ಕಲಬುರಗಿ: ಸಿಮೆಂಟ್ ಮೇಲ್ಚಾವಣಿಯಿಂದ ಚಾಚಿಕೊಂಡು ತುಕ್ಕು ಹಿಡಿದು ಹೊರ ಬಂದ ಕಬ್ಬಿಣದ ಕಂಬಿಗಳು, ಬಿರುಕು ಬಿಟ್ಟ ಗೋಡೆಗಳು, ಕುರಿದೊಡ್ಡಿಯಂತಹ ಮಳಿಗಗಳ ನೆಲದಡಿಯ ಸಣ್ಣ ಕೋಣೆಗಳು, ಮಳಿಗೆಗಳ ಮುಂದೆಯೇ ಹರಿಯುವ ಕೊಳಕು ನೀರು, ಕಿಷ್ಕಿಂಧೆಯಂತಹ ಜಾಗದಲ್ಲೇ ನೂರಾರು ವ್ಯಾಪಾರಿಗಳ ವಹಿವಾಟು, ಮಳೆಯಾದರೆ ಮೂಗು ಮುಚ್ಚಿಕೊಂಡು ಓಡಾಡುವ ಗ್ರಾಹಕರು...
ಹೀಗೆ ಸಾಲು– ಸಾಲು ಮೂಲಸೌಕರ್ಯಗಳ ಕೊರತೆಯಿಂದ ಕಲಬುರಗಿ ಮಹಾನಗರ ಪಾಲಿಕೆಗೆ ಆದಾಯದ ಮೂಲವಾದ ಸೂಪರ್ ಮಾರ್ಕೆಟ್‌ನ ತರಕಾರಿ ಮಾರುಕಟ್ಟೆಯ ಮುಂಭಾಗದ ಕಟ್ಟಡ ಮತ್ತು ಒಳಗಿನ ಮಳಿಗೆಗಳು ಸೊರಗುತ್ತಿವೆ. ವಾಣಿಜ್ಯ ಮಳಿಗೆಗಳ ಗೋಡೆಗಳು, ಮೇಲ್ಚಾವಣಿ, ವ್ಯಾಪಾರದ ಕಟ್ಟೆಗಳು, ಪ್ರವೇಶದ್ವಾರ ಶಿಥಿಲಾವಸ್ಥೆ ತಲುಪಿವೆ.
1965ರಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದ ವೀರೇಂದ್ರ ಪಾಟೀಲ ಅವರು ಅಂದಿನ ಪುರಸಭೆ ತರಕಾರಿ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಆ ನಂತರದ ಕೆಲವೇ ವರ್ಷಗಳಲ್ಲಿ ನೂರಾರು ಮಳಿಗೆಗಳ ಕಟ್ಟಡವೂ ತಲೆ ಎತ್ತಿತು. ಐದೂವರೆ ದಶಕಗಳಿಂದ ತರಕಾರಿ, ಹಣ್ಣು, ಹೂವು, ಕಿರಾಣಿ ಸಾಮಗ್ರಿಗಳ ಜತೆಗೆ ಬಟ್ಟೆ, ಬ್ಯಾಂಗಲ್ ಸ್ಟೋರ್, ಪಾದರಕ್ಷೆ ಅಂಗಡಿಗಳ ವಹಿವಾಟಿನ ಕೇಂದ್ರವಾಗಿದೆ. ಈಗ ನಿರ್ವಹಣೆಯ ಕೊರತೆಯಿಂದಾಗಿ ಕಟ್ಟಡವು ಅಪಾಯಕಾರಿ ಸ್ಥಿತಿಯಲ್ಲಿದೆ.
‘ವರ್ತಕರ ಬದುಕಿಗೆ ಜೀವನಾಧಾರವಾದ ಮಾರುಕಟ್ಟೆ ಇದೀಗ ಶಿಥಿಲಾವಸ್ಥೆಯನ್ನು ತಲುಪಿದೆ. ಕೆಲವು ಮಳಿಗೆಗಳು ಬಳಕೆಗೂ ಯೋಗ್ಯವಾಗದೆ ಕಸದ ತೊಟ್ಟಿಯಂತೆ ಆಗಿವೆ. ಮಳೆಯ ನೀರು ಮಾರುಕಟ್ಟೆ ಪ್ರದೇಶದಿಂದ ಹೊರಗಡೆ ಹರಿದು ಹೋಗದೆ ತಗ್ಗು ಪ್ರದೇಶದಲ್ಲಿ ನಿಲ್ಲುತ್ತಿದೆ. ಯಾವಾಗ ಏನಾಗುತ್ತದೆ ಎಂಬ ಭಯದಲ್ಲಿಯೇ ವ್ಯಾಪಾರಸ್ಥರು ವಹಿವಾಟು ನಡೆಸುತ್ತಿದ್ದಾರೆ’ ಎನ್ನುತ್ತಾರೆ ವರ್ತಕರು.
