ADVERTISEMENT

ಸೂತಕದ ಮನೆಯಾದ ಹಾಬಾಳ(ಟಿ) ಗ್ರಾಮ

ಗ್ರಾಮಸ್ಥರಲ್ಲಿ ಮಡುಗಟ್ಟಿದ ದುಃಖ–ಕಂಬಿನಿ ಮಿಡಿದ ಸಂಬಂಧಿಕರು

ಅವಿನಾಶ ಬೋರಂಚಿ
Published 9 ಮಾರ್ಚ್ 2025, 7:33 IST
Last Updated 9 ಮಾರ್ಚ್ 2025, 7:33 IST
<div class="paragraphs"><p>ಸೇಡಂ ಪಟ್ಟಣದ ಹಳೆ ಸರ್ಕಾರಿ ಆಸ್ಪತ್ರೆಯಲ್ಲಿ ನೆರೆದ ಹಾಬಾಳ್(ಟಿ) ಗ್ರಾಮಸ್ಥರು ಮತ್ತು ಸಂಬಂಧಿಕರು</p></div>

ಸೇಡಂ ಪಟ್ಟಣದ ಹಳೆ ಸರ್ಕಾರಿ ಆಸ್ಪತ್ರೆಯಲ್ಲಿ ನೆರೆದ ಹಾಬಾಳ್(ಟಿ) ಗ್ರಾಮಸ್ಥರು ಮತ್ತು ಸಂಬಂಧಿಕರು

   

ಸೇಡಂ: ತಾಲ್ಲೂಕಿನ ಹಾಬಾಳ(ಟಿ) ಗ್ರಾಮವು ಎರಡು ದಿನಗಳಿಂದ ಸೂತಕದ ಮನೆಯಂತಾಗಿದ್ದು, ದುರಂತದ ಆಘಾತದಿಂದ ಇನ್ನೂ ಹೊರಬಂದಿಲ್ಲ. ಮಕ್ಕಳನ್ನು ಕಳೆದುಕೊಂಡವರ ದುಃಖ, ರೋಧನೆ, ಕಣ್ಣೀರು ಒರೆಸಿ ಸಮಾಧಾನ ಪಡಿಸುತ್ತಿರುವ ದೃಶ್ಯಗಳು ಶೋಕವನ್ನು ಇಮ್ಮಡಿಗೊಳಿಸುವಂತಿವೆ.

ಚಿಕ್ಕವರಿಂದ ಹಿಡಿದು, ಹಿರಿಯರವರೆಗೆ ಎಲ್ಲರೂ ಕಣ್ಣೀರು ಹಾಕಿ ದುಃಖ ವ್ಯಕ್ತಪಡಿಸಿದರು. ಹಲವು ಮನೆಯಲ್ಲಿ ಅಡುಗೆ ಮಾಡದೆ, ಮೃತ ಕುಟುಂಬದ ದುಃಖದಲ್ಲಿ ಕಣ್ಣೀರಾದರು.

ADVERTISEMENT

‘ನಮ್ಮೂರಿಗೆ ಇಂಥ ಪರಿಸ್ಥಿತಿ ಬರಬಾರದಿತ್ತು...ಅಂತ ಹಣೆಯನ್ನು ನೆಲಕ್ಕೊತ್ತಿ ತಾಯಂದಿರು ಚಚ್ಚಿಕೊಂಡ ದೃಶ್ಯವು ಕಣ್ಣಾಲಿಗಳನ್ನು ತೇವಗೊಳಿಸಿತು. ಊರಿಗೆ ಬಂದವರೆಲ್ಲ ಬೈಕ್ ಮೇಲೆ ನಾಲ್ಕು ಹುಡುಗ್ರು ಸಾಯೋದಾ! ಮರುಕ ವ್ಯಕ್ತಪಡಿಸಿದರು. ಸಾಯೋ ವಯಸ್ಸೇನ್ರಿ ಅವರದ್ದು ಎಂಬುದು ಇನ್ನು ಹಲವರ ಮಾತು.

ಮೃತ ಯುವಕರ ತಾಯಿ-ತಂದೆ, ತಂಗಿ, ಅಕ್ಕ, ಚಿಕ್ಕಮ್ಮ, ದೊಡ್ಡಮ್ಮ... ಹೀಗೆ ಸಂಬಂಧಿಕರ ಆಕ್ರಂದನ ಗ್ರಾಮದಲ್ಲಿ ಮುಗಿಲು ಮುಟ್ಟಿತ್ತು. ಯಾಕ್‌ ಹೀಗ್ ಮಾಡಿದಿ ಮಗಾ, ಮನಿಗೆ ಬರ್ತಿನಿ ಅಂದಿದ್ದೆಲ್ಲೋ.. ಎಂಬ ತಾಯಂದಿರ ದುಃಖದ ನುಡಿಗಳು ನೆರೆದವರ ಕರುಳನ್ನು ಹಿಂಡುವಂತಿದ್ದವು.

