ADVERTISEMENT

ಲಿಂಗಾಯತ ‘ಒಳಸುಳಿ’ಗೆ ‘ಬಲಿ’

ಪ್ರತ್ಯೇಕ ಧರ್ಮ ಹೋರಾಟದಲ್ಲಿ ಪಾಲ್ಗೊಂಡಿದ್ದ ಮೂವರು ಶಾಸಕರು

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:37 IST
Last Updated 17 ಮೇ 2018, 5:37 IST

ಕಲಬುರ್ಗಿ: ಇದು ಕಾಕತಾಳಿಯ ಇರಬಹುದು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಕಾಂಗ್ರೆಸ್‌ನ ಮೂವರು ನಾಯಕರು ಸೋಲು ಅನುಭವಿಸಿದ್ದಾರೆ.

ಸೇಡಂನಲ್ಲಿ ಡಾ.ಶರಣಪ್ರಕಾಶ ಪಾಟೀಲ, ಆಳಂದದಲ್ಲಿ ಬಿ.ಆರ್‌.ಪಾಟೀಲ, ಕಲಬುರ್ಗಿ ದಕ್ಷಿಣದಲ್ಲಿ ಅಲ್ಲಮಪ್ರಭು ಪಾಟೀಲ ಪರಾಭವಗೊಂಡಿದ್ದಾರೆ. ಈ ಮೂವರೂ ಜಿಲ್ಲೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಸಕ್ರಿಯರಾಗಿದ್ದರು.

ಲಿಂಗಾಯತ ಹೋರಾಟಕ್ಕೆ ರಾಜ್ಯ ಸರ್ಕಾರ ನೇಮಕ ಮಾಡಿತ್ತು ಎನ್ನಲಾದ ಐವರು ಸಚಿವರ ತಂಡದಲ್ಲಿ ಡಾ.ಶರಣಪ್ರಕಾಶ ಪಾಟೀಲ ಸಹ ಇದ್ದರು. ಇತ್ತ ಹೋರಾಟ ನಡೆಸುತ್ತ, ಅತ್ತ ವೀರಶೈವ ಮತ್ತು ಲಿಂಗಾಯತ ಎರಡೂ ಬಣಗಳನ್ನು ಒಂದೇ ವೇದಿಕೆಗೆ ತಂದು ಮಾತುಕತೆ ನಡೆಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಲಬುರ್ಗಿಯಲ್ಲಿ ಲಿಂಗಾಯತ ಸಮಾವೇಶ ಸಂಘಟಿಸಿದ್ದರು. ಅಲ್ಲಮಪ್ರಭು ಪಾಟೀಲ ಅವರು ಡಾ.ಶರಣಪ್ರಕಾಶರೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಶ್ರಮಿಸಿದ್ದರು.

ADVERTISEMENT

ಆರಂಭದಲ್ಲಿ ಈ ಹೋರಾಟದಲ್ಲಿ ಸಕ್ರಿಯರಾಗಿದ್ದ ಬಿ.ಆರ್‌.ಪಾಟೀಲ, ಕೊನೆ ಗಳಿಗೆಯಲ್ಲಿ ‘ಮುಖ್ಯಮಂತ್ರಿ ಭರವಸೆ ನೀಡಿದ ನಂತರವೂ ಹೋರಾಟ ನಡೆಸುವುದು ಸರಿಯಲ್ಲ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಶರಣಪ್ರಕಾಶ ಹಾಗೂ ಅಲ್ಲಮಪ್ರಭು ಇಬ್ಬರೂ ವೀರಶೈವ–ಲಿಂಗಾಯತ ಅಭ್ಯರ್ಥಿಗಳ ವಿರುದ್ಧ ಸೋತರೆ, ಬಿ.ಆರ್‌.ಪಾಟೀಲ ಸೋತಿದ್ದು ಈಡಿಗ ಸಮುದಾಯದ ಸುಭಾಸ ಗುತ್ತೇದಾರ ವಿರುದ್ಧ.

