ADVERTISEMENT

ಕಲಬುರಗಿ | ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳಿಂದ ದೂಳು: ಸಾಬಣ್ಣಾಗೆ MB ಪಾಟೀಲ ಉತ್ತರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:58 IST
Last Updated 14 ಆಗಸ್ಟ್ 2025, 5:58 IST
ತಳವಾರ ಸಾಬಣ್ಣಾ
ತಳವಾರ ಸಾಬಣ್ಣಾ   

ಕಲಬುರಗಿ: ‘ಜಿಲ್ಲೆಯ ಸಿಮೆಂಟ್‌ ಕಾರ್ಖಾನೆಗಳಿಗೆ ಸಂಪರ್ಕಿಸುವ ಮತ್ತು ಕಾರ್ಖಾನೆಯ ಒಳಗಿರುವ ಎಲ್ಲಾ ರಸ್ತೆಗಳಿಗೆ ಸಮರ್ಪಕವಾಗಿ ಕಾಂಕ್ರೀಟ್‌ ಅಥವಾ ಡಾಂಬರ್‌ ಮಾಡದಿರುವುದರಿಂದ ವಾಹನಗಳ ಸಂಚಾರದ ವೇಳೆ ದೂಳು ಬರುತ್ತಿದೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಉತ್ತರಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ತಳವಾರ ಸಾಬಣ್ಣಾ ಅವರು ಸದನದಲ್ಲಿ ಜಿಲ್ಲೆಯ ಸುಣ್ಣದ ಕಲ್ಲಿನ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಸಿಮೆಂಟ್ ಉತ್ಪಾದನೆ ಮಾಡುತ್ತಿರುವ ಕಾರ್ಖಾನೆಗಳಿಂದಾಗುತ್ತಿರುವ ದುಷ್ಪರಿಣಾಮ ಮತ್ತು ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರಿಸಿದ್ದಾರೆ.

‘ಜಿಲ್ಲೆಯ ಕೈಗಾರಿಕೆಗಳಿಂದ ಮಾಲಿನ್ಯ ಉಂಟಾಗಿ ಜನಸಾಮಾನ್ಯರಿಗೆ ತೊಂದರೆ ಹಾಗೂ ಬೆಳೆ ನಾಶವಾಗುತ್ತಿದೆ ಎಂದು ಮಳಖೇಡ ಗ್ರಾ.ಪಂ ಸದಸ್ಯ ಉಮೇಶ ಚವ್ಹಾಣ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದ ದೂರಿನಂತೆ ಅಧಿಕಾರಿಗಳ ತಾಂತ್ರಿಕ ತಂಡಗಳ ಮೂಲಕ ಪರಿವೀಕ್ಷಿಸಿ ನ್ಯೂನತೆಗಳ ವರದಿ ಪಡೆಯಲಾಗಿದೆ. ರಸ್ತೆಗಳಲ್ಲಿ ನೀರಿನ ಸಿಂಪಡಣೆ, ನಿಯಮಿತ ಸ್ವಚ್ಛತೆ ಕೈಗೊಳ್ಳದ ಕಾರಣ ದೂಳು ಬರುತ್ತಿದೆ. ಕಚ್ಚಾ ವಸ್ತುಗಳಾದ ಸುಣ್ಣದಕಲ್ಲು, ಕಲ್ಲಿದ್ದಲು ತೆರೆದ ಪ್ರದೇಶದಲ್ಲಿ ಸಂಗ್ರಹಿಸುತ್ತಿದ್ದರಿಂದ ಕಾರ್ಖಾನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡ, ರಸ್ತೆಗಳ ಮೇಲೆ ಸಿಮೆಂಟ್‌ ದೂಳು ಕಂಡುಬಂದಿದೆ’ ಎಂದಿದ್ದಾರೆ.

ADVERTISEMENT

‘ಅಲ್ಲದೇ, ತ್ಯಾಜ್ಯದಿಂದ ವಾಸನೆ, ನೊಣಗಳ ಉಪದ್ರವ ಉಂಟಾಗಿದೆ. ಈ ಕುರಿತು 8 ಸಿಮೆಂಟ್‌ ಕೈಗಾರಿಕೆಗಳ ಮೌಖಿಕ ವಿಚಾರಣೆ ನಡೆಸಿದ್ದು, ಮುಚ್ಚುವ ಆದೇಶದ ನಿರ್ದೇಶನ ನೀಡಲಾಗಿದೆ. ಕೈಗಾರಿಕೆಗಳು ಕೈಗೊಂಡ ಅನುಪಾಲನೆಯನ್ನು ಪರಿಶೀಲಿಸಿ ಮಂಡಳಿ ಮುಂದಿನ ಕ್ರಮ ಕೈಗೊಳ್ಳುತ್ತದೆ’ ಎಂದು ಸಚಿವರು ತಿಳಿಸಿದ್ದಾರೆ.

ತಳವಾರ ಸಾಬಣ್ಣಾ ಅವರ ಆರೋಪವೇನು?: ‘ಕಲಬುರಗಿ ಜಿಲ್ಲೆಯಲ್ಲಿ ಸುಮಾರು 8-10 ಬೃಹತ್ ಸಿಮೆಂಟ್ ಕಾರ್ಖಾನೆಗಳಿದ್ದು, ಇವುಗಳಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸವಾಗಿರುವ ಜನ–ಜಾನುವಾರು, ಜೀವ ಸಂಕುಲ, ನೀರು, ಮನೆ ಮತ್ತು ಜಮೀನುಗಳಲ್ಲಿ ಬೆಳೆಯುವ ಬೆಳೆಗಳ ಮೇಲೆ ದುಷ್ಪರಿಣಾಮ ಉಂಟಾಗಿದೆ. ಬೆಳೆಗಳ ಇಳುವರಿ ಕಡಿಮೆಯಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಲುಷಿತ ನದಿ ನೀರಿನ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಟಿ.ಬಿ, ಆಸ್ತಮಾ, ಉಸಿರಾಟದ ತೊಂದರೆ, ಚರ್ಮರೋಗ, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುವ ಮಟ್ಟಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನ ಹೋರಾಟ ಮಾಡುತ್ತಿದ್ದಾರೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಂಪನಿಗಳು ಸಿಎಸ್‌ಆರ್‌ ಫಂಡ್ ಮುಖಾಂತರ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.