ಮದುವೆ ಆಗಿಲ್ಲ: ಬೈಕ್ ಅಪಘಾತದಲ್ಲಿ ಮೃತಪಟ್ಟ ನಾಲ್ವರಿಗೂ ಮದುವೆಯಾಗಿರಲಿಲ್ಲ. ಎಲ್ಲರೂ 20ರ ಆಸುಪಾಸಿನ ಯುವಕರು. ಜೀವನದ ಸತ್ವವನ್ನು ಅರಿಯದವರು. ಪಿಯುಸಿ ಮುಗಿಸಿ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತ, ಕುಟುಂಬಕ್ಕೆ ಆಸರೆಯಾಗಿದ್ದರು. ಉನ್ನತ ಶಿಕ್ಷಣ ದೂರವಾಗಿತ್ತು.

ಕಂಬನಿ ಮಿಡಿದ ಶಿಕ್ಷಕರು: ಮೃತ ಯುವಕರ ಕುಟುಂಬಕ್ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಆರತಿ ಬಳಗಾರ ಸೇರಿದಂತೆ ಶಾಲಾ ಸಿಬ್ಬಂದಿ ದುಃಖದಲ್ಲಿ ಪಾಲ್ಗೊಂಡರು. ಶನಿವಾರ ಶಾಲೆಯಲ್ಲಿ ಮೌನ ಆಚರಿಸಿ ಶಾಲಾವಧಿ ಮೊಟುಕಗೊಳಿಸಿದರು.

‘ಊರಿನ ಇತಿಹಾಸದಲ್ಲಿಯೇ ಶುಕ್ರವಾರವು(ಮಾ.7) ದೊಡ್ಡ ದುರಂತದ ದಿನ. ಎರಡು ದಿನ ಊರಿಗೆ ಊರೇ ದುಃಖದಲ್ಲಿ ಮುಳುಗಿದೆ. ಬೈಕ್ ಅಪಘಾತದಲ್ಲಿ ನಾಲ್ವರು ಸಾಯುವುದು ದುರಂತವಲ್ಲದೇ ಮತ್ತೇನು?
ಸತೀಶ ಪೂಜಾರಿ ಮುಖಂಡ ಹಾಬಾಳ(ಟಿ)
ಮೂರು ಕುಟುಂಬಕ್ಕೆ ಒಬ್ಬರೇ ಗಂಡು ಮಕ್ಕಳು:
ಮೃತ ನಾಲ್ವರ ಕಟುಂಬದಲ್ಲಿ ಪ್ರಕಾಶ ಪೂಜಾರಿ ಎಂಬಾತನಿಗೆ ಒಬ್ಬ ಅಣ್ಣನಿದಿದ್ದು ಬಿಟ್ಟರೆ ಮಲ್ಲಿಕಾರ್ಜುನ ಪೂಜಾರಿ ಸುರೇಶರೆಡ್ಡಿ ಮತ್ತು ಸಿದ್ದಪ್ಪ ಗುಡಿಸಿ ಅವರು ಕುಟುಂಬದಲ್ಲಿ ಒಬ್ಬೋಬ್ಬರೇ ಮಕ್ಕಳು. ಮೃತ ಪ್ರಕಾಶ ಪೂಜಾರಿಯ ತಂದೆ ತಿಪ್ಪಣ್ಣ ಪೂಜಾರಿ ಅವರು ಕುಂಭಮೇಳ ಹಾಗೂ ಪ್ರಯಾಗ್ ರಾಜ್‌ಗೆ ತೆರಳಿದ್ದರು. ಅಲ್ಲಿಂದ ನೇರವಾಗಿ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದು ಶನಿವಾರ ರಾತ್ರಿ ಗ್ರಾಮಕ್ಕೆ ಮರಳಿದ ನಂತರ ಪುತ್ರನ ಅಂತ್ಯಕ್ರಿಯೆ ಜರುಗಿತು. ಮೃತರ ನಾಲ್ವರ ಪೈಕಿ ಸಿದ್ದಪ್ಪ ಗುಡಿಸಿ ಅಂತ್ಯಕ್ರಿಯೆ ಶುಕ್ರವಾರ ಜರುಗಿದರೆ ಸುರೇಶ ರೆಡ್ಡಿ ಪ್ರಕಾಶ ಪೂಜಾರಿ ಮತ್ತು ಮಲ್ಲಿಕಾರ್ಜುನ ಪೂಜಾರಿ ಅವರ ಅಂತ್ಯಕ್ರಿಯೆ ಶನಿವಾರ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.