ADVERTISEMENT

ದರ್ಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಆ 16ಕ್ಕೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 16:14 IST
Last Updated 7 ಆಗಸ್ಟ್ 2022, 16:14 IST
ಸಂತೋಷ ವರ್ಗೀಸ್
ಸಂತೋಷ ವರ್ಗೀಸ್   

ಕಲಬುರಗಿ: ಇಲ್ಲಿನ ಹೊಸ ಜೇವರ್ಗಿ ರಸ್ತೆಯ ವರ್ಗೀಸ್ ಸಂಕೀರ್ಣದಲ್ಲಿ ನೂತನವಾಗಿ ಆರಂಭಿಸಲಾದ ದರ್ಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಇದೇ ಆ 16ರಂದು ನೆರವೇರಲಿದೆ ಎಂದು ನರರೋಗ ತಜ್ಞ ಡಾ.ಶಶಾಂಕ್ ರಾಮದುರ್ಗ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಆಸ್ಪತ್ರೆಯು 50 ಹಾಸಿಗೆ ಸಾಮರ್ಥ್ಯವನ್ನು ಹೊಂದಿದ್ದು, ದಿನದ 24 ಗಂಟೆಯೂ ಅಪಘಾತ, ಹೃದ್ರೋಗ, ನರರೋಗ, ಸ್ತ್ರೀರೋಗ, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು. ನುರಿತ ವೈದ್ಯಕೀಯ ಸಿಬ್ಬಂದಿ ಇದ್ದು, ನಾಲ್ಕು ಶಸ್ತ್ರಚಿಕಿತ್ಸಾ ಕೊಠಡಿಗಳು, ಏಳು ವೆಂಟಿಲೇಟರ್‌ಗಳನ್ನು ಖರೀದಿಸಲಾಗಿದೆ’ ಎಂದರು.

‘ಒಟ್ಟು 40 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಆಸ್ಪತ್ರೆಯನ್ನು ರೂಪಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯ ಒಳಗೊಂಡಂತೆ ಮೂತ್ರಪಿಂಡ ಚಿಕಿತ್ಸಾ ವಿಭಾಗ, ಪ್ಲಾಸ್ಟಿಕ್ ಸರ್ಜರಿ, ಪ್ರಸೂತಿ ವಿಭಾಗ, ಎಲುಬು, ಕೀಲುಗಳ ನೋವಿಗೆ ಚಿಕಿತ್ಸೆ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಲ್ಯಾಪ್ರೊಸ್ಕೊಪಿಕ್ ಸರ್ಜರಿ, ಮಕ್ಕಳ ಚಿಕಿತ್ಸಾ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ದಂತರೋಗ ಚಿಕಿತ್ಸೆ ಮತ್ತು ಫಿಸಿಯೊಥೆರಪಿ ವಿಭಾಗಗಗಳನ್ನು ಒಳಗೊಂಡ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ’ ಎಂದರು.

ADVERTISEMENT

24 ಗಂಟೆ ಕಾರ್ಯನಿರ್ವಹಿಸುವ ಫಾರ್ಮಸಿ ಸೌಲಭ್ಯ, ಸಿ.ಟಿ. ಸ್ಕ್ಯಾನ್, ಅತ್ಯಾಧುನಿಕ ಲ್ಯಾಬೊರೇಟರಿ, ಎಕ್ಸ್ ರೇ, ಅಲ್ಟ್ರಾಸೌಂಡ್ ಮತ್ತು ರಕ್ತನಿಧಿ ಸೌಲಭ್ಯವನ್ನು ಸಹ ಆಸ್ಪತ್ರೆ ಒಳಗೊಂಡಿದೆ. ಇದೆಲ್ಲದರ ಜೊತೆಗೆ 20 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ, ಡಯಾಲಿಸಿಸ್, ಮಕ್ಕಳ ನಿಗಾ ಘಟಕ, ಅಂತರರಾಷ್ಟ್ರೀಯ ಮಟ್ಟದ ಶಸ್ತ್ರಚಿಕಿತ್ಸಾ ಘಟಕ, ವಿಶಾಲವಾದ ಡಿಲಕ್ಸ್ ಕೊಠಡಿಗಳು ಹಾಗೂ ಜನರಲ್ ವಾರ್ಡ್ ಸೌಲಭ್ಯಗಳಿವೆ’ ಎಂದರು.

ಎಲುಬು ಮತ್ತು ಕೀಲು ತಜ್ಞ ಡಾ. ಮಾರ್ತಾಂಡ ಕುಲಕರ್ಣಿ, ಡಾ.ಶಿವಕುಮಾರ್ ಸಿ.ಆರ್., ಡಾ.ಗುರುರಾಜ ದೇಶಪಾಂಡೆ, ಡಾ.ಹರ್ಷಾ, ಡಾ.ಪ್ರಮೋದ್, ಡಾ.ರಾಜ್ ಅಹ್ಮದ್, ಡಾ.ವರುಣ್ ಕುಲಕರ್ಣಿ, ಡಾ.ಗಿರೀಶ್ ರೋಣದ, ಡಾ.ಪ್ರಕಾಶ್ ಹಾದಿಮನಿ, ಡಾ.ವಿಕಾಸ್ ಜೋಶಿ, ಡಾ.ಅಭಿಷೇಕ್ ಕುಲಕರ್ಣಿ, ಡಾ.ಮನ್ಜಿತ್, ಡಾ.ಸುಮಿತ್ ದೇಶಪಾಂಡೆ, ಡಾ.ವಿವೇಕ್, ನಿಶಾ ವರ್ಗೀಸ್, ಡಾ.ವೈಷ್ಣವಿ ಹಾಗೂ ಡಾ.ಮಾನಸಿ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿದ್ದರು.

ಚಿಕಿತ್ಸೆಗೆ ಬರುವ ರೋಗಿಗಳಿಗೆ ಮೊದಲು ಮಾನವೀಯತೆಯಿಂದ ನೋಡಿಕೊಳ್ಳುವುದೇ ದರ್ಶ ಆಸ್ಪತ್ರೆಯ ಧ್ಯೇಯವಾಗಿದೆ. ಶಸ್ತ್ರಚಿಕಿತ್ಸೆ ತ್ಯಾಜ್ಯದಿಂದ ನಂಜು ಆಗದಂತೆ ತಡೆಯಲು ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಪಾಸ್ ಬಾಕ್ಸ್ ವ್ಯವಸ್ಥೆ ಮಾಡಲಾಗಿದೆ
‌ಸಂತೋಷ್ ವರ್ಗಿಸ್
ದರ್ಶ ಆಸ್ಪತ್ರೆ ಎಂ.ಡಿ ಮತ್ತು ಸಿಇಒ

ಶಸ್ತ್ರಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ಕೈಗೊಳ್ಳಲು ಸರ್ಕಾರದ ಎಲ್ಲ ಆರೋಗ್ಯ ಸೇವಾ ಯೋಜನೆಗಳ ಅಡಿಯಲ್ಲಿ ಚಿಕಿತ್ಸೆ ಕಲ್ಪಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ. ವಿವಿಧ ಆರೋಗ್ಯ ವಿಮಾ ಸಂಸ್ಥೆಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿದೆ
ಡಾ. ಶಶಾಂಕ ರಾಮದುರ್ಗ
ನರರೋಗ ತಜ್ಞ, ದರ್ಶ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.