ADVERTISEMENT

ವಾಂತಿಭೇದಿ ಉಲ್ಬಣ: 30ಕ್ಕೂ ಹೆಚ್ಚು ಜನ ಅಸ್ವಸ್ಥ

ತೆಲಂಗಾಣದ ಮಹಾಕಾಳಿ ಜಾತ್ರೆ ಪರಿಣಾಮ ಶಂಕೆ; ಚೌಕಿ ತಾಂಡಾದಲ್ಲಿ ಕಾಲರಾ ಭೀತಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 9:22 IST
Last Updated 6 ಏಪ್ರಿಲ್ 2018, 9:22 IST
ಚೌಕಿ ತಾಂಡಾದಲ್ಲಿ ವಾಂತಿಭೇದಿಯಿಂದ ಅಸ್ವಸ್ಥರಾದವರಿಗೆ ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಚೌಕಿ ತಾಂಡಾದಲ್ಲಿ ವಾಂತಿಭೇದಿಯಿಂದ ಅಸ್ವಸ್ಥರಾದವರಿಗೆ ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ   

ಚಿಂಚೋಳಿ: ತಾಲ್ಲೂಕಿನ ಚೌಕಿ ತಾಂಡಾದಲ್ಲಿ ವಾಂತಿಭೇದಿ ಪ್ರಕರಣಗಳು ವರದಿಯಾಗಿವೆ. 4 ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಮಂಗಳವಾರದಿಂದ ತಾಂಡಾದಲ್ಲಿ ವಾಂತಿಭೇದಿ ಪ್ರಕರಣ ವರದಿಯಾಗಿದ್ದು, ಬುಧವಾರ ಮತ್ತು ಗುರುವಾರ ಅದು ಉಲ್ಬಣಿಸಿದೆ.ಜತೆಗೆ, ನೆರೆಯ ರೋಹಿಲಾ ತಾಂಡಾದಿಂದ 2 ಹಾಗೂ ರಾಣಾಪುರ ತಾಂಡಾದ ಒಬ್ಬರು ವಾಂತಿಭೇದಿಯಿಂದ ಅಸ್ವಸ್ಥರಾಗಿ ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಕೆಲವರು ಬೀದರ್‌ ಮತ್ತು ಕಲಬುರ್ಗಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ.

‘ಸೋಮವಾರ ತೆಲಂಗಾಣದ ಮಹಿಬೂಬನಗರ ಬಳಿ ಬರುವ ಮಜ್ಜಿ ಗ್ರಾಮದ ಮಹಾಕಾಳಿ ಜಾತ್ರೆಗೆ ಚೌಕಿ ತಾಂಡಾದ ಜನರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬರುವಾಗ ಅಲ್ಲಿಂದ ಮಾಂಸ ತಂದು ಮನೆಯಲ್ಲಿ ಅಡುಗೆ ಮಾಡಿ ಸೇವಿಸಿದ್ದಾರೆ ಎನ್ನಲಾಗಿದೆ. ಇದರಿಂದಲೇ ವಾಂತಿಭೇದಿ ಉಂಟಾಗಿರುವ ಸಾಧ್ಯತೆ ಇದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚೌಕಿ ತಾಂಡಾದಲ್ಲಿ ಉಂಟಾಗಿರುವ ವಾಂತಿಭೇದಿ ಪೀಡಿತರಿಗೆ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ತಾಂಡಾದಲ್ಲಿ ಚಿಮ್ಮನಚೋಡ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವನಾಗಪ್ಪ ಪಾಟೀಲರನ್ನು ನಿಯೋಜಿಸಿದ್ದು ಅಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

‘ಕೆಲವರನ್ನು ಚಿಮ್ಮನಚೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾದವರಿಗೆ ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗೆ ಕರೆ ತರಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಂಪೂರ್ಣ ಹತೋಟಿಗೆ ಬರಲು ಇನ್ನೂ 2/3 ದಿನ ಬೇಕಾಗುತ್ತದೆ. ಯಾರೂ ಗಾಬರಿಯಾಗಬೇಕಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹಮದ್‌ ಗಫಾರ್‌ ತಿಳಿಸಿದ್ದಾರೆ.

‘40 ಸಾವಿರ ಹ್ಯಾಲೊಜಿನ್‌ ಮಾತ್ರೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ನೀರನ್ನು ಕಾಯಿಸಿ, ಆರಿಸಿ ಸೇವಿಸಬೇಕೆಂದು ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಕಾಲರಾ ನಿಯಂತ್ರಣ ತಂಡ ಭೇಟಿ: ತಾಂಡಾಕ್ಕೆ ಕಾಲರಾ ನಿಯಂತ್ರಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್‌ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ, 18 ನೀರಿನ ಮಾದರಿ ಮತ್ತು 6 ಸ್ಟೂಲ್‌(ಮಲ) ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ.ಪ್ರಾಥಮಿಕ ಮಾಹಿತಿಯಂತೆ ನೀರಿನ ದೋಷ ಕಂಡುಬಂದಿಲ್ಲ.ನೀರು ಮತ್ತು ಮಲ ಪರೀಕ್ಷೆಯ ವರದಿ ಬಂದ ಮೇಲೆ ನಿಖರ ಕಾರಣ ತಿಳಿಯಲಿದೆ.

**

ತಾಂಡಾಕ್ಕೆ ಕಾಲರಾ ನಿಯಂತ್ರಣ ಅಧಿಕಾರಿ ಡಾ.ಶರಣಬಸಪ್ಪ ಗಣಜಲ ಖೇಡ್‌ ನೇತೃತ್ವದ ತಂಡ ಭೇಟಿ ನೀಡಿ, ನೀರು ಮತ್ತು ಮಲ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ - ಡಾ.ಸಂತೋಷ ಪಾಟೀಲ, ವೈದ್ಯಾಧಿಕಾರಿ, ತಾಲ್ಲೂಕು ಆಸ್ಪತ್ರೆ ಚಿಂಚೋಳಿ.

**

ವಾಂತಿಭೇದಿ ಪೀಡಿತರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತರಲು ತಾಲ್ಲೂಕು ಆಸ್ಪತ್ರೆಯಿಂದ ಅಂಬುಲೆನ್ಸ್‌ ಕಳುಹಿಸಲಾಗಿದ್ದು, ಅಸ್ವಸ್ಥರನ್ನು ಕಳುಹಿಸಿಕೊಡಲಾಗಿದೆ - ಹೀರಾಸಿಂಗ್‌ ರಾಠೋಡ್‌,ಗ್ರಾ.ಪಂ ಮಾಜಿ ಅಧ್ಯಕ್ಷ, ಚಿಮ್ಮನಚೋಡ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.