ADVERTISEMENT

ಕಲಬುರಗಿ | ‘ಮನಸ್ಸು, ಆರೋಗ್ಯ, ಸಂತೋಷ ಪರಸ್ಪರ ಪೂರಕ’

ಹಿರಿಯ ಮನೋವೈದ್ಯ ಡಾ.ಸಿ.ಆರ್‌.ಚಂದ್ರಶೇಖರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 7:37 IST
Last Updated 8 ಏಪ್ರಿಲ್ 2025, 7:37 IST
ಡಾ.ನಾ.ಸೋಮೇಶ್ವರ ಬರೆದ ‘ಸ್ಟೂಡೆಂಟ್ಸ್ v/s ಎಕ್ಸಾಂ’ ಕೃತಿಯನ್ನು ಗಣ್ಯರು ದಾಕ್ಷಾಯಣಿ ಎಸ್‌. ಅಪ್ಪ, ಬಸವರಾಜ ದೇಶಮುಖ ಬಿಡುಗಡೆ ಮಾಡಿದರು. ಡಾ.ನಾ.ಸೋಮೇಶ್ವರ, ಡಾ.ಸಿ.ಆರ್‌.ಚಂದ್ರಶೇಖರ, ಶ್ರೀಶೈಲ ಹೊಗಾಡೆ, ಮಹಾನಂದಾ, ಶಾರದಾ ಪಾಲ್ಗೊಂಡಿದ್ದರು
ಡಾ.ನಾ.ಸೋಮೇಶ್ವರ ಬರೆದ ‘ಸ್ಟೂಡೆಂಟ್ಸ್ v/s ಎಕ್ಸಾಂ’ ಕೃತಿಯನ್ನು ಗಣ್ಯರು ದಾಕ್ಷಾಯಣಿ ಎಸ್‌. ಅಪ್ಪ, ಬಸವರಾಜ ದೇಶಮುಖ ಬಿಡುಗಡೆ ಮಾಡಿದರು. ಡಾ.ನಾ.ಸೋಮೇಶ್ವರ, ಡಾ.ಸಿ.ಆರ್‌.ಚಂದ್ರಶೇಖರ, ಶ್ರೀಶೈಲ ಹೊಗಾಡೆ, ಮಹಾನಂದಾ, ಶಾರದಾ ಪಾಲ್ಗೊಂಡಿದ್ದರು   

ಕಲಬುರಗಿ: ‘ಎಲ್ಲದಕ್ಕೂ ಮನಸ್ಸೇ ಮೂಲ. ಅದು ಚೆನ್ನಾಗಿದ್ದರೆ, ಆರೋಗ್ಯ ಚೆನ್ನಾಗಿರುತ್ತದೆ. ಆರೋಗ್ಯ ಚೆನ್ನಾಗಿದ್ದರೆ ಸಂತೋಷ ಇರುತ್ತದೆ. ಸಂತೋಷವಾಗಿದ್ದರೆ, ಆರೋಗ್ಯ ಉತ್ತಮವಾಗಿರುತ್ತದೆ. ಅದು ಉತ್ತಮವಾಗಿದ್ದರೆ ಮನಸ್ಸು ಚೆನ್ನಾಗಿರುತ್ತದೆ’ ಎಂದು ಹಿರಿಯ ಮನೋವೈದ್ಯ ಡಾ.ಸಿ.ಆರ್‌.ಚಂದ್ರಶೇಖರ್ ಹೇಳಿದರು.

ನಗರದ ಶರಣಬಸವ ವಿ.ವಿ. ಆವರಣದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಸೋಮವಾರ ಬೆಂಗಳೂರಿನ ಸಮಾಧಾನ ಆಪ್ತಸಮಾಲೋಚನೆ ಮತ್ತು ಮಾರ್ಗದರ್ಶಿ ಕೇಂದ್ರದ ಸಹಯೋಗದಲ್ಲಿ ಸ್ಥಾಪಿಸಲಾದ ಅವ್ವಾಜಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶಿ ಕೇಂದ್ರದ ಉದ್ಘಾಟನೆ, ಎರಡು ಕೃತಿಗಳ ಬಿಡುಗಡೆ ಹಾಗೂ ವಿಶ್ವ ಆರೋಗ್ಯ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮನಸ್ಸು, ಆರೋಗ್ಯ ಮತ್ತು ಸಂತೋಷ ಒಂದಕ್ಕೊಂದು ಪೂರಕವಾಗಿವೆ. ಅವುಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳುವುದು ಮುಖ್ಯ’ ಎಂದರು.

