ADVERTISEMENT

ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವ: ಪ್ರೇಕ್ಷಕರಿಂದ ಮೆಚ್ಚುಗೆಯ ಚಪ್ಪಾಳೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 6:58 IST
Last Updated 24 ಫೆಬ್ರುವರಿ 2025, 6:58 IST
ಕಲಬುರಗಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ಪುಣೆಯ ಲಹೇಜ ಡ್ಯಾನ್ಸ್ ಅಕಾಡೆಮಿಯ ಅಬಾ ಅಟಿ ತಂಡದವರ ಕಥಕ್ ನೃತ್ಯ ಪ್ರದರ್ಶನದ ದೃಶ್ಯ
ಕಲಬುರಗಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ಪುಣೆಯ ಲಹೇಜ ಡ್ಯಾನ್ಸ್ ಅಕಾಡೆಮಿಯ ಅಬಾ ಅಟಿ ತಂಡದವರ ಕಥಕ್ ನೃತ್ಯ ಪ್ರದರ್ಶನದ ದೃಶ್ಯ   

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ಪ್ರದರ್ಶನಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು, ಅದರಲ್ಲೂ ಕಥಕ್ ನೃತ್ಯ ಸೇರಿದ್ದ ಪ್ರೇಕ್ಷಕರಿಗೆ ಮುದ ನೀಡಿತು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘ ಈ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವ ಆಯೋಜಿಸಿದ್ದವು.

ಬೆಂಗಳೂರಿನ ಕಲಾವಿದೆ ವೀಣಾ ಶೇಷಾದ್ರಿ ಅವರ ತಂಡದವರು ಅಹಲ್ಯಾಬಾಯಿ ಹೋಳ್ಕರ್ ಕುರಿತ ನೃತ್ಯ ರೂಪಕದೊಂದಿಗೆ ಮಹೋತ್ಸವಕ್ಕೆ ಆರಂಭ ನೀಡಿದರು. ಮರಾಠಾ ವಂಶಸ್ಥರ ಮಾಳ್ವಾ ಪ್ರದೇಶದ ಮಹಾರಾಣಿಯಾಗಿದ್ದ ಅಹಲ್ಯಾಬಾಯಿಯ ಅರಣ್ಯ ರಕ್ಷಣೆ, ಪ್ರೇಮ, ಧರ್ಮಬಲದಿಂದ ರಾಜ್ಯವಾಳಿದ್ದ ಸನ್ನಿವೇಶಗಳನ್ನು ಮನೋಜ್ಞವಾಗಿ ಕಲಾವಿದರು ಪ್ರಸ್ತುತಪಡಿಸಿದರು.

ADVERTISEMENT

ರೂಪಾ ಪತ್ತಾರ ತಂಡವರ ‘ಗಜವದನಾ ಬೇಡುವೆ ಗೌರಿ ತನಯ’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಭರತನಾಟ್ಯ ನೃತ್ಯದ ಭಂಗಿಗಳು ಭಕ್ತಿಯ ಹೊನಲು ಹರಿಸಿತು. ಈ ನಂತರದ ಕಥಕ್ ನೃತ್ಯ ನೆರೆದವರನ್ನು ಮಂತ್ರಮುಗ್ಧಗೊಳಿಸಿತು.

