ವಾಡಿ (ಕಲಬುರಗಿ ಜಿಲ್ಲೆ): ಶ್ರೀರಾಮ ಮಂದಿರ ಉದ್ಘಾಟನೆ ನಿಮಿತ್ತ ವಾಡಿ ಪಟ್ಟಣದಲ್ಲಿ ಆಯೋಜಿಸಿದ್ದ ಶೋಭಾಯಾತ್ರೆ ಹಾಗೂ ಶ್ರೀರಾಮನ ಮೂರ್ತಿ ಮೆರವಣಿಗೆ ವೇಳೆಯಲ್ಲಿ ಗದ್ದಲ ಉಂಟಾದ ಪರಿಣಾಮ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆಗೆ ಪೂರಕವಾಗಿ ಪುರಸಭೆ ವ್ಯಾಪ್ತಿಯಲ್ಲಿ ಸಂಪೂರ್ಣ ಮದ್ಯಮಾರಾಟ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಜ.23ರ ಮಂಗಳವಾರ ಮಧ್ಯರಾತ್ರಿಯಿಂದ ಜ.25 ಗುರುವಾರ ಮಧ್ಯರಾತ್ರಿ 12ಗಂಟೆವರೆಗೆ ವಾಡಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವಂತೆ ಎಲ್ಲಾ ತರಹದ ಮದ್ಯ ತಯಾರಿಕಾ ಘಟಕಗಳನ್ನು, ಮದ್ಯಪಾನ, ಸಾರಾಯಿ, ಸೇಂಧಿ, ಸ್ವದೇಶಿ ಹಾಗೂ ವಿದೇಶಿ ಮದ್ಯಪಾನ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವುದನ್ನು ನಿಷೇಧಿಸಿ ಹಾಗೂ ಬಾರ್ ಮತ್ತು ರೆಸ್ಟೋರೆಂಟ್ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
ಇದಕ್ಕೂ ಮೊದಲು ಉತ್ಸವ ನಿಮಿತ್ತ ಜ.22ರಂದು ಮಾತ್ರ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಗಲಭೆ ಹಿನ್ನೆಲೆಯಲ್ಲಿ ಕಲಬುರಗಿ ಎಸ್ಪಿ ಅವರ ಮನವಿ ಮೇರೆಗೆ ಅದನ್ನು ಮೂರು ದಿನಗಳಿಗೆ ವಿಸ್ತರಿಸಿ ಹೊಸ ಆದೇಶ ಹೊರಡಿಸಲಾಗಿದೆ.
ಇದರ ಮಧ್ಯೆ ವಾಡಿ ಪಟ್ಟಣದಲ್ಲಿ ಬೆಳಗ್ಗೆಯಿಂದ ನಿಷೇಧಾಜ್ಞೆ ಜಾರಿಗೆ ಬಂದಿದ್ದು, ಅಂಗಡಿ ಮುಂಗಟ್ಟುಗಳಿಗೆ ಬೀಗ ಜಡಿಯಲಾಗಿದೆ. ರಸ್ತೆಗಳ ಮೇಲೆ ಜನ ಸಂಚಾರ ಅತಿ ವಿರಳವಾಗಿದೆ. ಶಾಲೆಗಳು ಎಂದಿನಂತೆ ನಡೆಯುತ್ತಿದ್ದು, ಕೆಲವು ಖಾಸಗಿ ಶಾಲೆಗಳು ಸ್ವಯಂ ಪ್ರೇರಿತವಾಗಿ ರಜೆ ಘೋಷಿಸಿದೆ.
ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತು ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.