ADVERTISEMENT

ಬಿಜೆಪಿಯಿಂದ ದ್ವೇಷ ರಾಜಕಾರಣ: ಡಾ.ಅಜಯ ಸಿಂಗ್

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:50 IST
Last Updated 28 ಮಾರ್ಚ್ 2023, 6:50 IST
ಡಾ.ಅಜಯ ಸಿಂಗ್‌
ಡಾ.ಅಜಯ ಸಿಂಗ್‌   

ಕಲಬುರಗಿ: ರಾಜ್ಯದ ಬಿಜೆಪಿ ಸರ್ಕಾರವು ದ್ವೇಷದ ರಾಜಕಾರಣಕ್ಕಾಗಿ ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿದೆ ಎಂದು ಜೇವರ್ಗಿ ಶಾಸಕ ಡಾ.ಅಜಯ ಸಿಂಗ್ ಆರೋಪಿಸಿದ್ದಾರೆ.

ಮುಸ್ಲಿಮರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಲಭಿಸಿಲ್ಲ. ಶೇ 13ರಷ್ಟು ಮುಸ್ಲಿಮರಿಗೆ ಅಲ್ಪಸಂಖ್ಯಾತರಡಿ ನೀಡಲಾದ ಶೇ 4ರಷ್ಟು ಮೀಸಲಾತಿ ಕಸಿದುಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು, ವರದಿ ಇಲ್ಲದೆ ಯಾವುದೇ ವರ್ಗವನ್ನು ಮೀಸಲಾತಿ ಪಟ್ಟಿಯಿಂದ ತೆಗೆಯುವುದು, ಸೇರ್ಪಡೆ ಮಾಡುವಂತಿಲ್ಲ. ಆದರೆ, ರಾಜ್ಯ ಸರ್ಕಾರ ಮನಸೋ ಇಚ್ಛೆ ಮೀಸಲಾತಿ ರದ್ದುಪಡಿಸಿದ್ದು ಅನ್ಯಾಯದ ಪರಮಾವಧಿ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಒಟ್ಟು ಮೀಸಲಾತಿ ಶೇ 50ರಷ್ಟು ಮೀರಬಾರದು ಎಂದಿದೆ. ರಾಜ್ಯದಲ್ಲಿ ಮೀಸಲಾತಿ ಈಗ ಶೇ 50ರಷ್ಟಿದೆ. ನ್ಯಾಯಾಲಯದ ತೀರ್ಪು ಬದಲಾಗಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಿಸಬೇಕು. ಇಲ್ಲಿ ಇದ್ಯಾವುದನ್ನೂ ಮಾಡದೆ ಬಿಜೆಪಿ ಸರ್ಕಾರ, ಮೀಸಲಾತಿಯಂತಹ ಮಹತ್ವದ ಹಾಗೂ ಸೂಕ್ಷ್ಮ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಗಿಮಿಕ್ ಮಾಡುತ್ತಿದೆ ಎಂದು ದೂರಿದ್ದಾರೆ.

ADVERTISEMENT

ಮುಸ್ಲಿಮರಿಗೆ ಇಡಬ್ಲ್ಯೂಎಸ್‌ನ ಶೇ 10ರಷ್ಟು ಮೀಸಲಾತಿಯಡಿ ಸೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಾರೆ. ಪ್ರವರ್ಗದ ಕೋಟಾ ಬೇರೆ, ಆರ್ಥಿಕ ಹಿಂದುಳಿದವರ ಮೀಸಲಾತಿ ಬೇರೆಯಾಗಿದೆ. ಚುನಾವಣೆ ವೇಳೆ ಮೀಸಲಾತಿ ವಿಚಾರದಲ್ಲಿ ಅವೈಜ್ಞಾನಿಕ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿಯ ನಿಲುವಿನಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೀಸಲಾತಿಯನ್ನು ಈ ಹಿಂದಿನ ಯಥಾಸ್ಥಿತಿಯಲ್ಲಿ ಕಾಪಾಡಲಿದೆ. ಮುಸ್ಲಿಮರು, ಎಸ್ಸಿ, ಎಸ್ಟಿ, ಲಿಂಗಾಯಿತ, ಒಕ್ಕಲಿಗರು ಸೇರಿದಂತೆ ಎಲ್ಲರ ಹಿತ ಕಾಯಲಿದೆ. ಚುನಾವಣೆ ವೇಳೆ ಜನರ ದಾರಿ ತಪ್ಪಿಸಲು ಹಾಗೂ ತನ್ನ ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ಬೇಕಾಬಿಟ್ಟಿಯಾಗಿ ಹೊಂದಿಸುವ ಮೂಲಕ ರಾಜ್ಯ ಸರ್ಕಾರ ಜನದ್ರೋಹಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.