ADVERTISEMENT

ರಾಷ್ಟ್ರ ಮಟ್ಟದ ಕ್ರೀಡಾ ಕಾಲೇಜು ಸ್ಥಾಪಿಸಿ: ಉಮೇಶ ಜಾಧವ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:15 IST
Last Updated 26 ಜುಲೈ 2022, 5:15 IST
ಡಾ. ಉಮೇಶ ಜಾಧವ್
ಡಾ. ಉಮೇಶ ಜಾಧವ್   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ ವಿಭಾಗೀಯ ಕೇಂದ್ರವಾದ ಕಲಬುರಗಿಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾ ಕಾಲೇಜು ಸ್ಥಾಪಿಸಬೇಕು’ ಎಂದು ಸಂಸದ ಡಾ.ಉಮೇಶ ಜಾಧವ್ ಮನವಿ ಮಾಡಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸೋಮವಾರ ಮಾತನಾಡಿದ ಅವರು, ‘ಕಲಬುರಗಿ ಜಿಲ್ಲೆ ವಿಭಾಗೀಯ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ. ನೆರೆಯ ಯಾದಗಿರಿ ಮತ್ತು ಬೀದರ್ ಜಿಲ್ಲೆಗಳ ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗಕ್ಕಾಗಿ ಕಲಬುರಗಿಯನ್ನೇ ತಮ್ಮ ಕೇಂದ್ರವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಎರಡು ವಿಶ್ವವಿದ್ಯಾಲಯಗಳ ಜತೆಗೆ ಕರ್ನಾಟಕದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯವೂ ಇದೆ’ ಎಂದು ಹೇಳಿದ್ದಾರೆ.

‘ಕಲಬುರಗಿ ಯಲ್ಲಿ ಮೂರು ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ವೈದ್ಯಕೀಯ ಕಾಲೇಜು, ಇಎಸ್‌ಐಸಿ

ADVERTISEMENT

ವೈದ್ಯಕೀಯ ಕಾಲೇಜು, ಖಾಸಗಿ ವೈದ್ಯಕೀಯ ಕಾಲೇಜು, ಚಿತ್ರಕಲಾ ಕಾಲೇಜು, ಹಲವು ಫಾರ್ಮಸಿ ಮತ್ತು ಪದವಿ ಕಾಲೇಜುಗಳಿವೆ. ಈ ಎಲ್ಲ ಶಿಕ್ಷಣ ಸಂಸ್ಥೆಗಳು ಕ್ರೀಡಾ ಸಂಕುಲ ಕೇಂದ್ರದ ಕೊರತೆ ಎದುರಿಸುತ್ತಿದೆ. ಕಲಬುರಗಿಯಲ್ಲಿ ಕ್ರೀಡಾ ಶಿಕ್ಷಣದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳೊಂದಿಗ ಉತ್ತಮ ಕ್ರೀಡಾ ಕಾಲೇಜಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ’ ಎಂದು ಸಂಸತ್ತಿನ ಗಮನಕ್ಕೆ ತಂದರು.

‘ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲಬುರಗಿಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾ ಕಾಲೇಜು ಸ್ಥಾಪಿಸುವಂತೆ ಮನವಿ ಮಾಡುತ್ತಿದ್ದೇನೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ 300 ಹಾಸಿಗೆಗಳ ವಸತಿ ನಿಲಯ ನಿರ್ಮಾಣದ ಮಾಡುವುದು ಸಹ ಅವಶ್ಯಕತೆ ಇದೆ’ ಎಂದು ಪ್ರಸ್ತಾಪಿಸಿದ್ದಾರೆ.

‘ಈ ಪ್ರದೇಶದಲ್ಲಿ ಹಾಕಿಯನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಗುಣಮಟ್ಟದ ಹಾಕಿ ಟರ್ಫ್ ಕೋರ್ಟ್‌ನ ನಿರ್ಮಾಣ ಮಾಡಬೇಕು. ಕಬ್ಬಡಿ, ಖೋ ಖೋ, ವಾಲಿಬಾಲ್, ಥ್ರೋಬಾಲ್, ಬ್ಯಾಸ್ಕೆಟ್‌ಬಾಲ್‌ನಂತಹ ಕ್ರೀಡೆಗಳನ್ನು ಆಯೋಜಿಸಲು ಅಂತರರಾಷ್ಟ್ರೀಯ ಗುಣಮಟ್ಟದ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕು. ಜತೆಗೆ ಇಲ್ಲಿನ ನ್ಯಾಯಾಲಯಕ್ಕೆ ಸಾರ್ವಜನಿಕ ಗ್ಯಾಲರಿ ನಿರ್ಮಾಣ ಮಾಡುವಂತೆ’ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.