ಕಲಬುರಗಿ: ‘ಲಿಂಗರಾಜ ಕಣ್ಣಿ ವಿರುದ್ಧದ ಮಾದಕ ದ್ರವ್ಯ ಸಾಗಣೆ ಆರೋಪ ಪ್ರಕರಣದಲ್ಲಿ ಆಂದೋಲ ಸಿದ್ದಲಿಂಗ ಸ್ವಾಮೀಜಿ ಹಾಗೂ ಬಿಜೆಪಿಯ ನಾಯಕರು ಅನಗತ್ಯವಾಗಿ ನನ್ನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುವಂತೆ ನಮ್ಮ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ’ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
‘2 ಲಕ್ಷ ಮತದಾರರಂತೆ ಲಿಂಗರಾಜ ಕಣ್ಣಿ ಸಹ ಆಪ್ತರು. ಅದರಲ್ಲಿ ಎರಡು ಮಾತಿಲ್ಲ. ಮಾದಕ ದ್ರವ್ಯ ಸಾಗಣೆಯ ಆರೋಪದಲ್ಲಿ ಬಂಧಿತ ಆಗಿದ್ದನ್ನು ತೀವ್ರವಾಗಿ ಖಂಡಿಸುತ್ತೇನೆ. ಉಸ್ತುವಾರಿ ಸಚಿವರು ಸಂಪೂರ್ಣವಾಗಿ ತನಿಖೆ ಆಗಬೇಕು ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಬಿಜೆಪಿಗರು ಹಾಗೂ ಸಿದ್ದಲಿಂಗ ಸ್ವಾಮೀಜಿ ಪದೇ ಪದೇ ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಬಳಿ ಯಾವುದೇ ಪುರಾವೆಗಳೂ ಇಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.
‘ಮಹಾರಾಷ್ಟ್ರದಲ್ಲಿ ಬಿಜೆಪಿಯ ಸರ್ಕಾರವಿದೆ. ಅವರಿಗೆ ತಾಕತ್ ಇದ್ದರೆ ಅಲ್ಲಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ. ನಾನೂ ಸಹ ಸಿಬಿಐಗೆ ಒಪ್ಪಿಸುವಂತೆ ಪತ್ರ ಬರೆಯುತ್ತೇನೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿ ತಪ್ಪು ಮಾಡಿದ್ದಾನಾ ಇಲ್ಲವಾ? ಬೇರೆ ಯಾರಾದರು ಇದ್ದಾರಾ? ಮಾದಕ ವಸ್ತಗಳು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದ ಎಂಬುದನ್ನು ತನಿಖೆ ಮಾಡಿ ಬಹಿರಂಗಪಡಿಸಲಿ’ ಎಂದರು.
‘ಈ ಹಿಂದೆ ಇಂತಹುದ್ದೆ ಪ್ರಕರಣ ನಡೆದಾಗ ಕಣ್ಣಿ ಅವರನ್ನು ಬಿಡಿಸಿಕೊಂಡು ಬರಲಾಗಿತ್ತು ಎಂದು ಮಾಜಿ ಶಾಸಕರು ಆರೋಪಿಸಿದ್ದಾರೆ. ಅಂತಹ ಪ್ರಕರಣದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ನಂದಿಕೂರ ಪ್ರಕರಣದಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ, ಆರೋಪಿಗಳನ್ನು ಬಂಧಿಸುವಂತೆ ಈಗಲೂ ಕಮಿಷನರ್‌ಗೆ ಧೈರ್ಯದಿಂದ ಹೇಳುತ್ತೇನೆ. ಮಾಜಿ ಶಾಸಕರ ಮೆಡಿಕಲ್‌ನಲ್ಲಿ ಏನು ಮಾರಾಟ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದರು.
‘ಎಸ್‌ಬಿ ಕನ್‌ಸ್ಟ್ರಕ್ಷನ್ ಕಂಪನಿಯ ಹೆಸರಿನಲ್ಲಿ ಭೀಮರಾವ, ದೌಲ್ ಸಾಬ್ ಹಾಗೂ ಲಿಂಗರಾಜ ಕಣ್ಣಿ ಸೇರೆ ₹ 20 ಕೋಟಿ ಕೆಲಸವನ್ನು ಟೆಂಡರ್ ಮೂಲಕವೇ ಪಾರದರ್ಶಕವಾಗಿ ಪಡೆದುಕೊಂಡಿದ್ದಾರೆ. ನಾನು ಯಾವುದೇ ಪ್ರಭಾವ ಬೀರಿ ಕಾಮಗಾರಿ ಕೊಟ್ಟಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ.ಕಿರಣ್ ದೇಶಮುಖ, ಲಿಂಗರಾಜ ತಾರಫೈಲ್, ಭೀಮರಾವ ಕೊಳ್ಳುರ, ದಶರಥ್ ಬಾಬು ಒಂಟಿ, ಶಾಮ್ ನಾಟೀಕರ, ಸಂತೋಷ ಪಾಟೀಲ ಉಪಸ್ಥಿತರಿದ್ದರು.
ಡ್ರಗ್ಸ್ ಮುಕ್ತ ಜಿಲ್ಲೆ ಮಾಡಲು ಹೊರಟಿರುವ ಉಸ್ತುವಾರಿ ಸಚಿವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಕಳೆದ ಆರು ತಿಂಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆಅಲ್ಲಮಪ್ರಭು ಪಾಟೀಲ ಶಾಸಕ
ಸಿದ್ದಲಿಂಗ ಶ್ರೀ ಹೇಳಿಕೆಗೆ ಖಂಡನೆ ‘ಲಿಂಗರಾಜ ಕಣ್ಣಿ ವಿರುದ್ಧದ ಮಾದಕ ದ್ರವ್ಯ ಸಾಗಣೆ ಆರೋಪ ಪ್ರಕರಣದಲ್ಲಿ ಆಂದೋಲ ಸಿದ್ದಲಿಂಗ ಸ್ವಾಮೀಜಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಎಳೆದು ತರುತ್ತಿರುವುದು ಖಂಡನೀಯ’ ಎಂದು ಕಲಬುರಗಿ ದಕ್ಷಿಣ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್ ಹೇಳಿದ್ದಾರೆ. ‘ಕಣ್ಣಿ ಅವರು ಔಷಧಿ ವಿತರಣೆ ಮಳಿಗೆಯ ವ್ಯವಹಾರ ನಡೆಸುತ್ತಿದ್ದಾರೆ. ಅದು ಅವರ ವೈಯಕ್ತಿಕ ವ್ಯಾಪಾರವಾಗಿದೆ. ಕಣ್ಣಿ ವಿರುದ್ಧ ದಾಖಲಾದ ಪ್ರಕರಣದಲ್ಲಿ ರಾಜಕೀಯ ಬೆರೆಸುವುದು ಸ್ವಾಮೀಜಿಗೆ ಶೋಭೆ ತರುವುದಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.