ADVERTISEMENT

ರೈತ ಆತ್ಮಹತ್ಯೆ; ಸಿಗದ ಪರಿಹಾರ

ಒಂದು ವರ್ಷದಿಂದ ತಹಶೀಲ್ದಾರ್ ಕಚೇರಿಗೆ ಎಡತಾಕುತ್ತಿರುವ ಕುಟುಂಬ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 3:50 IST
Last Updated 14 ಅಕ್ಟೋಬರ್ 2020, 3:50 IST
ರೈತ ಬಾಬು ನಾಯಕ ಅವರ ಪತ್ನಿ ಮತ್ತು ಮಕ್ಕಳು
ರೈತ ಬಾಬು ನಾಯಕ ಅವರ ಪತ್ನಿ ಮತ್ತು ಮಕ್ಕಳು   

ವಡಗೇರಾ: ತಾಲ್ಲೂಕಿನ ಬೀರನಕಲ್ ತಾಂಡಾದಲ್ಲಿ ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಬಾಬು ನಾಯಕ ಕುಟುಂಬಕ್ಕೆ ಸರ್ಕಾರದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ.

ಬಾಬು ಅವರ ಪತ್ನಿರೇಣುಕಾ ಮಾತನಾಡಿ, ‘ಸಾಲಭಾದೆಯಿಂದ ಪತಿ ಆತ್ಮಹತ್ಯೆ ಮಾಡಿಕೊಂಡು ಒಂದು ವರ್ಷ ಕಳೆದಿದೆ. ನಮ್ಮ ಕುಟುಂಬಕ್ಕೆ ಅವರೇ ಆಧಾರ ಸ್ತಂಭವಾಗಿದ್ದರು. ಆರ್ಥಿಕ ಸಂಕಷ್ಟದಿಂದ ಇಬ್ಬರು ಮಕ್ಕಳು ಮತ್ತು ಅತ್ತೆ ಮಾವನನ್ನು ನೋಡಿಕೊಳ್ಳುವುದು ದುಸ್ತರವಾಗಿದೆ’ ಎಂದು ತಿಳಿಸಿದರು.

‘ಲಾಕ್‌ಡೌನ್ ಸಮಯದಲ್ಲಿ ನಮ್ಮ ಕುಟುಂಬ ತೀವ್ರ ಸಂಕಷ್ಟ ಅನುಭವಿಸಿತು. ಇಲ್ಲಿಯವರೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಮನೆಗೆ ಭೇಟಿ ಕೊಟ್ಟಿಲ್ಲ. ಸಂಬಂಧಿಸಿದ ಅಧಿಕಾರಿಗಳು ಪರಿಹಾರದ ಹಣವನ್ನು ನೀಡಬೇಕು’ ಎಂದು ಅವರು ಮನವಿ ಮಾಡಿದರು.

ADVERTISEMENT

‘ಮಗನನ್ನು ಕಳೆದುಕೊಂಡ ನಾವು ಅನಾಥರಾಗಿದ್ದೇವೆ. ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ವ್ಯವಸಾಯಕ್ಕಾಗಿ ಮಾಡಿದ ಸಾಲ ಹೇಗೆ ತೀರಿಸಬೇಕು ಎಂದು ಗೊತ್ತಾಗುತ್ತಿಲ್ಲ’ ಎಂದು ಬಾಬು ಅವರ ತಾಯಿ ಕಣ್ಣೀರಾದರು.

‘ಪರಿಹಾರ ನೀಡುವಂತೆ ತಹಶೀಲ್ದಾರ್ ಕಚೇರಿಗೆ ಹಲವು ಬಾರಿ ಭೇಟಿ ಕೊಟ್ಟು ಮನವಿ ಸಲ್ಲಿಸಿದ್ದೇವೆ. ಆದರೆ ಪರಿಹಾರದ ಹಣ ನೀಡಲು ಅನುದಾನ ಇಲ್ಲ ಎಂದು ನೆಪವೊಡ್ಡಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ರೇಣುಕಾ ಅವರ ಚಿಕ್ಕ‍ಪ್ಪ ದೇವಪ್ಪ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ವರದಿ ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವಿಳಂಬ ಮಾಡದೆ ಮೃತ ರೈತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥ ಮನೋಜ್ ರಾಥೋಡ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.