ಆಳಂದ ಕ್ಷೇತ್ರದಲ್ಲಿ ಲಿಂಗಾಯತ ವಿಷಯ ಕೆಲಸ ಮಾಡಿಲ್ಲ ಎಂದು ಹೇಳ ಬಹುದಾದರೂ ಅಲ್ಲಿ ಸಂಯುಕ್ತ ಜನತಾ ದಳದ ಅಭ್ಯರ್ಥಿ ಅರುಣಕುಮಾರ ಚನ್ನಬಸಪ್ಪ ಪಾಟೀಲ ಅವರು ಪಡೆದ ಮತಗಳು (2,213) ಬಿ.ಆರ್‌.ಪಾಟೀಲರಿಗೆ ‘ದುಬಾರಿ’ ಆದವು.

ಇದರ ಮುನ್ಸೂಚನೆ ಅರಿತಿದ್ದ ಬಿ.ಆರ್‌.ಪಾಟೀಲರು ಮತದಾನದ ಮುನ್ನಾದಿನ ಪತ್ರಿಕಾಗೋಷ್ಠಿ ನಡೆಸಿ, ‘ಲಿಂಗಾಯತ ಮತ ವಿಭಜನೆ ಮಾಡಲು ಬಿಜೆಪಿ ಅಭ್ಯರ್ಥಿಯೇ ಅರುಣಕುಮಾರ ಅವರನ್ನು ಕಣಕ್ಕಿಳಿಸಿದ್ದಾರೆ’ ಎಂದು ದೂರಿದ್ದರು.

ಹಾಗೆ ನೋಡಿದರೆ ಪ್ರತ್ಯೇಕ ಲಿಂಗಾಯತ ಧರ್ಮ ಈ ಚುನಾವಣೆ ಪ್ರಚಾರದಲ್ಲಿ ವಿಷಯವೇ ಆಗಿರಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿಗಳಾರೂ ಈ ವಿಷಯದಲ್ಲಿ ಮತಯಾಚಿಸಿರಲಿಲ್ಲ. ಆದರೆ, ಅವರ ವಿರೋಧಿ ಪಾಳೆಯ ಈ ಲಿಂಗಾಯತ ಅಸ್ಮಿತೆಯನ್ನು ಬಳಸಿಕೊಂಡಿತು. ಬಿಜೆಪಿ ಇವರ ವಿರುದ್ಧ ಮುಗಿಬಿದ್ದಿತ್ತು.

ಸೇಡಂ ಕ್ಷೇತ್ರದಲ್ಲಿ ಶರಣಪ್ರಕಾಶರನ್ನು ಮಣಿಸಿದ ಬಿಜೆಪಿಯ ರಾಜಕುಮಾರ ಪಾಟೀಲ ತೆಲ್ಕೂರ ಅವರು ಫಲಿತಾಂಶ ಬಂದ ನಂತರ ನೀಡಿದ  ಮೊದಲ ಪ್ರತಿಕ್ರಿಯೆ ‘ಇದು ಧರ್ಮಕ್ಕೆ ಸಿಕ್ಕ ಜಯ’ ಎಂಬುದಾಗಿತ್ತು. ಪ್ರತ್ಯೇಕ ಧರ್ಮ ಹೋರಾಟವೇ ಶರಣಪ್ರಕಾಶರಿಗೆ ಮುಳುವಾಯಿತು ಎಂಬ ವ್ಯಾಖ್ಯಾನ ಅವರದ್ದಾಗಿತ್ತು.

ಕಾಂಗ್ರೆಸ್‌ನಿಂದ ಒಬ್ಬರೇ ಆಯ್ಕೆ: ಎಂ.ವೈ. ಪಾಟೀಲ ಅವರು ಅಫಜಲಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಏಕೈಕ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಸಕ ಇವರು. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಸಂದರ್ಭದಲ್ಲಿ ಇವರು ಬಿಜೆಪಿಯಲ್ಲಿದ್ದರು. ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ಗೆ ಬಂದು ಸ್ಪರ್ಧಿಸಿದ್ದರು.

ಇನ್ನು ಬಿಜೆಪಿಯಿಂದ ವೀರಶೈವ– ಲಿಂಗಾಯತ ಸಮುದಾಯದ ಇಬ್ಬರು (ದತ್ತಾತ್ರೇಯ ಪಾಟೀಲ, ರಾಜಕುಮಾರ ಪಾಟೀಲ ತೆಲ್ಕೂರ) ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.