ADVERTISEMENT

ಕಲಬುರ್ಗಿ: ಖಾಸಗಿ ವಾಹನಗಳಿಂದ ದುಪ್ಪಟ್ಟು ಹಣ ವಸೂಲಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 3:59 IST
Last Updated 18 ಏಪ್ರಿಲ್ 2021, 3:59 IST
ಕಲಬುರ್ಗಿಯ ಬಸ್ ನಿಲ್ದಾಣದಲ್ಲಿ ಶನಿವಾರ ವಿವಿಧೆಡೆ ತೆರಳಲು ಜೀಪ್‌ಗಳು ನಿಂತಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು
ಕಲಬುರ್ಗಿಯ ಬಸ್ ನಿಲ್ದಾಣದಲ್ಲಿ ಶನಿವಾರ ವಿವಿಧೆಡೆ ತೆರಳಲು ಜೀಪ್‌ಗಳು ನಿಂತಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು   

ಕಲಬುರ್ಗಿ: ಸಾರಿಗೆ ಸಂಸ್ಥೆ ನೌಕರರ ಮುಷ್ಕರ ನಡೆಯುತ್ತಿರುವುದರಿಂದ ಬಸ್‌ಗಳ ಸಂಚಾರ ಬಹುತೇಕ ಸ್ತಬ್ದಗೊಂಡಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ವಾಹನಗಳ ಮಾಲೀಕರು ನಿಗದಿತ ಟಿಕೆಟ್ ದರಕ್ಕಿಂತ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ.

ನಗರದ ಕೇಂದ್ರ ಬಸ್ ನಿಲ್ದಾಣದಿಂದಲೇ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರುವುದನ್ನು ದುರ್ಬಳಕೆ ಮಾಡಿಕೊಂಡ ಕೆಲ ವಾಹನಗಳವರು ಜೇವರ್ಗಿ, ಅಫಜಲಪುರ, ಆಳಂದ, ಕಾಳಗಿ, ಚಿಂಚೋಳಿ, ಚಿತ್ತಾಪುರ ಹಾಗೂ ಪಕ್ಕದ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಂದ ವಿಪರೀತ ಹಣವನ್ನು ವಸೂಲಿ ಮಾಡುತ್ತಿರುವುದಾಗಿ ಹಲವು ಪ್ರಯಾಣಿಕರು ಆರೋಪಿಸಿ ವಾಹನಗಳ ಚಾಲಕರೊಂದಿಗೆ ವಾಗ್ವಾದ ನಡೆಸಿದರು.

ಸಮೀಪದ ತಾಲ್ಲೂಕು ಕೇಂದ್ರಕ್ಕೂ ಜೀಪ್ ಚಾಲಕರು ₹ 100 ಕನಿಷ್ಠ ದರವನ್ನು ನಿಗದಿಪಡಿಸಿದ್ದಾರೆ. ಇದಕ್ಕೆ ತಾವೇನೂ ಕಡಿಮೆ ಇಲ್ಲ ಎಂಬಂತೆ ಆಟೊ ಚಾಲಕರೂ ಪ್ರಯಾಣದರವನ್ನು ಏರಿಕೆ ಮಾಡಿದ್ದಾರೆ. ಬಸ್ ನಿಲ್ದಾಣದಿಂದ ಸರ್ಕಾರಿ ಐಟಿಐ ಕಾಲೇಜಿನ ಹಿಂಭಾಗದ ಬಡಾವಣೆಗೆ ಕರೆದೊಯ್ಯಲು ₹ 60 ವಸೂಲಿ ಮಾಡಿದ್ದಾರೆ ಎಂದು ಆಟೊದಲ್ಲಿ ಪ್ರಯಾಣಿಸಿದ ಮಹಿಳೆಯೊಬ್ಬರು ದೂರಿದರು.

ADVERTISEMENT

ಕಲಬುರ್ಗಿಯಿಂದ ವಿಜಯಪುರಕ್ಕೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ₹ 199 ಇದೆ. ಅಷ್ಟೇ ಶುಲ್ಕ ವಸೂಲಿ ಮಾಡಬೇಕು ಎಂದು ಆರ್‌ಟಿಒ ಅಧಿಕಾರಿಗಳು ಖಾಸಗಿ ವಾಹನ ಚಾಲಕರಿಗೆ ತಾಕೀತು ಮಾಡಿದ್ದಾರೆ. ಈ ಸೂಚನೆಯನ್ನು ಗಾಳಿಗೆ ತೂರಿರುವ ಚಾಲಕರು ₹ 300ರಿಂದ 350 ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಯಾಣಿಕ ಮಹೇಶ್ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ಮುಷ್ಕರ ಶನಿವಾರವೂ ಮುಂದುವರಿದಿದ್ದರಿಂದ ಬಹುತೇಕ ಬಸ್‌ಗಳು ರಸ್ತೆಗಿಳಿಯಲಿಲ್ಲ. ಮತ್ತೊಂದೆಡೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಸಿಬ್ಬಂದಿ ಮನವೊಲಿಸುವ ಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.