ಉತ್ತರ ಭಾರತದ ನೃತ್ಯ ಪ್ರಕಾರಗಳಲ್ಲಿ ಜನಪ್ರಿಯವಾದ ಕಥಕ್ ನೃತ್ಯವನ್ನು ಪುಣೆಯ ಲಹೇಜ ಡ್ಯಾನ್ಸ್ ಅಕಾಡೆಮಿಯ ಅಬಾ ಅಟಿ ತಂಡದವರ ನೃತ್ಯ ಪ್ರದರ್ಶನವು ಚೇತೋಹಾರಿಯಾಗಿ ಮೂಡಿ ಬಂತು. ಕಲಾವಿದರು ಕಥಕ್‌ನ ಸಾಂಪ್ರದಾಯಿಕ ಹೋರಿ, ದಕ್ಷ ಯಜ್ಞ ಹಾಗೂ ಕೃಷ್ಣನ ಕೀರ್ತನೆಯ ಭಕ್ತಿಯ ನೃತ್ಯ ಭಂಗಿಗಳು ಆಕರ್ಷಕವಾಗಿದ್ದವು. ನೃತ್ಯದ ಜೊತೆಗೆ ಒಬ್ಬೊಬ್ಬರಾಗಿ ‘ಥಾ ಥೇ ಥೇ ತಥ್ ಆ ಥೇ ಥೇ ತಥ್...’ ಎಂಬ ಮಧುರ ಕಂಠದಿಂದ ಹಾಡುತ್ತಾ, ಕುಣಿಯುತ್ತಾ ಪ್ಷೇಕ್ಷಕರ ಮೆಚ್ಚುಗೆಗೂ ಪಾತ್ರವಾದರು.

ಬದ್ರಿನಾಥ ಮುಡಬಿ, ರಾಘವೇಂದ್ರ ಕುಲಕರ್ಣಿ ಮತ್ತು ಸಂಗಡಿಗರ ತಬಲಾ ಸೋಲೋ ವಾದನ ಶ್ರೋತೃಗಳ ಮನ ತಣಿಸಿ, ಸಂಗೀತ ಲೋಕಕ್ಕೆ ಕರೆದೊಯ್ದಿತು. ಪದ್ಮಭೂಷಣ ವೆಂಪಟಿ ಚಿನ್ನ ಅವರ ಸತ್ಯಂ ಆರ್ಟ್ ಅಕಾಡೆಮಿ ಶಿವಕಾರಂ ಕುಚಿಪುಡಿ ನೃತ್ಯವೂ ಶಿವಭಕ್ತಿಯ ಸಮರ್ಪಣೆಯ ಶಕ್ತಿಯನ್ನು ಬಿಂಬಿಸಿತು.

ಹಿಂದೂಸ್ತಾನಿ ಗಾಯಕ ನಾಗೇಶ ಅಡ್ವಾನ್ ಕರ್ ಅವರ ಕಂಚಿನ ಕಂಠದಿಂದ ತೇಲಿಬಂದ ಗಾಯನ ಪ್ರೇಕ್ಷಕರನ್ನು ರಂಜಿಸಿತು. ‘ಪಂಡರಿನಾಥ ವಿಠೋಬಾ’ ಗಾಯನವು ಭಕ್ತಿಯಲ್ಲಿ ತೇಲಿಸಿತು. ಜಡೇಶ ಹೂಗಾರ ಅವರ ತಬಲಾ, ವಿನಾಯಕ ಅವರು ಹಾರ್ಮೋನಿಯಂ ಸಾಥ್ ನೀಡಿದರು.

ಅಂಬೇಡ್ಕರ್ ಭವನ ಹೊರಗಡೆ ಮಧ್ಯಾಹ್ನದ ಸೂರ್ಯ ಪ್ರಖರವಾದ ಕಿರಣಗಳಿಂದ ವಾತಾವರಣವನ್ನು ಬಿಸಿಯಾಗಿಸಿದ್ದ. ಭವನದ ಒಳಗೆ ರಫೀಕ್ ಖಾನ್ ಮತ್ತು ಶಫೀಕ್ ಖಾನ್ ಸಹೋದರರು ಸಿತಾರ್ ವಾದನದ ಒಂದೊಂದೇ ತಂತಿಗಳಲ್ಲಿ ಸಂಗೀತದ ಸ್ವರಗಳನ್ನು ಮೀಟುತ್ತ ಕೇಳುಗರ ಕರ್ಣಗಳಿಗೆ ತಣ್ಣನೆಯ ಮುದ ನೀಡಿದರು.

ಬಾಬುರಾವ ಕೋಬಾಳ ಅವರು ತತ್ವಪದಗಳ ಗಾಯನ ನಡೆಸಿಕೊಟ್ಟರು.

