ಕಾಳಗಿ: ಶೈಕ್ಷಣಿಕ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 2023-24ರ ವರ್ಷವನ್ನು ಶೈಕ್ಷಣಿಕ ವರ್ಷ ಎಂದು ಘೋಷಿಸಿದೆ. ಶಿಕ್ಷಣ ವಲಯದ ಸಮಗ್ರ ಅಭಿವೃದ್ಧಿಗಾಗಿ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ‘ಅಕ್ಷರ ಆವಿಷ್ಕಾರ’ ಕಾರ್ಯಕ್ರಮ ರೂಪಿಸಿದೆ. ಸದರಿ ಯೋಜನೆಯಡಿ ಪ್ರಸ್ತುತವರ್ಷ (2024-25) ಚಿತ್ತಾಪುರ ಹಳೆ ತಾಲ್ಲೂಕಿನಲ್ಲಿ (ಕಾಳಗಿ, ಚಿತ್ತಾಪುರ ಮತ್ತು ಶಹಾಬಾದ್ ಹೊಸ ತಾಲ್ಲೂಕು ವ್ಯಾಪ್ತಿ) ಒಂದೇ ಸೂರಿನಡಿ ದ್ವಿಭಾಷಾ ಶಿಕ್ಷಣ ಆರಂಭಿಸಿ ಒಟ್ಟು 49 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಶುರು ಮಾಡಿದೆ.
ಜೂನ್ ತಿಂಗಳಲ್ಲೇ ಎಲ್.ಕೆ.ಜಿ ಮತ್ತು ಯು.ಕೆ.ಜಿ ಆರಂಭಿಸಿ 28 ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ನೀಡಬಯಸಿ ಪ್ರತಿ ಶಾಲೆಗೆ ಒಬ್ಬರಂತೆ 28 ಅತಿಥಿ ಶಿಕ್ಷಕರನ್ನು ಹಾಗೂ ಸ್ವಚ್ಛತೆಗಾಗಿ 28 ಸಹಾಯಕಿಯರನ್ನು (ಆಯಾಗಳು) ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದೆ. ಈ ಪೈಕಿ ಕಾಳಗಿ ತಾಲ್ಲೂಕು 10, ಚಿತ್ತಾಪುರ ತಾಲ್ಲೂಕು 13 ಮತ್ತು ಶಹಾಬಾದ್ ತಾಲ್ಲೂಕು 5 ಶಾಲೆಗಳನ್ನು ಒಳಗೊಂಡಿದೆ.
6ವರ್ಷದ ಮಕ್ಕಳಿಗಾಗಿ ದ್ವಿಭಾಷಾ (ಬೈಲಿಂಗ್ವಲ್) ಶಿಕ್ಷಣ ಆರಂಭಿಸಿ ಒಟ್ಟು 21 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ 1ನೇ ತರಗತಿಯನ್ನು ಆರಂಭಿಸಲಾಗಿದೆ. ಈ ಪೈಕಿ ಕಾಳಗಿ ತಾಲ್ಲೂಕು 8, ಚಿತ್ತಾಪುರ ತಾಲ್ಲೂಕು 9 ಮತ್ತು ಶಹಾಬಾದ್ ತಾಲ್ಲೂಕು 4 ಶಾಲೆಗಳನ್ನು ಹೊಂದಿದೆ. ಇದಕ್ಕೆ 8ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೀಗೆ ಇಸಿಸಿಇ ಹಾಗೂ ಬೈಲಿಂಗ್ವಲ್ ಸೇರಿ ಒಟ್ಟು 36 ಅತಿಥಿ ಶಿಕ್ಷಕರು ಹಾಗೂ 28 ಆಯಾಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಅತಿಥಿ ಶಿಕ್ಷಕರಿಗೆ ತಿಂಗಳಿಗೆ ₹10ಸಾವಿರ ಮತ್ತು ಸಹಾಯಕಿಯರಿಗೆ (ಆಯಾಗಳಿಗೆ) ₹5ಸಾವಿರ ಗೌರವ ಸಂಭಾವನೆ ನಿಗದಿಪಡಿಸಲಾಗಿದೆ. ಸಂಭಾವನೆಯನ್ನು ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಶಾಸಕರೇ ತಮ್ಮ ಅನುದಾನದಲ್ಲಿ ನೀಡಬೇಕು ಎನ್ನಲಾಗಿದೆ.
