ADVERTISEMENT

ಸೈಕಲ್ ಬಳಸಿ; ಇಂಧನ-ಪರಿಸರ ಉಳಿಸಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 4:54 IST
Last Updated 20 ಜನವರಿ 2019, 4:54 IST
   

ಕಲಬುರ್ಗಿ: ಆಗಸದಲ್ಲಿ ನೇಸರ ಉದಯಿಸುತ್ತಿದ್ದಂತೆಯೇ ಇತ್ತ ಸಂಭ್ರಮ ಮನೆ ಮಾಡಿತ್ತು. ಚುಮುಚುಮು ಚಳಿಯಿಂದ ಕೊಂಚ ನಿರಾಳರಾದ ಶಾಲಾ- ಕಾಲೇಜು ವಿದ್ಯಾರ್ಥಿಗಳು ನೋಡನೋಡುತ್ತಿದ್ದಂತೆಯೇ ಗುಂಪುಗುಂಪಾಗಿ ರಸ್ತೆಗೆ ಇಳಿದರು. ಶ್ವೇತ ವಸ್ತ್ರಧಾರಿಗಳಾಗಿ ಸೈಕಲ್ ತುಳಿಯಲು ಆರಂಭಿಸಿದರು. ಇವರಿಗೆ ಸಾಥ್ ನೀಡಲೆಂಬಂತೆ ಸೂರ್ಯ ಕಿರಣಗಳು ಪ್ರಜ್ವಲಿಸತೊಡಗಿದವು.

- ಇವು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಕಂಡು ಬಂದ ದೃಶ್ಯಗಳು. ಸಂದರ್ಭ: ಇಂಡಿಯನ್ ಆಯಿಲ್ ಕಂಪನಿ ಆಯೋಜಿಸಿದ್ದ 'ಸಕ್ಷಮ್ ಸೈಕ್ಲಾಥಾನ್-2019'.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಂಗ ಸಂಸ್ಥೆಯಾದ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ ಮತ್ತು ಇಂಡಿಯನ್ ಆಯಿಲ್ ಕಂಪನಿಯಿಂದ ಆಯೋಜಿಸಿದ್ದ ಸೈಕ್ಲಾಥಾನ್‌ನಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ನಗರದ ನಾಗರಿಕರು ನಿರೀಕ್ಷೆ ಮೀರಿ ಭಾಗವಹಿಸಿದ್ದರು.

ADVERTISEMENT

ಇಂಧನ ಉಳಿತಾಯದ ಮಹತ್ವ, ಇಂಧನದ ಸಮರ್ಪಕ ಬಳಕೆ ಮತ್ತು ಪರಿಸರವನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಸೈಕ್ಲಾಥಾನ್ ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಚಾಲನೆ ನೀಡಿದರು.
ಸೈಕ್ಲಾಥಾನ್ ನಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಬಿಳಿ ಟೀಶರ್ಟ್ ಮತ್ತು ಕ್ಯಾಪ್‌ಗಳನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ಡಾ. ರಾಜಾ, ಇಂಧನ ಉಳಿತಾಯ ಇಂದಿನ ಅಗತ್ಯವಾಗಿದೆ. ಇಂಧನ- ಪರಿಸರ ಉಳಿಸಿ, ಬೆಳೆಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಹೋ.. ಹಾ.. ಬನ್ನಿ.. ಬೇಗ.. ಬೇಗ ಎಂದು ಹುರುಪಿನಿಂದ ಕೂಗುತ್ತಲೇ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮತ್ತು ನಾಗರಿಕರು ಸೈಕಲ್ ಪೆಡಲ್ ತುಳಿಯಲು ಆರಂಭಿಸಿದರು.

ಜಿಲ್ಲಾಧಿಕಾರಿ ಕಚೇರಿ, ಅನ್ನಪೂರ್ಣ ಕ್ರಾಸ್, ಬಿ.ಶ್ಯಾಮಸುಂದರ ವೃತ್ತ, ಬಸವೇಶ್ವರ ಆಸ್ಪತ್ರೆ ಮಾರ್ಗವಾಗಿ ಬಿಲಗುಂದಿ ವೃತ್ತ ತಲುಪಿದರು. ದಾರಿಯುದ್ದಕ್ಕೂ ಇಂಧನ ಉಳಿತಾಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ರಸ್ತೆಯ ಅಕ್ಕ- ಪಕ್ಕ ನಿಂತಿದ್ದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಸೈಕ್ಲಾಥಾನ್ ಸಾಗಿದ ಮಾರ್ಗವು ರಸ್ತೆಗೆ ಬಿಳಿ ಬಣ್ಣ ಬಳಿದಂತೆ ಗೋಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.