ADVERTISEMENT

ಕಲಬುರಗಿ: ಗಾಜಾ ಪಟ್ಟಿಯ ಮೇಲಿನ ದಾಳಿಗೆ ಖಂಡನೆ

ಎಡ ಪಕ್ಷಗಳ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ: ಇಸ್ರೇಲ್ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:21 IST
Last Updated 17 ಜೂನ್ 2025, 13:21 IST
ಗಾಜಾ ಪಟ್ಟಿಯ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಎಡ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕಲಬುರಗಿ ನಗರದ ಎಸ್‌ವಿಪಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು
ಗಾಜಾ ಪಟ್ಟಿಯ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಎಡ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕಲಬುರಗಿ ನಗರದ ಎಸ್‌ವಿಪಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು   

ಕಲಬುರಗಿ: ಗಾಜಾ ಪಟ್ಟಿಯ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಎಡ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ (ಎಸ್‌ವಿಪಿ) ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಇಸ್ರೇಲ್ ಹಾಗೂ ಅಮೆರಿಕದ ವಿರುದ್ಧ ಘೋಷಣೆ ಕೂಗಿದರು.

‘ಯುದ್ಧ ನಿಲ್ಲಲಿ ಮಾನವೀಯತೆ ಉಳಿಯಲಿ’, ‘ಗಾಜಾದಲ್ಲಿ ನಡೆಯುತ್ತಿರುವ ಮಾನವ ಹತ್ಯಾಕಾಂಡವನ್ನು ಕೂಡಲೇ ನಿಲ್ಲಿಸಿ’, ‘ಜಗತ್ತಿನಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಅಮೆರಿಕಕ್ಕೆ ಧಿಕ್ಕಾರ’ ಎಂದು ಘೋಷಣೆ ಮೊಳಗಿಸಿದರು.

ADVERTISEMENT

ಬಳಿಕ ಸಿ‍ಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ನೀಲಾ ಕೆ. ಮಾತನಾಡಿ, ‘ಎರಡು ವರ್ಷಗಳಿಂದ ಇಸ್ರೇಲ್ ನಿರಂತರವಾಗಿ ಪ್ಯಾಲೆಸ್ಟೀನಿಯರ ಮೇಲೆ ದಾಳಿ ನಡೆಸುತ್ತಿದೆ. ದಾಳಿಯಲ್ಲಿ ಇಲ್ಲಿಯವರೆಗೂ 55,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನರು ಗಾಯಗೊಂಡಿದ್ದಾರೆ. ಗಾಜಾ ನಗರಕ್ಕೆ ಆಹಾರ ಪದಾರ್ಥಗಳನ್ನೂ ತೆಗೆದುಕೊಂಡು ಹೋಗಲು ಇಸ್ರೇಲ್ ಬಿಡುತ್ತಿಲ್ಲ. ಇದು ಮಾನವೀಯತೆಯ ಕಗ್ಗೊಲೆಯಾಗಿದೆ’ ಎಂದು ದೂರಿದರು.

‘ಆಸ್ಪತ್ರೆ, ಶಾಲೆಗಳು ಹಾಗೂ ನಿರಾಶ್ರಿತರ ಕೇಂದ್ರಗಳನ್ನೂ ಬಿಡುತ್ತಿಲ್ಲ. ಇಸ್ರೇಲ್‌ನ ಈ ನೀತಿಯ ಕಾರಣಕ್ಕೆ ಅಂತರರಾಷ್ಟ್ರೀಯ ನ್ಯಾಯಾಲಯ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಾಗೂ ಇತರ ನಾಯಕರ ವಿರುದ್ಧ  ಬಂಧನದ ವಾರಂಟ್ ಹೊರಡಿಸಿದೆ. ಆದರೆ, ಅಮೆರಿಕ ಮತ್ತು ಪಶ್ಚಿಮ ಯುರೋಪಿನ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಇಸ್ರೇಲ್‌ಗೆ ಬೆಂಬಲ ನೀಡುತ್ತಿವೆ. ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿವೆ. ಇದು ನಿಲ್ಲಬೇಕು’ ಎಂದು ಆಗ್ರಹಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶ ರಾಠೋಡ ಮಾತನಾಡಿ, ‘ಗಾಜಾ ಮೇಲಿನ ದಾಳಿಯನ್ನು ಕೂಡಲೇ ನಿಲ್ಲಿಸಬೇಕು. ಇಸ್ರೇಲ್ ಅನ್ನು ಜನಾಂಗೀಯ ದ್ವೇಷದ ಪ್ರಭುತ್ವ ಎಂದು ಘೋಷಿಸಿ ಕ್ರಮ ಕೈಗೊಳ್ಳಬೇಕು. ಪ್ಯಾಲೆಸ್ಟೀನಿಯರ ಹೋರಾಟ ಬೆಂಬಲಿಸಬೇಕು. ಭಾರತ ಇಸ್ರೇಲ್‌ಗೆ ನೀಡುತ್ತಿರುವ ನೆರವು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಹಾಗೂ ಸಂಘ ಪರಿವಾರ ಇಸ್ರೇಲ್–ಇರಾನ್ ನಡುವಿನ ಸಂಘರ್ಷವನ್ನು ಧಾರ್ಮಿಕ ಯುದ್ಧ ಎಂದು ಬಿಂಬಿಸುತ್ತಿದೆ. ಮುಸ್ಲಿಂ ದ್ವೇಷ ಬಿಜೆಪಿಯನ್ನು ಇಸ್ರೇಲ್ ಪರ ನಿಲ್ಲುವಂತೆ ಮಾಡಿದೆ ನೀಲಾ ಕೆ. ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ

ಎಸ್‌ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಆರ್‌.ಕೆ.ವೀರಭದ್ರಪ್ಪ, ಮುಖಂಡರಾದ ಮೌಲಾ ಮುಲ್ಲಾ, ಸುಧಾಮ ಧನ್ನಿ, ಮೇಘರಾಜ ಕಠಾರೆ, ಭೀಮಾಶಂಕರ ಮಾಡ್ಯಾಳ, ಲವಿತ್ರ ವಸ್ತ್ರದ, ಮಹೇಶ ನಾಡಗೌಡ, ಸುಜಾತಾ, ಡಾ. ಸಂದೀಪ್, ಎಸ್‌.ಎಂ.ಶರ್ಮಾ, ಅಬ್ದುಲ್ ವಾಹೀದ್ ಸೇರಿ ಭಾರತ ಕಮ್ಯುನಿಸ್ಟ್‌ ಪಕ್ಷ, ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌)ದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.