ಕಲಬುರಗಿ: ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೆಲ ವಾರ್ಡ್‌ಗಳಲ್ಲಿ ನೀರೇ ಬಾರದಿದ್ದರೆ ಇನ್ನೂ ಕೆಲ ವಾರ್ಡ್‌ಗಳಲ್ಲಿ ಕಲುಷಿತ ನೀರು, ಹುಳು ಮಿಶ್ರಿತ ನೀರು ಜನರ ಜೀವಕ್ಕೆ ಕುತ್ತು ತಂದಿಟ್ಟಿದೆ.
ಮಿಸ್ಬಾನಗರದ ಜೆಡ್ಡಾ ಕಾಲೊನಿಯಲ್ಲಿನ ಮಹಾನಗರ ಪಾಲಿಕೆ ನಳದಲ್ಲಿ ಕಳೆದ ಒಂದು ತಿಂಗಳಿಂದ ಹುಳು ಮಿಶ್ರಿತ ನೀರು ಬರುತ್ತಿದೆ. ಇಲ್ಲಿ ನೀರು ಪೂರೈಕೆ ಜವಾಬ್ದಾರಿಯನ್ನು ಎಲ್ ಅಂಡ್ ಟಿ ಕಂಪನಿ ವಹಿಸಿಕೊಂಡಿದೆ.
‘ಯಾವುದೋ ಚರಂಡಿ ನೀರಿನ ಪೈಪ್‌ಲೈನ್ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಜೋಡಿಯಾಗಿದ್ದರಿಂದ ಸಮಸ್ಯೆಯಾಗಿರಬಹುದು. ಕಳೆದ ವರ್ಷ ವಾಸನೆಯುಕ್ತ ನೀರು ಪೂರೈಕೆಯಾಗುತ್ತಿತ್ತು. ಈ ವರ್ಷ ಹುಳುಗಳು ಬರುತ್ತಿವೆ’ ಎಂದು ಕಾಲೊನಿ ನಿವಾಸಿಗಳು ಹೇಳುತ್ತಾರೆ.
‘ನಮ್ಮ ಕಾಲೊನಿಗೆ ನೀರು ಬಿಡಲು ಬರುವ ವ್ಯಕ್ತಿಗೆ ಈ ಬಗ್ಗೆ ಹೇಳಿದಾಗ ‘ಎಲ್ ಅಂಡ್ ಟಿ ಅಧಿಕಾರಿಗಳು ಬಂದು ನೀರಿನ ಮಾದರಿ ತೆಗೆದುಕೊಂಡು ಹೋಗಿದ್ದಾರೆ. ಅದರ ವರದಿ ಏನು ಬಂದಿಯೋ ಎನ್ನುವ ಬಗ್ಗೆ ಗೊತ್ತಿಲ್ಲ’ ಎಂದರು. ಎಲ್ ಅಂಡ್ ಟಿ ಕಂಪನಿ ಜನರಿಗೆ ಶುದ್ಧ ಮತ್ತು ಸಮಯಕ್ಕೆ ಸರಿಯಾಗಿ ನೀರು ಪೂರೈಸಲು ವಿಫಲವಾಗಿದೆ. ಕಲುಷಿತ, ಹುಳ ಮಿಶ್ರಿತ ನೀರು ಕುಡಿಯುವುದರಿಂದ ಅಥವಾ ಬಳಸುವುದರಿಂದ ಆರೋಗ್ಯ ಸಮಸ್ಯೆ ಉಂಟಾದರೆ ಅದಕ್ಕೆ ಯಾರು ಹೊಣೆ. ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅಹಮದ್ ಶೇಖ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ನೀರಿನ ಸಮಸ್ಯೆ ಬಗ್ಗೆ ನಾವೂ ಮನವಿ ಸಲ್ಲಿಸಿದ್ದೇವೆ. ಪ್ರತಿಭಟನೆ ಮಾಡಿದ್ದೇವೆ. ಎಲ್ ಅಂಡ್ ಟಿ ನೀರಿನ ಮಾದರಿ ತೆಗೆದುಕೊಂಡು ಎಲ್ಲವೂ ಸರಿ ಇದೆ ಎನ್ನುತ್ತಾರೆ. ಥರ್ಡ್ ಪಾರ್ಟಿಯಿಂದ ನೀರಿನ ಪರೀಕ್ಷೆ ಮಾಡಿಸಬೇಕು ಎಂದು ಆಯುಕ್ತರಿಗೆ ಹೇಳಿದ್ದೇವೆ. ನಮ್ಮ ವಾರ್ಡ್‌ನಿಂದ ಯಾರೇ ಕರೆ ಮಾಡಿದರೂ ಅವರಿಗೆ ನೀರಿನ ಟ್ಯಾಂಕರ್ ಕಳಿಸಿಕೊಟ್ಟಿದ್ದೇವೆ’ ಎಂದು 41ನೇ ವಾರ್ಡ್ ಸದಸ್ಯೆ ಇರ್ಫಾನಾ ಪರವೀನ್ ತಿಳಿಸಿದರು.
ರಹಮತ್ ನಗರ ಪ್ರದೇಶದ 54ನೇ ವಾರ್ಡ್‌ನಲ್ಲಿ ಕಲುಷಿತ ನೀರು ಪೂರೈಕೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿ ಸ್ಥಳೀಯರೊಬ್ಬರು, ‘ನಮ್ಮಲ್ಲಿ ಮೂರು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಈ ಸಲ ತೀರಾ ಕಲುಷಿತ ನೀರು ಬಂದಿದೆ. ಈ ನೀರು ಕುಡಿದರೆ ಬದುಕಲು ಸಾಧ್ಯವಾ. ದಯವಿಟ್ಟು ನೀರಿನ ಗುಣಮಟ್ಟ ಸುಧಾರಿಸಬೇಕು’ ಎಂದು ಒತ್ತಾಯಿಸಿದರು.
ಇಲ್ಲಿಯೂ ನೀರು ಪೂರೈಕೆ ಹೊಣೆಯನ್ನು ಎಲ್ ಆಂಡ್ ಟಿ ಕಂಪನಿಯೇ ವಹಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.