ADVERTISEMENT

ಎಸಿಬಿ ದಾಳಿ: ಗುತ್ತಿಗೆದಾರ ಕೂಡ ಆಗಿದ್ರಾ ಪೈಪ್‌ನಲ್ಲಿ ಹಣ ಇಟ್ಟಿದ್ದ ಎಇ ಶಾಂತಗೌಡ?

ಎಸಿಬಿ ದಾಳಿಗೊಳಗಾದ ಹಂಗರಗಾದ ಶಾಂತಗೌಡ ಬಿರಾದಾರ ಕುರಿತು ಅಚ್ಚರಿಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 2:22 IST
Last Updated 25 ನವೆಂಬರ್ 2021, 2:22 IST
ಶಾಂತಗೌಡ ಬಿರಾದಾರ
ಶಾಂತಗೌಡ ಬಿರಾದಾರ    

ಕಲಬುರಗಿ: ಜಿಲ್ಲೆಯ ಇಬ್ಬರು ಮಾಜಿ ಶಾಸಕರ ಆಪ್ತರಾಗಿರುವ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಶಾಂತಗೌಡ ಬಿರಾದಾರ ಅವರ ಬಗ್ಗೆ ಬಗೆದಷ್ಟೂ ಅಚ್ಚರಿಯ ಮಾಹಿತಿಗಳು ಹೊರ ಬಿದ್ದಿವೆ.

ಲೋಕೋಪಯೋಗಿ ಇಲಾಖೆಯ ಜೇವರ್ಗಿ ಉಪ ವಿಭಾಗದಲ್ಲಿ 11 ವರ್ಷಗಳಿಂದ ಕಿರಿಯ ಎಂಜಿನಿಯರ್‌ ಹುದ್ದೆಯಲ್ಲಿರುವ ಶಾಂತಗೌಡ ಬಿರಾದಾರ ಯಡ್ರಾಮಿ ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದವರು. ಹೀಗಾಗಿ ಸ್ವಂತ ತಾಲ್ಲೂಕಿನಲ್ಲೇ ಬೇನಾಮಿಯಾಗಿ ಹಲವು ಕಾಮಗಾರಿಗಳನ್ನು ಗುತ್ತಿಗೆ ಹಿಡಿದಿದ್ದರು ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ತಮ್ಮ ಫಾರ್ಮ್ ಹೌಸ್‌ನಲ್ಲಿಯೇ ಕಡಿ ತಯಾರಿಸುವ ಯಂತ್ರವನ್ನು ಇರಿಸಿಕೊಂಡಿರುವುದು ತಪಾಸಣೆ ವೇಳೆ ಗೊತ್ತಾಗಿದೆ ಎನ್ನುವುದು ಎಸಿಬಿ ಮೂಲಗಳ ಮಾಹಿತಿ.

ಅಧಿಕಾರ ವ್ಯಾಪ್ತಿ ಮೀರಿ ಕೆಲಸ: ಎರಡು ಪ್ರಮುಖ ಪಕ್ಷಗಳ ಜಿಲ್ಲಾ ಮುಖಂಡರ ಆಪ್ತ ವಲಯದಲ್ಲಿ ಇರುವುದರಿಂದ ಯಾವ ಸರ್ಕಾರ ಬಂದರೂ ಶಾಂತಗೌಡ ಅವರಿಗೆ ಯಾವ ತೊಂದರೆಯೂ ಆಗುತ್ತಿಲ್ಲ ಎಂಬುದು ಲೋಕೋಪಯೋಗಿ ಇಲಾಖೆಯ ಅಂಗಳದಲ್ಲಿ ಕೇಳಿ ಬರುತ್ತಿರುವ ಮಾತು.

ADVERTISEMENT

ಹುದ್ದೆಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದರೂ ಜೇವರ್ಗಿ ಉಪ ವಿಭಾಗದ ಕಾಮಗಾರಿಗಳ ಉಸ್ತುವಾರಿ ಯಾವ ಜೆಇಗೆ ವಹಿಸಬೇಕು ಎಂಬ ತೀರ್ಮಾನವನ್ನು ಇವರೇ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ತಾಲ್ಲೂಕು ಮಟ್ಟದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರರಿಗೆ ಇಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವಿದ್ದರೂ ಶಾಂತಗೌಡರು ಆ ವಿಚಾರದಲ್ಲಿ ತಾವು ಹೇಳಿದ ಮಾತೇ ನಡೆಯುವಂತೆ ನೋಡಿಕೊಳ್ಳುತ್ತಿದ್ದರು ಎಂದು ಇಲಾಖೆಯನ್ನು ಬಲ್ಲ ಮುಖಂಡರೊಬ್ಬರು ಮಾಹಿತಿ ನೀಡಿದರು.

ಹೊಲಕ್ಕೆ ಸಿಮೆಂಟ್‌ ರಸ್ತೆ ನಿರ್ಮಾಣ!

ಯಡ್ರಾಮಿ: ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದವರಾದ ಶಾಂತಗೌಡ ಬಿರಾದಾರ ಅವರು ಗ್ರಾಮದ ಹೊರವಲಯದಲ್ಲಿರುವ ಫಾರ್ಮ್‌ ಹೌಸ್‌ನಲ್ಲಿ ಸಿ.ಸಿ. ರಸ್ತೆ ಮಾಡಿಸಿಕೊಂಡಿದ್ದನ್ನು ನೋಡಿ ದಾಳಿಗೆ ಬಂದಿದ್ದ ಎಸಿಬಿ ಅಧಿಕಾರಿಗಳು ಗಾಬರಿಯಾದರು. ಹಲವು ಗ್ರಾಮಗಳ ಮುಖ್ಯ ರಸ್ತೆಗೇ ಇನ್ನೂ ಸಿ.ಸಿ. ರಸ್ತೆ ಬಂದಿಲ್ಲ. ಕಿರಿಯ ಎಂಜಿನಿಯರ್‌ ತಮ್ಮ ಫಾರ್ಮ್‌ಹೌಸ್‌ಗೆ ಸಿಮೆಂಟ್ ರಸ್ತೆ ಮಾಡಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿಯೇ ತಮ್ಮ ಮಗಳ ಹೆಸರಿನಲ್ಲಿ ಶಾಲೆಯನ್ನೂ ಆರಂಭಿಸಿದ್ದಾರೆ. ಅದಕ್ಕಾಗಿ ಒಂದು ಶಾಲಾ ಬಸ್‌ ಖರೀದಿಸಿದ್ದಾರೆ ಎನ್ನುವುದು ಎಸಿಬಿ ಮೂಲಗಳ ಮಾಹಿತಿ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.