ADVERTISEMENT

ಕೆಕೆಆರ್‌ಡಿಬಿಯ ₹ 100 ಕೋಟಿ ಸಾಂಸ್ಕೃತಿಕ ಸಂಘಕ್ಕೆ ಹಂಚಿಕೆ?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 3:16 IST
Last Updated 30 ಮಾರ್ಚ್ 2021, 3:16 IST

ಕಲಬುರ್ಗಿ: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಮಂಜೂರು ಮಾಡಿದ್ದ ₹ 1131 ಅನುದಾನದಲ್ಲಿಯೇ ₹ 100 ಕೋಟಿ ಅನುದಾನವನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆ ಮೂಲಕ ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ಅಧ್ಯಕ್ಷರಾಗಿರುವ ಸಾಂಸ್ಕೃತಿಕ ಸಂಘಕ್ಕೆ ಪ್ರತ್ಯೇಕವಾಗಿ ₹ 500 ಕೋಟಿ ಹಂಚಿಕೆ ಮಾಡಲಾಗುವುದು ಎಂಬ ಸರ್ಕಾರದ ಭರವಸೆ ಹುಸಿಯಾಗಿದೆ.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಕೆಕೆಆರ್‌ಡಿಬಿಗೆ ₹ 1131 ಕೋಟಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಇರುವುದರಿಂದ ಮಂಡಳಿಗೆ ಹಂಚಿಕೆಯಾದ ಹಣದಲ್ಲಿಯೇ ₹ 100 ಕೋಟಿ ಸಾಂಸ್ಕೃತಿಕ ಸಂಘಕ್ಕೆ ನೀಡಲು ಉದ್ದೇಶಿಸಿದೆ. ಈ ಕುರಿತು ಯೋಜನಾ ಇಲಾಖೆಯು ಅಗತ್ಯ ಕಡತವನ್ನೂ ಸಿದ್ಧಪಡಿಸಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸರ್ಕಾರದ ಈ ತೀರ್ಮಾನದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ್‌ ಖರ್ಗೆ, ‘ಕೆಕೆಆರ್‌ಡಿಬಿಗೆ ಹಂಚಿಕೆಯಾದ ಅನುದಾನವನ್ನು ಹೊರತುಪಡಿಸಿ ಬೇರೆ ಅನುದಾನ ನೀಡಲಾಗುವುದು ಎಂದು ಸರ್ಕಾರವೇ ಭರವಸೆ ನೀಡಿತ್ತು. ಆದರೆ, ಇದೀಗ ಸದ್ದಿಲ್ಲದಂತೆ ಕೆಕೆಆರ್‌ಡಿಬಿ ಹಣವನ್ನು ಸಾಂಸ್ಕೃತಿಕ ಸಂಘಕ್ಕೆ ನೀಡುವ ಉದ್ದೇಶವೇನು? ಅಷ್ಟಕ್ಕೂ ಕಳೆದ ಒಂದು ವರ್ಷದಲ್ಲಿ ಸಂಘ ಮಾಡಿದ ಕೆಲಸ ಕಾರ್ಯಗಳೇನು’ ಎಂದು ಪ್ರಶ್ನಿಸಿದರು.

‘ಸಾಂಸ್ಕೃತಿಕ ಸಂಘಕ್ಕೆ ₹ 100 ಕೋಟಿ ಹಂಚಿಕೆಯಾದರೆ ಕೆಕೆಆರ್‌ಡಿಬಿಗೆ ಉಳಿಯುವುದು ₹ 1031 ಕೋಟಿ. ಮೊದಲೇ ಕೊರೊನಾ ನೆಪ ನೀಡಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲಾಗಿದ್ದು, ಇಷ್ಟು ಕಡಿಮೆ ಹಣದಲ್ಲಿ ಜಿಲ್ಲೆಗಳ ಮೂಲಸೌಕರ್ಯ ಅಭಿವೃದ್ಧಿ ಸಾಧ್ಯವೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.