ಕಲಬುರಗಿ: ‘ದಾಸ ಸಾಹಿತ್ಯದ ಬಗ್ಗೆ ಹೆಚ್ಚಿನ ರೀತಿಯ ಅಧ್ಯಯನ ನಡೆಯುವಂತೆ ಆಗಲು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ದಾಸ ಸಾಹಿತ್ಯ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು’ ಎಂದು ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ ಅಧ್ಯಕ್ಷ ಗೋಪಾಲಾಚಾರ್ಯ ಅಕಮಂಚಿ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲೊನಿಯಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾನುವಾರ ವಿಶ್ವಮಧ್ವ ಮಹಾಪರಿಷತ್ ವತಿಯಿಂದ ಆಯೋಜಿಸಿದ್ದ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ 24ನೇ ವಾರ್ಷಿಕೋತ್ಸವ ಹಾಗೂ ಜಗನ್ನಾಥ ವಿಠ್ಠಲ ಮತ್ತು ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದಾಸ ಸಾಹಿತ್ಯದ ಅಧ್ಯಯನ ಪೀಠ ಸ್ಥಾಪಿಸಬೇಕು ಎಂಬ ಬೇಡಿಕೆ ಬಹುದಿನಗಳಿಂದ ನನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರವು ಈ ಬಗ್ಗೆ ಗಮನಹರಿಸಿ ಪೀಠ ಸ್ಥಾಪನೆಗೆ ಮುಂದಾಗಬೇಕು. ದಾಸ ಸಾಹಿತ್ಯಕ್ಕೆ ಸಂಬಂಧಪಟ್ಟ ಸಂಘಟನೆಗಳು ದಾಸ ಸಾಹಿತ್ಯದ ಬಗ್ಗೆ ಪ್ರಚಾರ ಮಾಡುವಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಿದೆ’ ಎಂದರು.
ಪತ್ರಕರ್ತ ಶೇಷಮೂರ್ತಿ ಅವಧಾನಿ ಮಾತನಾಡಿದರು.
ನೂತನ ವಿದ್ಯಾಲಯ ಸಂಸ್ಥೆ ಅಧ್ಯಕ್ಷ ಗೌತಮ ಜಾಗಿರದಾರ, ಪತ್ರಕರ್ತ ಶಾಮಸುಂದರ ಕುಲಕರ್ಣಿ, ಭರತನಾಟ್ಯ ಕಲಾವಿದ ಅನಂತ ಚಿಂಚನಸೂರ ಹಾಗೂ ವರದೇಂದ್ರ ದಾಸ ಅವರಿಗೆ ‘ಜಗನ್ನಾಥ ವಿಠ್ಠಲ ಪ್ರಶಸ್ತಿ’, ಅರ್ಚಕರಾದ ಮಧುಸೂದನಾಚಾರ್ಯ ಪ್ರಾಕ್ಟೋರ್ ಹಾಗೂ ಅನಂತ ಭಟ್ ಜೋಶಿ ಹೆಬ್ಬಾಳ ಅವರಿಗೆ ‘ವಿಪ್ರಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ವೈಷ್ಣವಿ ಭಜನಾ ಮಂಡಳಿಗೆ ವರ್ಷದ ಅತ್ಯುತ್ತಮ ಭಜನಾ ಮಂಡಳಿ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಸ್ವಾಮಿರಾವ್ ಕುಲಕರ್ಣಿ, ಲೇಖಕ ಶ್ರೀನಿವಾಸ ಸಿರನೂರಕರ್, ವಾಹಿನಿಯ ಉಪಾಧ್ಯಕ್ಷ ವ್ಯಾಸರಾಜ, ಸಂಚಾಲಕ ಭೀಮಭಟ್ಟ ಬೆಂಕಿ ಮೋತಕಪಲ್ಲಿ, ವ್ಯಾಸರಾಜ ಸಂತೆಕೆಲ್ಲೂರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.