ADVERTISEMENT

ಚಿಂಚೋಳಿ: ಅಣವಾರ ಬ್ರಿಡ್ಜ್‌ ಕಂ ಬ್ಯಾರೇಜ್‌ ಪೂರ್ಣ

ದಶಕಗಳ ಕನಸು ನನಸು ಮಾಡಿದ ಕೆಕೆಆರ್‌ಡಿಬಿ

ಜಗನ್ನಾಥ ಡಿ.ಶೇರಿಕಾರ
Published 28 ಮೇ 2025, 4:42 IST
Last Updated 28 ಮೇ 2025, 4:42 IST
ಚಿಂಚೋಳಿ ತಾಲ್ಲೂಕು ಅಣವಾರ ಗಂಗನಪಳ್ಳಿ ಮಧ್ಯೆ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್‌ ಕಂ ಬ್ಯಾರೇಜು ಕಾಮಗಾರಿ ಪೂರ್ಣಗೊಂಡಿದ್ದು ಗೇಟು ಅಳವಡಿಸಿ ನೀರು ನಿಲ್ಲಿಸಿರುವುದು
ಚಿಂಚೋಳಿ ತಾಲ್ಲೂಕು ಅಣವಾರ ಗಂಗನಪಳ್ಳಿ ಮಧ್ಯೆ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್‌ ಕಂ ಬ್ಯಾರೇಜು ಕಾಮಗಾರಿ ಪೂರ್ಣಗೊಂಡಿದ್ದು ಗೇಟು ಅಳವಡಿಸಿ ನೀರು ನಿಲ್ಲಿಸಿರುವುದು   

ಚಿಂಚೋಳಿ: ತಾಲ್ಲೂಕಿನ ಅಣವಾರ ಗ್ರಾಮದ ಬಳಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸಲಾಗಿದ್ದು ಕಾಮಗಾರಿ ಪೂರ್ಣಗೊಂಡಿದೆ.

ಅಣವಾರ ಗಂಗನಳ್ಳಿ ಮಧ್ಯೆ ಸಂಪರ್ಕ ಬೆಸೆಯುವ ಈ ಬಾಂದಾರು ನಿರ್ಮಾಣದ ಮೂಲಕ ದಶಕಗಳ ಕನಸು ನನಸಾಗಿದೆ. 3 ಮೀಟರ್ ಎತ್ತರ, 5.5 ಮೀಟರ್ ಅಗಲ, 108 ಮೀಟರ್ ಉದ್ದದ 20 ಪಿಲ್ಲರ್‌ಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಎರಡೂ ಬದಿಗೆ ಒಡ್ಡು ನಿರ್ಮಿಸಿ ಪಿಚ್ಚಿಂಗ್ ಮಾಡಲಾಗಿದ್ದು ಉಗ್ರಾಣ ಕೊಠಡಿಯನ್ನೂ ನಿರ್ಮಿಸಿದ್ದಾರೆ. ನೀರಿನಲ್ಲಿ ಇಳಿಯಲು ಇಳಿಜಾರು ಮತ್ತು ಕೂಡು ರಸ್ತೆ ನಿರ್ಮಿಸಲಾಗಿದ್ದು, ಉಭಯ ಗ್ರಾಮಗಳ ಜನರು ಇದೇ ಬಾಂದಾರಿನ ಮೇಲಿಂದ ಓಡಾಡುತ್ತಿದ್ದಾರೆ.

ಇಡೀ ಬಾಂದಾರಿಗೆ ಬಣ್ಣ ಬಳಿದಿದ್ದರಿಂದ ಆಕರ್ಷಕವಾಗಿ ಗೋಚರಿಸುತ್ತಿದೆ. ಎರಡೂ ಬದಿಗೆ ಬರುವ ರೈತರ ಹೊಲಗಳಿಗೆ ತೆರಳಲು ಬಾಂದಾರು ಅತ್ಯಂತ ಉಪಯುಕ್ತವಾಗಿದೆ. ಬ್ಯಾರೇಜಿಗೆ ಗೇಟುಗಳನ್ನು ಅಳವಡಿಸಿದ್ದರಿಂದ ಮುಲ್ಲಾಮಾರಿ ನದಿಯಲ್ಲಿ (ಬಾಂದಾರಿನ ಹಿಂದುಗಡೆ) ಅಪಾರ ಪ್ರಮಾಣದ ನೀರು ಒಂದು ಕಿ.ಮೀಗಿಂತಲೂ ಉದ್ದದವರೆಗೆ ನಿಂತಿರುವುದು ಕಂಡು ಬಂದಿದೆ.

