ADVERTISEMENT

ಮತ್ತೊಮ್ಮೆ ಬೆಳೆ ಹಾನಿ ಸಮೀಕ್ಷೆ

ಶಾಸಕ ಬಸವರಾಜ ಮತ್ತಿಮೂಡ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 4:01 IST
Last Updated 30 ಸೆಪ್ಟೆಂಬರ್ 2020, 4:01 IST
ಖಾಜಾ ಕೋಟನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿರುವುದನ್ನು ಶಾಸಕ ಬಸವರಾಜ ಮತ್ತಿಮೂಡ ಮಂಗಳವಾರ ಪರಿಶೀಲಿಸಿದರು
ಖಾಜಾ ಕೋಟನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿರುವುದನ್ನು ಶಾಸಕ ಬಸವರಾಜ ಮತ್ತಿಮೂಡ ಮಂಗಳವಾರ ಪರಿಶೀಲಿಸಿದರು   

ಕಮಲಾಪುರ: ‘ಈ ಹಿಂದೆ ಮಳೆಯಾದಾಗ ಹಾನಿಯಾಗಿ ಅಳಿದುಳದ ಬೆಳೆ ಸಹ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ಮಳೆ ನಿಂತ ಮೇಲೆ ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಕೃಷಿ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದು ಶಾಸಕ ಬಸವಾರಾಜ ಮತ್ತಿಮೂಡ ತಿಳಿಸಿದರು.

ಸರಡಗಿ, ಬೋಳೆವಡ, ಕಲ್ಲಬೇನೂರ, ಖಾಜಾ ಕೋಟನೂರ, ವೆಂಕಟಬೇನೂರ, ಇಟಗಾ ಅಹಮದಾಬಾದ್, ಭೂಪಾಲ ತೆಗನೂರ, ಮಾಲಗತ್ತಿ ಗ್ರಾಮಗಳಿಗೆ ಮಂಗಳವಾರ ಭೇಟಿ ಬೆಳೆ ಹಾನಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕಳೆದ ತಿಂಗಳಲ್ಲಿ ಮಳೆಯಿಂದ ಹಾನಿಯಾದಾಗ ಕ್ಷೇತ್ರದೆಲ್ಲೆಡೆ ಸಂಚರಿಸಿದ್ದೆ. ಪರಿಹಾರ ಒದಗಿಸಲು ಸಮೀಕ್ಷೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಅದರಂತೆ ಕೆಲವು ಕಡೆಗಳಲ್ಲಿ ಸಮೀಕ್ಷೆ ಕೈಗೊಂಡಿದ್ದಾರೆ. ಈ ತಿಂಗಳು ಮತ್ತೆ ಮಳೆಯಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮತ್ತೆ ಸಮೀಕ್ಷೆ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಈ ಭಾಗದಲ್ಲಿ ತೋಟಗಾರಿಕೆ ಹೆಚ್ಚಾಗಿದ್ದು ಹೂವು, ಹಣ್ಣು, ತರಕಾರಿ ಬೆಳೆಗಳೆಲ್ಲ ಕೊಚ್ಚಿಹೋಗಿದೆ. ಡ್ರಿಪ್, ಪೈಪ್‍ಲೈನ್, ಯಂತ್ರೋಪಕರಣಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

‘ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಕರೆ ತಂದಿದ್ದೇನೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಬೆಳೆ ಹಾನಿ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗಳ್ಳಲಿದ್ದಾರೆ’ ಎಂದು ಮತ್ತಿಮೂಡ ಭರವಸೆ ನೀಡಿದರು.

ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ, ತೋಟಗಾರಿ ಸಹಾಯಕ ನಿರ್ದೇಶಕ ಶಂಕರ ಪಟವಾದಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಪಿಡಬ್ಲುಡಿ ಅಧಿಕಾರಿಗಳು, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.