ADVERTISEMENT

ಕಸ ಸಂಗ್ರಹಣೆಗೆ ‘ಸ್ಟೀಲ್ ಡಬ್ಬಿ’

ಮಹಾನಗರ ಪಾಲಿಕೆಯಿಂದ ಜನದಟ್ಟಣೆ ಸ್ಥಳಗಳಲ್ಲಿ ಅಳವಡಿಕೆ

ಸುಭಾಸ ಎಸ್.ಮಂಗಳೂರ
Published 11 ಜನವರಿ 2018, 8:38 IST
Last Updated 11 ಜನವರಿ 2018, 8:38 IST
ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಮಹಾನಗರ ಪಾಲಿಕೆ ಅಳವಡಿಸಿರುವ ಸ್ಟೀಲಿನ ಕಸದ ಡಬ್ಬಿ
ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಮಹಾನಗರ ಪಾಲಿಕೆ ಅಳವಡಿಸಿರುವ ಸ್ಟೀಲಿನ ಕಸದ ಡಬ್ಬಿ   

ಕಲಬುರ್ಗಿ: ಸಾರ್ವಜನಿಕ ದಟ್ಟಣೆ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಮಹಾನಗರ ಪಾಲಿಕೆಯು ಸ್ಟೀಲ್‌ನಿಂದ ತಯಾರಿಸಿದ ಗುಣಮಟ್ಟದ ಡಬ್ಬಿಗಳನ್ನು ಅಳವಡಿಸಲು ಮುಂದಾಗಿದೆ.

‘ಸ್ವಚ್ಛ ಸರ್ವೇಕ್ಷಣೆ’ ಮತ್ತು ‘ಸ್ವಚ್ಛ ಭಾರತ’ ಅಭಿಯಾನದ ಅಂಗವಾಗಿ ಹಲವು ವಿನೂತನ ಕ್ರಮಗಳನ್ನು ಕೈಗೊಂಡಿರುವ ಪಾಲಿಕೆಯು ಈಗ ಬಾಳಿಕೆ ಬರುವ ಡಬ್ಬಿಗಳನ್ನು ಅಳವಡಿಸುತ್ತಿದೆ.

ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಹಾಕಲು ಎರಡು ಡಬ್ಬಿಗಳನ್ನು ಒಳಗೊಂಡ ಒಂದು ಘಟಕವನ್ನು ಒಂದು ಸ್ಥಳದಲ್ಲಿ ಅಳವಡಿಸಲಾಗುತ್ತಿದೆ. ಸೂಪರ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಈಗಾಗಲೇ ಈ ಡಬ್ಬಿಗಳನ್ನು ಅಳವಡಿಸಲಾಗಿದೆ.

ADVERTISEMENT

‘ಜನರು ಹೆಚ್ಚು ಓಡಾಡುವ ಮತ್ತು ಕಸದ ಕಂಟೇನರ್‌ಗಳನ್ನು ಇರಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಸ್ಟೀಲ್ ಡಬ್ಬಿಗಳನ್ನು ಅಳವಡಿಸಲಾಗುತ್ತಿದೆ. ಇ–ಟೆಂಡರ್ ಮೂಲಕ ಕಂಪನಿಯೊಂದಕ್ಕೆ ಈ ಕೆಲಸ ವಹಿಸಲಾಗಿದೆ. ಪಾಲಿಕೆಯ 14ನೇ ಹಣಕಾಸು ಯೋಜನೆಯಡಿ ಬಾಕಿ ಉಳಿದಿದ್ದ ₹50 ಲಕ್ಷ ಅನು
ದಾನದಲ್ಲಿ ಈ ಕೆಲಸವನ್ನು ಮಾಡಲಾಗುತ್ತಿದೆ. ಒಂದು ಘಟಕದ ತಯಾರಿಕೆ, ಅಳವಡಿಕೆ ಸೇರಿ ಸುಮಾರು ₹15ಸಾವಿರ ವೆಚ್ಚ ತಗುಲುತ್ತದೆ. ಸದ್ಯ 25 ಕಡೆ ಇವುಗಳನ್ನು ಅಳವಡಿಸಲಾಗುತ್ತಿದ್ದು, ನಗರದಾದ್ಯಂತ ಒಟ್ಟು 330 ಸ್ಥಳಗಳನ್ನು ಗುರುತಿಸಲಾಗಿದೆ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಮುನಾಫ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನದಟ್ಟಣೆ ಹೆಚ್ಚಾಗಿರುವ ಸ್ಥಳಗಳಲ್ಲಿ ಇವುಗಳನ್ನು ಅಳವಡಿಸುವುದರಿಂದ ಜನರಲ್ಲಿ ಜಾಗೃತಿ ಮೂಡಿಸಿದಂತಾಗುತ್ತದೆ. ಅಲ್ಲದೆ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸಬಹುದಾಗಿದೆ. ಸ್ವಚ್ಛ ಸರ್ವೇಕ್ಷಣಾ ಅಂಗವಾಗಿ ಈಗಾಗಲೇ ನಗರದ ಆರು ಕಡೆ ಇ–ಶೌಚಾಲಯಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಮತ್ತು ಮತ್ತು ಸ್ವಚ್ಛತೆ ಕಾಪಾಡುವುದು ನಮ್ಮ ಆದ್ಯತೆಯಾಗಿದೆ’ ಎಂದು ಹೇಳಿದರು.

‘ಈ ಹಿಂದೆ ಪ್ಲಾಸ್ಟಿಕ್ ಡಬ್ಬಿಗಳನ್ನು ಅಳವಡಿಸಲಾಗಿತ್ತು. ಕೆಲವರು ಅದರಲ್ಲಿ ಸಂಗ್ರಹಗೊಂಡಿದ್ದ ಕಸಕ್ಕೆ ಬೆಂಕಿ ಹಚ್ಚಿದ್ದರಿಂದ ಹಾಗೂ ಇನ್ನು ಕೆಲವರು ಬೀಡಿ ಮತ್ತು ಸಿಗರೇಟ್ ಸೇರಿ ಎಸೆದಿದ್ದರಿಂದ ಅವು ಹಾನಿಗೊಳಗಾಗಿವೆ. ಹೀಗಾಗಿ ದೀರ್ಘಕಾಲ ಬಾಳಿಕೆ ಬರುವ ಡಬ್ಬಿಗಳನ್ನು ಬಳಸಲಾಗುತ್ತಿದೆ’ ಎಂದು ತಿಳಿಸಿದರು.

*
ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಕಸದ ಡಬ್ಬಿಗಳಲ್ಲೇ ಹಾಕಬೇಕು. ಸ್ವಚ್ಛತೆ ಕಾಪಾಡಲು ಸಹಕರಿಸಬೇಕು.
–ಮುನಾಫ್ ಪಟೇಲ್, ಪರಿಸರ ಎಂಜಿನಿಯರ್, ಮಹಾನಗರ ಪಾಲಿಕೆ

*
ಈ ಹಿಂದೆ ಪ್ಲಾಸ್ಟಿಕ್ ಡಬ್ಬಿಗಳನ್ನು ಅಳವಡಿಸಲಾಗಿತ್ತು. ಈಗ ಸ್ಟೀಲ್‌ನಿಂದ ತಯಾರಿಸಿರುವ ಮತ್ತು ಗುಣಮಟ್ಟದಿಂದ ಕೂಡಿರುವ ಡಬ್ಬಿಗಳನ್ನು ಅಳವಡಿಸಲಾಗಿದೆ.
ಸುಷ್ಮಾ ಸಾಗರ, ಪರಿಸರ ಎಂಜಿನಿಯರ್, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.