೇರಡೆಗೆ ಸ್ಥಳಾಂತರಿಸಿದರೆ ಒಳಿತು.

– ಪ್ರಭಾವತಿ ವಿ. ಗುತ್ತೇದಾರ್, ಜೇವರ್ಗಿ ಕಾಲೊನಿ

‘ಪರಿಸರ ಮಾಲಿನ್ಯ’

ಇಲ್ಲಿನ  ಚಿತಾಗಾರ ದಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದು ಪರಿಸರ ನಿವಾಸಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಸ್ಮಶಾನ­ದಿಂದಾಗಿಯೇ ಇಲ್ಲಿ ಜಾಗ ಖರೀದಿಸಿದವರೂ ಇಲ್ಲಿ ಬಂದು ನೆಲಸಲು ಇಷ್ಟಪಡುವುದಿಲ್ಲ.  ನಾವು ಅನಿವಾರ್ಯ­ವಾಗಿ ಇಲ್ಲಿ ವಾಸಿಸಬೇಕಾಗಿದೆ.
–-ಮಾಯಾ ಮಾಲಗಿ, ಗೃಹಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.