ADVERTISEMENT

‘ಜೀವನ ಅಂದರೆ ಸವಾಲುಗಳು ಸಹಜ. ಇಂಗ್ಲಿಷ್‌ 'LIFE' ಶಬ್ದದ ಅಕ್ಷರಗಳಾದ ಎಲ್‌–ಲಾಸ್‌ (ನಷ್ಟ), ಲೋನ್ಲಿನೆಸ್‌ (ಒಂಟಿತನ), ಇ– ಇಲ್‌ನೆಸ್‌ (ಅನಾರೋಗ್ಯ), ಇನ್‌ಸೆಕ್ಯೂರಿಟಿ (ಅಭದ್ರತೆ), ಎಫ್‌–ಫೀಲಿಂಗ್ಸ್‌ (ಭಾವನೆಗಳು–ಭಯ, ದುಃಖ, ಕೋಪ, ಮತ್ಸರ), ಇ– ಏಟ್‌ ಎನಿಮೀಸ್‌ (ಅರಿಷಡ್ವರ್ಗಗಳು) ಬದುಕಿನಲ್ಲಿ ಕಾಡುವುದು ಸಹಜ. ನಾವು ಅವುಗಳನ್ನು ಹೇಗೆ ನಿಭಾಯಿಸುತ್ತೇವೆಯೋ ಎಂಬುದು  ಜೀವನದಲ್ಲಿ ನಮ್ಮ ಯಶಸ್ಸನ್ನು ನಿರ್ಧರಿಸುತ್ತದೆ’ ಎಂದರು.

