ADVERTISEMENT

ಹಾಸ್ಟೆಲ್‌ ತೆರವಿಗೆ ಸಿಯುಕೆ ಸೂಚನೆ: ಸಿಪಿಎಂ, ಎಸ್‌ಎಫ್‌ಐ ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:12 IST
Last Updated 6 ಜುಲೈ 2022, 4:12 IST
ಕೆ.ನೀಲಾ
ಕೆ.ನೀಲಾ   

ಕಲಬುರಗಿ: ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದನ್ನೇ ಕೇಂದ್ರವಾಗಿ ಇಟ್ಟುಕೊಂಡು ಹಾಸ್ಟೆಲ್ ತೆರವು ಮಾಡಲು ನೋಟಿಸ್ ನೀಡಿದ ಕ್ರಮ ಸಂವಿಧಾನ ವಿರೋಧಿಯಾಗಿದೆ ಎಂದು ಸಿಪಿಐ (ಎಂ) ಮತ್ತು ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಟೀಕಿಸಿವೆ.

ಸಿಪಿಐ (ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, ‘ಕಾಲಾವಧಿ ಮುಗಿಯಿತೆಂಬ ನೆಪ ಒಡ್ಡಿ ವಿಶ್ವವಿದ್ಯಾಲಯ ಬಿಟ್ಟು ಹೋಗಬೇಕೆಂದು ವಿದ್ಯಾರ್ಥಿಗಳಿಗೆ ನೋಟಿಸ್ ಕೊಡಲಾಗಿದೆ. ಆದರೆ, ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳು ಹೊರಗಡೆಯೇ ಇದ್ದರು ಎಂಬುದನ್ನು ಕುಲಪತಿಗಳು ಗಮನಿಸಿಲ್ಲವೆ? ಕೋವಿಡ್ ವೇಳೆ ಸಂಶೋಧನಾತ್ಮಕ ಶೈಕ್ಷಣಿಕ ಮತ್ತು ಕ್ಷೇತ್ರ ಕಾರ್ಯ ನಡೆಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಎರಡು ವರ್ಷಗಳ ರಿಯಾಯಿತಿ ಕೊಟ್ಟು ಸಂಶೋಧನಾ ವಿಧ್ಯಾರ್ಥಿಗಳಿಗೆ ವಿ.ವಿ.ಯ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳಬೇಕು’ಎಂದುಅವರುತಿಳಿಸಿದ್ದರೆ.

‘ದೆಹೆಲಿಯ ಕೇಂದ್ರೀಯ ವಿ.ವಿ.ಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಹೀಗೆ ಅನುಕೂಲ ಕಲ್ಪಿಸಬೇಕಾದದ್ದು ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರಮಿಸಲಾರದೇ ವಿಶ್ವವಿದ್ಯಾಲಯವನ್ನೇ ಕೋಮುವಾದಿಕರಣಕ್ಕೆ ಒಳಗಾಗಿಸುತ್ತಿದೆ. ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಕ್ಕಾಗಿ ಧ್ವನಿ ಎತ್ತಿದರೆ ಅಂಥವರ ಮೇಲೆ ಸೇಡಿನ ಕ್ರಮ ಅನುಸರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗೆ ಕೋಮುಚಟುವಟಿಕೆ ನಡೆಸಲು ಆಸ್ಪದ ಕೊಡುತ್ತಿದೆ. ಇದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ವಿ.ವಿ.ಯಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ’

ಕರ್ನಾಟಕ ಕೇಂದ್ರೀಯ ವಿ.ವಿ. ಆವರಣದ ಮಲ್ಟಿ ಪರ್ಪಸ್ ಹಾಲ್‌ ಬಳಿ ಮಂಗಳವಾರ ಕೆಲ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಶಾಖಾ ನಡೆಸುವ ಮೂಲಕ ಕೋಮುವಾದ ಹರಡಲು ಮುಂದಾಗಿದ್ದಾರೆ. ಇದಕ್ಕೆ ವಿಶ್ವವಿದ್ಯಾಲಯ ಅನುಮತಿ ನೀಡಿದ್ದು ಏಕೆ ಎಂದು ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಸಿರಸಗಿ ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮತೀಯ ಚಟುವಟಿಕೆ ನಡೆಸಲು ಖುದ್ದು ವಿಶ್ವವಿದ್ಯಾಲಯವೇ ಕುಮ್ಮಕ್ಕು ನೀಡಿದ್ದು ಸರಿಯಲ್ಲ. ಶಾಖಾ ನಡೆಸಲು ಅನುಮತಿ ನೀಡಿದ ಅಧಿಕಾರಿಯನ್ನು ತಕ್ಷಣ ವಜಾ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಅವಧಿ ಮುಗಿದ ನೆಪ ಹೇಳಿ ಹಾಸ್ಟೆಲ್ ಖಾಲಿ ಮಾಡುವಂತೆ ವಿ.ವಿ. ಸೂಚಿಸಿರುವುದು ಸಂವಿಧಾನ ವಿರೋಧಿ ನಡೆ. ಈ ಅವಧಿಯನ್ನು ಮತ್ತೆ ಎರಡು ವರ್ಷ ವಿಸ್ತರಿಸಲು ಅವಕಾಶವಿದೆ. ಹಾಗಾಗಿ, ಇನ್ನಷ್ಟು ಕಾಲ ಹಾಸ್ಟೆಲ್‌ನಲ್ಲಿ ವಾಸಿಸಲು ಅನುಮತಿ ನೀಡಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.