ADVERTISEMENT

ಶಾಸಕ ಡಾ.ಅವಿನಾಶ ಜಾಧವ ಅವರು ಮಂಜೂರು ಮಾಡಿಸಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಂದಾಜು ₹10 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಪೂರ್ಣಗೊಂಡಿದ್ದು ಅಣವಾರ ಮತ್ತು ಗಂಗನಪಳ್ಳಿ ಗ್ರಾಮಗಳ ರೈತರಿಗೆ ವರದಾನವಾಗಿದೆ.

‘ಬ್ಯಾರೇಜಿನಲ್ಲಿ ಕಳೆದ 6 ತಿಂಗಳಿನಿಂದ ನೀರು ನಿಲ್ಲಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಹೀಗಾಗಿ ನಮ್ಮೂರಿನಲ್ಲಿ ಬತ್ತಿ ಹೋಗಿದ್ದ ಹಲವಾರು ಕೊಳವೆ ಬಾವಿಗಳು ಮರು ಜೀವ ಪಡೆದುಕೊಂಡಿವೆ’ ಎಂದು ರೈತರು ತಿಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಮೇಲುಸ್ತುವಾರಿಯಲ್ಲಿ ನಿರ್ಮಿಸಲಾದ ಈ ಕಾಮಗಾರಿ ಸಂಪೂರ್ಣಗೊಂಡಿದ್ದು ಗೇಟು ಅಳವಡಿಸಿ ನೀರು ಸಂಗ್ರಹಿಸಲಾಗಿದೆ. ರೈತರು ಸಂತಸಗೊಂಡಿದ್ದಾರೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಾಜಿ ಜಾಧವ್ ತಿಳಿಸಿದರು.

ಚಿಂಚೋಳಿ, ಅಣವಾರ, ಪೋಲಕಪಳ್ಳಿ, ಫರ್ದಾರ ಮೋತಕಪಳ್ಳಿ, ಕಲ್ಲೂರು ರೋಡ, ಭಕ್ತಂಪಳ್ಳಿ, ಗಂಗನಪಳ್ಳಿ, ಸೋಮಲಿಂಗದಳ್ಳಿ ಜನರು ಹೋಗಿ ಬರಲು ಈ ಬ್ರಿಡ್ಜ್‌ ಕಂ ಬ್ಯಾರೇಜು ಹೆಚ್ಚು ಅನುಕೂಲವಾಗಿದ್ದು ಬ್ರಿಡ್ಜ್‌ ಕಂ ಬ್ಯಾರೇಜಿನಿಂದ ಗಂಗನಪಳ್ಳಿವರೆಗೆ ರಸ್ತೆ ನಿರ್ಮಿಸಬೇಕು ಎಂದು ಗ್ರಾಮದ ಮುಖಂಡ ಮಡೆಪ್ಪ ಒತ್ತಾಯಿಸಿದ್ದಾರೆ.

ಚಿಂಚೋಳಿ ತಾಲ್ಲೂಕು ಅಣವಾರ ಗಂಗನಪಳ್ಳಿ ಮಧ್ಯೆ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್‌ ಕಂ ಬ್ಯಾರೇಜಿನ ಆಕರ್ಷಣೆ
ನಮ್ಮ ಊರಿನ ರೈತರ ತೋಟಗಳಲ್ಲಿನ ಹಲವಾರು ಕೊಳವೆ ಬಾವಿಗಳು ಒಣಗಿ ಹೋಗಿದ್ದವು. ಬ್ಯಾರೇಜು ನಿರ್ಮಿಸಿ ನೀರು ನಿಲ್ಲಿಸಿದ್ದರಿಂದ ಒಣಗಿದ ಕೊಳವೆ ಬಾವಿಗಳು ಮರುಜೀವ ಪಡೆದಿವೆ
ಝರಣಪ್ಪ ಪೂಜಾರಿ ಕೃಷಿಕ ಅಣವಾರ
ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಕಾಲದಿಂದಲೂ ಅಣವಾರ ಗಂಗನಪಳ್ಳಿ ಮಧ್ಯೆ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣದ ಬೇಡಿಕೆಯಿತ್ತು. ಇದನ್ನು ಕೆಕೆಡಿಬಿ ಈಡೇಡಿಸಿದೆ
ವೀರಶೆಟ್ಟಿ ಪಾಟೀಲ ಗ್ರಾಮದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.