‘ಒಂದಿಲ್ಲ ಒಂದು ಹಂತದಲ್ಲಿ ಎಲ್ಲರಿಗೂ ಆಪ್ತಸಮಾಲೋಚನೆ ಅಗತ್ಯ. ಸೀತೆ ಅಪಹರಣವಾದಾಗ ರಾಮನಿಗೆ ಲಕ್ಷ್ಮಣ, ಸಮುದ್ರ ದಾಟಲು ಹನುಮಂತನಿಗೆ ಜಾಂಬವ, ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಕೃಷ್ಣ ಆಪ್ತಸಮಾಲೋಚನೆ ಮಾಡಿದ್ದನ್ನು ಕಾಣಬಹುದು. ದುರ್ಯೋಧನನಿಗೂ ಸಕಾಲಕ್ಕೆ ಆಪ್ತಸಮಾಲೋಚನೆ ಸಿಕ್ಕಿದ್ದರೆ ಮಹಾಭಾರತದ ಯುದ್ಧ ಘಟಿಸುತ್ತಿರಲಿಲ್ಲವೇನೋ’ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ದಾಕ್ಷಾಯಣಿ ಎಸ್‌.ಅಪ್ಪ ಮಾತನಾಡಿ, ‘ಜೀವನದಲ್ಲಿ ಕಷ್ಟ, ನಷ್ಟ, ಸೋಲು, ನಿರಾಸೆ ಸಹಜ. ವಿದ್ಯಾರ್ಥಿಗಳು ಇವುಗಳನ್ನು ಸಕಾರಾತ್ಮಕ ಮನೋಭಾವದಿಂದ ಎದುರಿಸುವುದನ್ನು ಕಲಿಯಬೇಕು. ಅದಕ್ಕೆ ಬೇಕಾದ ನೆರವು ನೀಡಲು ಅವ್ವಾಜಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶಿ ಕೇಂದ್ರ ತೆರೆಯಲಾಗಿದೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯಯುತವಾದ ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಸಿ.ಆರ್‌.ಚಂದ್ರಶೇಖರ್ ಅವರು ಬರೆದ ‘ನಮ್ಮ ನಿಮ್ಮೆಲ್ಲರಿಗೆ ಬೇಕು ಆಪ್ತ ಸಲಹೆ, ಸಮಾಲೋಚನೆ’ ಹಾಗೂ ಡಾ.ನಾ.ಸೋಮೇಶ್ವರ ಅವರು ಬರೆದ ‘ಸ್ಟೂಡೆಂಟ್ಸ್‌ v/s ಎಕ್ಸಾಂ’ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಎಸ್‌ಬಿಆರ್‌ ಕಾಲೇಜು ಪ್ರಾಚಾರ್ಯ ಶ್ರೀಶೈಲ ಹೊಗಾಡೆ, ಮಹಾನಂದಾ, ಶಾರದಾ ವೇದಿಕೆಯಲ್ಲಿದ್ದರು. ಉಪನ್ಯಾಸಕ ಚಂದ್ರಕಾಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ನೋವು ಹಂಚಿಕೊಳ್ಳಿ...’ ‘ಹದಿಹರೆಯದ ವಯಸ್ಸಿನಲ್ಲಿ ಶೈಕ್ಷಣಿಕ ಒತ್ತಡ ಕೌಟುಂಬಿಕ ಒತ್ತಡಗಳು ಸಹಜ. ಯುವಜನರು ಯಾವುದೇ ನೋವು–ಒತ್ತಡವನ್ನು ಮನಸಿನೊಳಗೆ ಮುಚ್ಚಿಟ್ಟುಕೊಳ್ಳಬಾರದು. ಅಪ್ಪ–ಅಮ್ಮ ಹಾಗೂ ಗುರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬಳಿ ಹಂಚಿಕೊಳ್ಳಬೇಕು’ ಎಂದು ವೈದ್ಯ ಸಾಹಿತಿ ಡಾ.ನಾ.ಸೋಮೇಶ್ವರ ಸಲಹೆ ನೀಡಿದರು. ‘ನೋವು ಮುಚ್ಚಿಟ್ಟುಕೊಂಡು ಇಷ್ಟವಿಲ್ಲದ ಕೆಲಸ ಕಷ್ಟಪಟ್ಟು ಮಾಡಿ ವೈಫಲ್ಯ ಅನುಭವಿಸಿ ಆತ್ಮಹತ್ಯೆಗೆ ಮುಂದಾಗಬಾರದು. ಅಪ್ಪ ಅಮ್ಮ ಶಿಕ್ಷಕರ ಬಳಿ ನೋವು ಹೇಳಿಕೊಳ್ಳಲು ಆಗದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಹುಡುಕುವ ಬದಲು ಸೂಕ್ತವಾದ ಆಪ್ತಸಮಾಲೋಚನೆ ಪಡೆಯಬೇಕು. ಇಲ್ಲವೇ ನಿಮ್ಮ ನೋವನ್ನು ವಿಸ್ತೃತವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಬಳಿಕ ಅದನ್ನು ಹರಿದು ಸುಟ್ಟು ಹಗುರಾಗಬೇಕು’ ಎಂದು ಕಿವಿಮಾತು ಹೇಳಿದರು. ‘ವೈದ್ಯಕೀಯ ಕಾಲೇಜುಗಳಲ್ಲೂ ಇಲ್ಲದ ಆಪ್ತ ಸಮಾಲೋಚನೆ ಕೇಂದ್ರವನ್ನು ಎಸ್‌ಬಿಆರ್‌ನಲ್ಲಿ ಸ್ಥಾಪಿಸಿರುವುದಕ್ಕೆ ಆಡಳಿತ ಮಂಡಳಿ ದಾಕ್ಷಾಯಣಿ ಅಪ್ಪ ಅವರು ಅಭಿನಂದನೆಗೆ ಅರ್ಹರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.