ADVERTISEMENT

ವಾಡಿ: ಸಂಕಷ್ಟದಲ್ಲಿ ಶೇಂಗಾ ಬೆಳೆಗಾರರು

20 ದಿನಗಳಿಂದ ಕಾಡುತ್ತಿರುವ ವಿದ್ಯುತ್‌ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 2:33 IST
Last Updated 5 ನವೆಂಬರ್ 2020, 2:33 IST
ಶೇಂಗಾ ಬೆಳೆಗಳಿಗೆ ನೀರುಣ್ಣಿಸಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ
ಶೇಂಗಾ ಬೆಳೆಗಳಿಗೆ ನೀರುಣ್ಣಿಸಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ   

ವಾಡಿ: ನಾಲವಾರದ ವಲಯದಲ್ಲಿ 20 ದಿನಗಳಿಂದ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿದ್ದು, ಶೇಂಗಾ ಬೆಳೆಗಳಿಗೆ ಕುತ್ತು ಎದುರಾಗಿದೆ.

ಅತಿವೃಷ್ಟಿಯ ಸವಾಲು ಮೆಟ್ಟಿ ನಿಂತ ಬೆಳೆಗಳು ಈಗ ನೀರಿಲ್ಲದೆ ಒಣಗುವ ಹಂತಕ್ಕೆ ತಲುಪಿವೆ. ಕೊಳವೆ ಬಾವಿ ನಂಬಿ ಬಿತ್ತನೆ ಮಾಡಿದ್ದ ಶೇಂಗಾ ಬೆಳೆಗಾರರು ವಿದ್ಯುತ್ ಕೊರತೆಯಿಂದ ನೀರು ಉಣಿಸಲು ಸಾಧ್ಯವಾಗದೆ ಒಣ ಗುತ್ತಿರುವ ಬೆಳೆ ಕಂಡು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ನಾಲವಾರ ವಲಯದ ಲಾಡ್ಲಾಪುರ, ಹಣ್ಣಿಕೇರಾ, ಬಾಪು ನಗರ, ಯಾಗಾಪೂರ ಹಾಗೂ 10ಕ್ಕೂ ಅಧಿಕ ತಾಂಡಾಗಳ ಸಾವಿರಾರು ರೈತರು ಹಿಂಗಾರು ಹಂಗಾಮಿನ ಶೇಂಗಾ ಬಿತ್ತನೆ ಮಾಡಿದ್ದು, ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ತೀವ್ರ ವಿದ್ಯುತ್ ಕೊರತೆ ಶೇಂಗಾ ಬೆಳೆಗಾರರಿಗೆ ಕಂಟಕವಾಗಿ ಕಾಡುತ್ತಿದೆ.

ADVERTISEMENT

ಬೆಳೆಗಳು ಈಗ ಹೂವಾಡುವ ಹಂತದಲ್ಲಿದ್ದು, ನೀರು ಹರಿಸದಿದ್ದರೆ ಒಣಗಿ ಹೋಗುತ್ತವೆ. ಪ್ರಾರಂಭದಲ್ಲಿ ಹೆಚ್ಚು ಮಳೆಯ ಸಮಸ್ಯೆ ಎದುರಿಸಿದ್ದ ಬೆಳೆಗಾರರಿಗೆ ಈಗ ಒಣ ತೇವಾಂಶ ನುಂಗಲಾರದ ತುತ್ತಾಗಿದೆ.

‘ಮಳೆಯಿದ್ದಾಗ ನೀರಿನ ಅವಶ್ಯಕತೆ ಇರಲಿಲ್ಲ. ಈಗ ಮಳೆ ಹೋಗಿ 15 ದಿನಗಳಾಗಿದೆ. ಬೆಳೆಗಳಿಗೆ ನೀರು ಉಣಿಸದಿದ್ದರೆ ಕೈತಪ್ಪಿ ಹೋಗುತ್ತದೆ. ದುಬಾರಿ ಬೀಜ, ರಸಗೊಬ್ಬರ ಎಲ್ಲವೂ ಹಾಳಾಗಿ ಹೋಗುವ ಭೀತಿ ಉಂಟಾಗಿದೆ. ಬೇಗ ವಿದ್ಯುತ್ ಸಮಸ್ಯೆ ಪರಿಹರಿಸಿ ಸಮಸ್ಯೆಗೆ ಮುಕ್ತಿ ಹಾಡಬೇಕು' ಎಂದು ರೈತರಾದ ಥಾವರು ರಾಠೋಡ, ಪೂಮು ಚಂದು, ಖೀರು ಜಾಮ್ಲಾ, ಸಂತೋಷ ದೇವು ರಾಠೋಡ, ಡಾಕು ಕಸನು ಅಳಲು ತೋಡಿಕೊಂಡರು.

‘5 ಎಕರೆಯಲ್ಲಿ ದುಬಾರಿ ಬೆಲೆಯ 5 ಕ್ವಿಂಟಲ್‌ ಶೇಂಗಾ ಬಿತ್ತಿ ಒಂದು ತಿಂಗಳಾಯಿತು. ಸದ್ಯ ಬೆಳೆ ಹೂವಾಡುವ ಹಂತದಲ್ಲಿದ್ದು, ವಿದ್ಯುತ್ ಸಮಸ್ಯೆಯಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೋಜುನಾಯಕ ತಾಂಡಾದ ಹೀರು ಪೂಜಾರಿ ತಿಳಿಸಿದರು,

15 ಕ್ವಿಂಟಲ್‌ ತೊಗರಿ ಹರಗಿ ಶೇಂಗಾ ಬಿತ್ತಿದ್ದೇನೆ. ವಿದ್ಯುತ್ ಇಲ್ಲದೆ ಬಿತ್ತಿದ ಬೆಳೆಗಳೆಲ್ಲವೂ ಒಣಗಿ ಹೋಗುತ್ತಿವೆ’ ಎಂದು ಹಣ್ಣಿಕೇರಾ ತಾಂಡಾ ರೈತ ಪೋಮಾ ಚಂದು ಆತಂಕಿ ವ್ಯಕ್ತಪಡಿಸಿದರು.

ದಂಡೋತಿ ಗ್ರಾಮದಲ್ಲಿ ವಿದ್ಯುತ್ ಪೂರೈಸುವ ಟವರ್‌ಗಳು ನೆಲಕ್ಕಪ್ಪ ಳಿಸಿದ್ದು, ಸಮಸ್ಯೆಗೆ ಕಾರಣವಾಗಿದೆ. ದುರಸ್ತಿ ಕಾರ್ಯ ನಡೆಯುತ್ತಿದೆ. ನಾಲವಾರ ವಲಯದ ರೈತರಿಗೆ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿದೆ. ನಾಲವಾರ ಫೀಡರ್ ಮೂಲಕ ವಿದ್ಯುತ್ ನೀಡಲು ಯೋಜಿಸಿದ್ದು, ಆದಷ್ಟು ಬೇಗ ಸಾಕಾರಗೊಳ್ಳಲಿದೆ ಎಂದು ಚಿತ್ತಾಪುರ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭೀಮಾಶಂಕರಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.