ಜೇವರ್ಗಿ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಸವಲತ್ತುಗಳನ್ನು ನೀಡುವುದರ ಮೂಲಕ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ’ ಎಂದು ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ದಿನೇಶ ಎಂ. ತಿಳಿಸಿದರು.
ಪಟ್ಟಣದ ಬಸವೇಶ್ವರ ನಗರದ ರಾಘವೇಂದ್ರ ಸ್ವಾಮಿಗಳ ದೇಗುಲದ ಜೀರ್ಣೋದ್ಧಾರಕ್ಕೆ ಶುಕ್ರವಾರ ₹2 ಲಕ್ಷ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಅವರು ಮಾತನಾಡಿದರು. ‘ಧರ್ಮಸ್ಥಳ ಸಂಸ್ಥೆ ಯಾವುದೆ ಜಾತಿ ಭೇದವಿಲ್ಲದೆ ಎಲ್ಲ ವರ್ಗದ ಜನರನ್ನು ಒಳಗೊಂಡಿದ್ದು, ಮಹಿಳೆಯರಲ್ಲಿ ಉಳಿತಾಯದ ಮನೋಭಾವನೆ ಬೆಳೆಸುವುದರ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತಿದೆ. ಜತೆಗೆ ಕೆರೆ ಹೂಳೆತ್ತುವುದು, ನಿರ್ಗತಿಕರಿಗೆ ಮನೆ ನಿರ್ಮಿಸುವುದು, ಆಹಾರ, ಬಟ್ಟೆ ಒದಗಿಸುವುದು, ಅಂಗವಿಕಲರಿಗೆ ಅಗತ್ಯ ಸಲಕರಣೆ ವಿತರಣೆ, ಮಕ್ಕಳ ವೃತ್ತಿಪರ ಕೋರ್ಸ್‌ಗಳಿಗೆ ಶಿಷ್ಯ ವೇತನ ನೀಡುವುದು, ಶಾಲಾ ಕೊಠಡಿ, ಶೌಚಗೃಹ, ಕುಡಿಯುವ ನೀರಿನ ಸೌಕರ್ಯ, ಬೆಂಚ್ ನೀಡುವುದು, ಸಮುದಾಯ ಭವನ ಹಾಗೂ ದೇಗುಲಗಳ ಜೀರ್ಣೋದ್ದಾರಕ್ಕೆ ಪ್ರೋತ್ಸಾಹ ಧನ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿದೆ. ಇದೀಗ ರಾಯರ ದೇಗುಲಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದ್ದರಿಂದ ಯೋಜನೆ ವತಿಯಿಂದ ದೊರಕುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ರಾಯರ ಮಠದ ಟ್ರಸ್ಟ್ ಅಧ್ಯಕ್ಷ ರಮೇಶ್ ಬಾಬು ವಕೀಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಳ್ಳೆಪ್ಪಚಾರ್ಯ ಜೋಶಿ, ಸಂಸ್ಥೆಯ ಮೇಲ್ವಿಚಾರಕಿ ಮಮತಾ, ಸುರೇಶ ಕುಲಕರ್ಣಿ ಯಾಳವಾರ, ದತ್ತಾತ್ರೇಯ ಕುಲಕರ್ಣಿ ಕೋಳಕೂರ, ಪಿ.ಎಂ.ಮಠ, ಐ.ಎಸ್.ಹಿರೇಮಠ ವಡಗೇರಾ, ಶ್ಯಾಮರಾವ ಕುಲಕರ್ಣಿ ರೇವನೂರ, ಲಕ್ಷ್ಮಿಕಾಂತ ಕುಲಕರ್ಣಿ ಹೋತಿನಮಡು, ಗುರುರಾಜ ಪೊದ್ದಾರ, ಕಲ್ಯಾಣರಾವ ಕಣಮೇಶ್ವರ, ಸಪ್ಪಣ್ಣ ಕೂಟನೂರ, ಪಾಂಡುರಂಗ ಅವರಾದ, ಭೀಮಸೇನ ಕುಲಕರ್ಣಿ ಹಾಗೂ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.