ADVERTISEMENT

ಆ.2ರಂದು ಸಿಪಿಐ 25ನೇ ಜಿಲ್ಲಾ ಸಮ್ಮೇಳನ: ಮಹೇಶಕುಮಾರ ರಾಠೋಡ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:46 IST
Last Updated 31 ಜುಲೈ 2025, 5:46 IST
<div class="paragraphs"><p>ಮಹೇಶಕುಮಾರ ರಾಠೋಡ</p></div>

ಮಹೇಶಕುಮಾರ ರಾಠೋಡ

   

ಕಲಬುರಗಿ: ‘ಭಾರತ ಕಮುನಿಸ್ಟ್‌ ಪಕ್ಷದ (ಸಿಪಿಐ) 25ನೇ ಜಿಲ್ಲಾ ಸಮ್ಮೇಳನವು ಆಗಸ್ಟ್‌ 2ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿದೆ’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಹೇಳಿದರು.

‘ಅಂದು ಬೆಳಿಗ್ಗೆ 11ರಿಂದ ಸಂಜೆ 4 ಗಂಟೆ ತನಕ ನಡೆಯಲಿರುವ ಸಮ್ಮೇಳನದಲ್ಲಿ ಪಕ್ಷದ ಆಯ್ದ 110 ಪ್ರತಿನಿಧಿಗಳು ಪಾಲ್ಗೊಳ್ಳುವರು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಪಕ್ಷದ ರಾಜ್ಯ ಸಮ್ಮೇಳನವು ಕಲಬುರಗಿಯಲ್ಲೇ ನಡೆಯಲಿರುವ ಕಾರಣ ಜಿಲ್ಲಾ ಸಮ್ಮೇಳನದ ರ‍್ಯಾಲಿ ನಡೆಸದೇ ಬರೀ ಪ್ರತಿನಿಧಿಗಳ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಡಾ.ಮಲಕರೆಡ್ಡಿ ಹೋಮಿಯೋಪಥಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಪಿ.ಸಂಪತ್‌ಕುಮಾರ ಸಮ್ಮೇಳನದ ಧ್ವಜಾರೋಹಣ ನೆರವೇರಿಸುವರು. ಪಕ್ಷದ ರಾಜ್ಯ ಸಹಕಾರ್ಯದರ್ಶಿ ಬಿ.ಅಮ್ಜದ್‌ ಸಮ್ಮೇಳನ ಉದ್ಘಾಟಿಸುವರು’ ಎಂದು ವಿವರಿಸಿದರು.

‘ಸಮ್ಮೇಳನದಲ್ಲಿ ಪಕ್ಷದ ಹಿಂದಿನ ಮೂರು ವರ್ಷಗಳ ಕಾರ್ಯ ಚಟುವಟಿಕೆಗಳ ಮೌಲ್ಯಮಾಪನ, ಮುಂದಿನ ಮೂರು ವರ್ಷಗಳ ರೂಪುರೇಷೆಗಳ ಬಗೆಗೆ ಚರ್ಚೆಯಾಗಲಿದೆ. ಜೊತೆಗೆ ಜಿಲ್ಲೆಯ ನೀರಾವರಿ, 371(ಜೆ) ಅನುಷ್ಠಾನ, ಕಾನೂನು ಸುವ್ಯವಸ್ಥೆ, ಮರಳು ಅಕ್ರಮ ಗಣಿಗಾರಿಕೆ, ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟದ ಬಗ್ಗೆ ಚರ್ಚೆಯಾಗಲಿದೆ. ವಿಶೇಷವಾಗಿ ಕೋಮುವಾದಿ ಶಕ್ತಿಗಳು ಜಿಲ್ಲೆಯನ್ನು ಪ್ರಯೋಗಶಾಲೆ ಮಾಡಲು ಹೊರಟ್ಟಿದ್ದನ್ನು ವಿಫಲಗೊಳಿಸಲು ಬೇಕಾದ ಕಾರ್ಯತಂತ್ರದ ಕುರಿತು ಚರ್ಚೆ ನಡೆಯಲಿದೆ’ ಎಂದರು.

ಪಕ್ಷದ ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ ಮಾತನಾಡಿ, ‘ಕೇಂದ್ರ ಸರ್ಕಾರವು ಯಾವುದೇ ದೇಶದೊಂದಿಗೆ ಮಾಡಿಕೊಳ್ಳುವ ವ್ಯಾಪಾರ ಒಪ್ಪಂದವು ನಮ್ಮ ದೇಶದ ರೈತರ ಅಭಿವೃದ್ಧಿಗೆ ಪೂರಕವಾಗಿರಬೇಕು. ಆದರೆ, ಕೇಂದ್ರದ ಒಪ್ಪಂದವು ರೈತರ ಮಾರಕವಾಗುವಂತಿದೆ’ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪ್ರಭುದೇವ ಯಳಸಂಗಿ, ಪದ್ಮಾವತಿ ಪಾಟೀಲ, ಭೀಮಾಶಂಕರ ಮಾಡಿಯಾಳ, ಸಾಜೀದ್‌ ಅಹಮದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.