‘ಮಾರಕಟ್ಟೆಗೆ ಖರೀದಿಗೆ ಬಂದರೆ ಶೌಚಾಲಯ, ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಕೆಲವು ವ್ಯಾಪಾರಿಗಳು ಸಹ ಹಾಳು ಬಿದ್ದಿರುವ ಮಳಿಗೆಗಳ ಮುಂದೆಯೇ ಕೊಳೆತ ಹಣ್ಣು, ತರಕಾರಿಗಳನ್ನು ಎಸೆಯುತ್ತಾರೆ. ಸುಸಜ್ಜಿತವಾದ ಕಟ್ಟಡವಾದರೆ ಎಲ್ಲರಿಗೂ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಗ್ರಾಹಕರು.
ಉಪ ಬಾಡಿಗೆ ಹಾವಳಿ: ‘ಸೂಪರ್ ಮಾರ್ಕೆಟ್‌ನ ಕಟ್ಟಡವು ಪಾಲಿಕೆಗೆ ಸೇರಿದ್ದು ಎಂಬುದು ಕೆಲವು ಉಪ ಬಾಡಿಗೆದಾರರಿಗೆ ಗೊತ್ತಿಲ್ಲ. ದಶಕಗಳ ಹಿಂದೆಯೇ ಹರಾಜಿನಲ್ಲಿ ಬಾಡಿಗೆ ಪಡೆದ ಕೆಲವರು ಹೆಚ್ಚಿನ ದರಕ್ಕೆ ಉಪ ಬಾಡಿಗೆಗೆ ಕೊಟ್ಟು ತಾವು ಲಾಭ ಮಾಡಿಕೊಳ್ಳುತ್ತಿದ್ದಾರೆ. ಪಾಲಿಕೆಗೂ ಸರಿಯಾಗಿ ಬಾಡಿಗೆ ಹಣ ಕಟ್ಟುತ್ತಿಲ್ಲ. ಒಂದು ವೇಳೆ ದರ ಪರಿಷ್ಕರಣೆಯಾಗಿ ಪ್ರಸ್ತುತ ಬೇಡಿಕೆಗೆ ತಕ್ಕಂತ ಬಾಡಿಗೆ ವಸೂಲಿ ಮಾಡಿದರೆ ಸೂಪರ್ ಮಾರ್ಕೆಟ್ ಒಂದರಿಂದಲೇ ಕೋಟ್ಯಂತರ ರೂಪಾಯಿ ಆದಾಯ ಪಾಲಿಕೆಗೆ ಬರುತ್ತದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಾಲಿಕೆಯ ನೌಕರ.
ಸಣ್ಣ ಮಳೆಯಾದರೂ ಮಳಿಗೆಯ ಮೇಲ್ಚಾವಣಿ ಮತ್ತು ಗೋಡೆಗಳು ನೀರು ಹಿಡಿದು ಸೋರಿಕೆಯಾಗುತ್ತದೆ. ಬಟ್ಟೆಗಳನ್ನು ಬೇರೊಂದು ಬದಿಗೆ ಸರಿಸಿಕೊಂಡು ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದೇವೆವರಲಕ್ಷ್ಮಿ ಎಂಬ್ರಾಯ್ಡರಿ ವರ್ತಕಿ
ಸೂಪರ್ ಮಾರ್ಕೆಟ್‌ನ ತರಕಾರಿ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಯಾವೆಲ್ಲಾ ಮಳಿಗೆಗಳಿಗೆ ಏನೆಲ್ಲಾ ಆಗಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆಅವಿನಾಶ ಶಿಂಧೆ ಪಾಲಿಕೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.