ಈ ಶಾಲೆಗಳು ಚಿತ್ತಾಪುರ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಮತ್ತು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರ ವ್ಯಾಪ್ತಿಗೆ ಒಳಪಡುತ್ತವೆ.
ದುರ್ದೈವದ ಸಂಗತಿ ಎಂದರೆ, ಅರ್ಧ ಶೈಕ್ಷಣಿಕವರ್ಷ (ದಸರಾ ರಜೆ) ಕಳೆದರೂ ಈ ಯಾರೊಬ್ಬ ಶಿಕ್ಷಕರಿಗೆ ಮತ್ತು ಆಯಾಗಳಿಗೆ ಗೌರವಧನ ಸಿಗಲಿಲ್ಲ. ಗೌರವಧನ ಇಲ್ಲದೆ ಪರದಾಡುತ್ತ ದುಡಿಯುತ್ತಿದ್ದ ಶಿಕ್ಷಕರು ಮತ್ತು ಸಹಾಯಕಿಯರು ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಬಿಇಒ, ಡಿಡಿಪಿಐ ಮತ್ತು ಹೆಚ್ಚುವರಿ ಆಯುಕ್ತರ ಕಚೇರಿಗೂ ಅಲೆದಾಡಿದ್ದಾರೆ. ಆದರೆ ಕೊನೆಗಳಿಗೆಯಲ್ಲಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ವ್ಯಾಪ್ತಿಯ ಶಾಲೆಗಳಿಗೆ ಮಾತ್ರ ಮೂರು ತಿಂಗಳ ಸಂಭಾವನೆ ದೊರೆತಿದೆ ಎಂದು ತಿಳಿದುಬಂದಿದೆ.
ಆದರೆ ಶೈಕ್ಷಣಿಕ ವರ್ಷದ ಎಂಟು ತಿಂಗಳು ಕಳೆದುಹೋಗಿ ಇನ್ನೇನು ಒಂದು ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದರೂ ಚಿತ್ತಾಪುರ ಮತ್ತು ಚಿಂಚೋಳಿ ಕ್ಷೇತ್ರದ ಶಿಕ್ಷಕರಿಗೆ, ಸಹಾಯಕಿಯರಿಗೆ ಇನ್ನೂ ಗೌರವಧನ ಬಿಡುಗಡೆ ಆಗದಿರುವುದು ವಿಪರ್ಯಾಸವೇ ಸರಿ.
ಕಾರಣಾಂತರಗಳಿಂದ ಗೌರವಧನ ತಡವಾಗಿದೆ. ಚಿತ್ತಾಪುರ ಚಿಂಚೋಳಿ ಕ್ಷೇತ್ರದ ಅತಿಥಿ ಶಿಕ್ಷಕರಿಗೆ ಸಹಾಯಕಿಯರಿಗೆ ಆದಷ್ಟು ಬೇಗ ಗೌರವಧನ ದೊರೆಯಲಿದೆಶಶಿಧರ ಬಿರಾದಾರ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪುರ
ಒಂದು ವರ್ಷ ಮುಗಿಯಲು ಬಂದರೂ ಗೌರವಧನ ನೀಡದಕ್ಕೆ ಜೀವನ ಕಷ್ಟಕರವಾಗಿದೆ. ಎಲ್ಲ ಕಡೆ ಓಡಾಡಿ ಸಾಕಾಗಿದೆ ಇನ್ನುಮುಂದೆ ಹೋರಾಟ ಅನಿವಾರ್ಯವಾಗಿದೆನಾಗಮ್ಮ ಹಿರೇಮಠ ಅತಿಥಿ ಶಿಕ್ಷಕಿ ಗೋಟೂರ
ಇಲ್ಲಿಯವರೆಗೂ ಪುಕ್ಕಟ್ಟೆ ಕರ್ತವ್ಯನಿರ್ವಹಿಸಿದ್ದು ಸಾಕಾಗಿದೆ. ಫೆ.15ರ ತನಕ ಗೌರವಧನ ಸಿಗದೆ ಹೋದರೆ ಶಾಲೆಗೆ ಹೋಗದೆ ಬಿಇಒ ಕಚೇರಿ ಮುಂದೆ ಕುಳಿತುಕೊಳ್ಳುತ್ತೇವೆಲಕ್ಷ್ಮೀ ಬೆಳಗುಂಪಿ ಅತಿಥಿ ಶಿಕ್ಷಕಿ ಕಾಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.