ನಗರದಲ್ಲಿ ಬಹುದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ದೇಶದ ನಾನಾ ಭಾಗದಿಂದ ಮೇರು ಕಲಾವಿದರು ಬಂದಿದ್ದರು. ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬರಲಿಲ್ಲ ಎಂಬ ಬೇಸರ ಕಲಾವಿದರು, ಆಯೋಜಕರು, ಗಣ್ಯರಿಂದ ಕೇಳಿ ಬಂತು.

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿವಿಯ ಕುಲಸಚಿವ ಪ್ರೊ.ರಮೇಶ ಲಂಡನಕರ್, ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಅಕಾಡೆಮಿಯ ಸದಸ್ಯ ಸಂಚಾಲಕ ಶಂಕ್ರಪ್ಪ ಬಿ. ಹೂಗಾರ, ಅಕಾಡೆಮಿಯ ರಿಜಿಸ್ಟ್ರಾರ್ ಎನ್‌.ನರೇಂದ್ರ ಬಾಬು, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಹೂಗಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಸೇರಿ ಹಲವರು ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ಭರತನಾಟ್ಯ ಪ್ರದರ್ಶಿಸಿದ ಕಲಾವಿದರು
ಕಲಬುರಗಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ರಫೀಕ್ ಖಾನ್ ಮತ್ತು ಶಫಿಕ್ ಖಾನ್ ಸಹೋದರರ ಸಿತಾರ್ ವಾದನ ನಡೆಸಿಕೊಟ್ಟರು
ಕಲಬುರಗಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ಭರತನಾಟ್ಯ ಪ್ರದರ್ಶಿಸಿದ ಕಲಾವಿದರು
ಕಲಬುರಗಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ಶಿವಕಾರಂ ನೃತ್ಯದ ದೃಶ್ಯ
ಕಲಬುರಗಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವವನ್ನು ಶಾಸಕ ಎಂ.ವೈ.ಪಾಟೀಲ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು

‘ಭಾರತೀಯ ಸಂಗೀತಕ್ಕೆ ದೇವರು ಎದ್ದು ಕುಣಿಯುವ’

‘ಪಾಶ್ಚಿಮಾತ್ಯ ಸಂಗೀತ ಕೇಳಿದರೆ ಭೂತಗಳು ಎಚ್ಚರಗೊಳ್ಳುತ್ತವೆ. ನಮ್ಮ ಭಾರತೀಯ ಸಂಗೀತ ಪ್ರಕಾರಗಳನ್ನು ನುಡಿಸಿದರೆ ಹಾಡಿದರೆ ದೇವರೇ ಎದ್ದು ಕುಣಿಯುತ್ತಾನೆ’ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು. ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಸಂಗೀತ ನೃತ್ಯ ಕಲೆಗಳು ಜಾತಿ ವರ್ಣ ಭಾಷೆ ಧರ್ಮಗಳನ್ನು ಮೀರಿ ನಮ್ಮೆಲ್ಲರನ್ನೂ ಒಂದುಗೂಡಿಸುತ್ತವೆ. ಸಂಗೀತದ ಸ್ವರಕ್ಕೆ ಮೊಗ್ಗು ಅರಳುತ್ತದೆ ನಮ್ಮಲ್ಲಿನ ಮಾನಸಿಕ ರೋಗವೂ ನಿವಾರಣೆಯಾಗುತ್ತದೆ’ ಎಂದರು. ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಮಾತನಾಡಿ ‘ನೃತ್ಯ ಸಂಗೀತ ಕಲೆಗಳು ದೇವಸ್ಥಾನಗಳಲ್ಲಿ ಮೂಡಿಬಂದು ಮುಂದೆ ರಾಜಾಶ್ರಯ ಪಡೆದ ಈಗ ಜನರ ನಡುವಿನ ಕಲೆಯಾಗಿ ಉಳಿದಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.