ADVERTISEMENT

ಸತತ ಹೋರಾಟದ ಬಳಿಕ ಅಲ್ಪ ನೆರವು: ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:46 IST
Last Updated 26 ಜನವರಿ 2023, 5:46 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ನೆಟೆ ರೋಗ ಸಂಬಂಧ ಕಾಂಗ್ರೆಸ್‌ ಮಾಡಿದ ಸತತ ಹೋರಾಟ, ಮುಖ್ಯಮಂತ್ರಿ ಮ ತ್ತು ಕೃಷಿ ಸಚಿವ ರಿಗೆ ಸರಣಿ ಮನವಿ ಪತ್ರಗಳನ್ನು ಸಲ್ಲಿಸಿದ ಬಳಿಕ ಸರ್ಕಾರ ನಿದ್ದೆಯಿಂದ ಎದ್ದು ಈಗ ಪ್ರತಿ ಹೆಕ್ಟೇರ್‌ಗೆ ₹ 10,000 ಪರಿಹಾರ ಘೋಷಿಸಿದೆ. ರೈತರ ಬೇಡಿಕೆಗಿಂತ ಕಡಿಮೆಯಿದ್ದರೂ ಅವರಿಗೆ ಸ್ವಲ್ಪ ಸಹಾಯವಾಗಲಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಇದರಿಂದ ರೈತರು ಆತ್ಮಹತ್ಯೆಗೆ ಮೊರೆ ಹೋಗಿದ್ದರು. ರೈತರಿಗೆ ನ್ಯಾಯ ಒದಗಿಸುವಂತೆ ಮತ್ತು ಸರ್ಕಾರದಿಂದ ಪರಿಹಾರ ಘೋಷಿಸುವಂತೆ ಹೋರಾಟ ಮಾಡಿಕೊಂಡು ಬರಲಾಯಿತು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಜಮೀನುಗಳಿಗೆ ಭೇಟಿ ನೀಡಿ ರೋಗಪೀಡಿತ ತೊಗರಿ ಪರಿಶೀಲಿಸಿದೆ. ನಂತರ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿ ರೈತರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು’ ಎಂದಿದ್ದಾರೆ.

ADVERTISEMENT

‘ಕೃಷಿ ಸಚಿವರಿಗೆ ಪತ್ರ ಬರೆದು ಪರಿಹಾರಕ್ಕೆ ಆಗ್ರಹಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಸಿದೆ. ಮುಖ್ಯಮಂತ್ರಿಗೆ ಪತ್ರ ಬರೆದು ₹500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸುವ ಮೂಲಕ ರೈತರ ನೋವಿಗೆ ಸ್ಪಂದಿಸಿದೆ. ಜತೆಗೆ ಪ್ರತಿ ಎಕರೆಗೆ ₹25,000 ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು. 61ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ ರೈತ ವಿರೋಧಿ ಸರ್ಕಾರ ಈಗ ಎಚ್ಚೆತ್ತುಕೊಂಡು ಅಲ್ಪಪರಿಹಾರ ಘೋಷಿಸಿದೆ’ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ‘ಪ್ರತಿ ಎಕರೆಗೆ ಕನಿಷ್ಠ ₹25,000 ನಷ್ಟ ಪರಿಹಾರ ಬಿಡುಗಡೆ ಮಾಡಬೇಕು’ ಎಂದಿದ್ದಾರೆ.

ರೈತರಿಗೆ ಸ್ಪಂದನೆ; ತೇಲ್ಕೂರ

ನೆಟೆರೋಗದಿಂದ ತೊಗರಿ ಹಾಳಾಗಿರುವುದನ್ನು ರಾಜ್ಯ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡುವ ಮುಖಾಂತರ ರೈತರ ನೆರವಿಗೆ ಧಾವಿಸಿದೆ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದ್ದಾರೆ.

ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಯ ಹಲವು ಭಾಗಗಳಲ್ಲಿ ತೊಗರಿ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ವರ್ಷ ನೆಟೆ ರೋಗದಿಂದ ಭಾಗಶಃ ಬೆಳೆ ಹಾನಿಯಾಗಿದೆ. ನೆಟೆ ರೋಗ ಪ್ರಕೃತಿ ವಿಕೋಪದಡಿ ಬಾರದೇ ಇದ್ದರೂ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ನನ್ನ ನೇತೃತ್ವದಲ್ಲಿ ಪರಿಹಾರ ಕೋರಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಈಗ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪರಿಹಾರ ಘೋಷಿಸಲಾಗಿದೆ. ಎನ್‌ಡಿಆರ್‌ಎಫ್ ಮಾರ್ಗ ಸೂಚಿ ಪ್ರಕಾರ ಪರಿಹಾರ ನೀಡಿರುವುದು ರೈತರ ಸಂಕಷ್ಟಕ್ಕೆ ಸ್ಪಂದಿಸಿದಂತಾಗಿದೆ. ಈ ಮೂಲಕ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಪರಿಹಾರ ಘೋಷಿಸಿ ರೈತರ ಬೆನ್ನಿಗೆ ನಿಂತಿರುವುದು ಸಂತೋಷದ ವಿಚಾರ. ಇದು ಡಬಲ್ ಎಂಜಿನ್ ಸರ್ಕಾರದ ಕೊಡುಗೆ. ಮಂಗಳವಾರ ಕಲಬುರಗಿ‌ಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವಿಶೇಷ ಪ್ರಕರಣ ಎಂದು ಭಾವಿಸಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಪರಿಹಾರ ಘೋಷಿಸಿದ್ದಾರೆ. ₹223 ಕೋಟಿ ನಿಗದಿಪಡಿಸಲಾಗಿದೆ’ ಎಂದಿದ್ದಾರೆ.

‘ಹೆಚ್ಚಿನ ಪರಿಹಾರ ಘೋಷಿಸಿ’

ನೆಟೆ ರೋಗ ಹಾನಿಗೆ ರಾಜ್ಯ ಸರ್ಕಾರವು ಪ್ರತಿ ರೈತರಿಗೆ 2 ಹೆಕ್ಟೇರ್‌ ಸೀಮಿತ ಮಾಡಿ, ಹೆಕ್ಟೇರ್‌ಗೆ ₹10 ಸಾವಿರ ನಷ್ಟ ಪರಿಹಾರ ಘೋಷಣೆ ಮಾಡಿದ್ದು ಸರಿಯಲ್ಲ. ಬದಲಿಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಶಾಸಕ ಡಾ.ಅಜಯ್ ಸಿಂಗ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಬೆಳಗಾವಿ ಸದನದಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಎಕರೆಗೆ ₹4 ಸಾವಿರ ಸಿಕ್ಕಂತೆ ಆಗುತ್ತದೆ. ಹೀಗಾಗಿ, ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ಸೇರಿ 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ತೊಗರಿ ಬೆಳೆ ನೆಟೆ ರೋಗಕ್ಕೆ ಹಾಳಾಗಿದೆ. ಇದರಿಂದ ಸಾವಿರಾರು ರೈತ ಕುಟುಂಬಗಳು ಬೀದಿಗೆ ಬಿದ್ದಿವೆ. ಸರ್ಕಾರದ ಪರಿಹಾರ ಧನವು ರಸಗೊಬ್ಬರ, ಬೀಜದ ವೆಚ್ಚಕ್ಕೂ ಸಾಲುವುದಿಲ್ಲ. ₹1,000 ಕೋಟಿ ಪರಿಹಾರ ಪ್ಯಾಕೇಜ್‌ಗೆ ಆಗ್ರಹಿಸಲಾಗಿತ್ತು. ಹೀಗಾಗಿ, ಪರಿಹಾರ ಮೊತ್ತ ಹೆಚ್ಚಿಸಿ ರೈತರ ನೆರವಿಗೆ ಧಾವಿಸಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.