ADVERTISEMENT

ಜೇವರ್ಗಿ | ಕಾರಹುಣ್ಣಿಮೆ; ಎತ್ತುಗಳ ಓಡಿಸಿ ಸಂಭ್ರಮಿಸಿದ ರೈತರು

ಮುಂಗಾರು ಹಂಗಾಮಿನ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 13:25 IST
Last Updated 11 ಜೂನ್ 2025, 13:25 IST
ಜೇವರ್ಗಿಯಲ್ಲಿ ಎತ್ತಿನ ಮೇಲೆ ಜೈ ಆರ್‌ಸಿಬಿ ಎಂದು ಬಣ್ಣ ಬರೆದು ಅಭಿಮಾನ ತೋರಿದ ರೈತ ಲಿಂಗರಾಜ ಮಾಸ್ಟರ್
ಜೇವರ್ಗಿಯಲ್ಲಿ ಎತ್ತಿನ ಮೇಲೆ ಜೈ ಆರ್‌ಸಿಬಿ ಎಂದು ಬಣ್ಣ ಬರೆದು ಅಭಿಮಾನ ತೋರಿದ ರೈತ ಲಿಂಗರಾಜ ಮಾಸ್ಟರ್   

ಜೇವರ್ಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಮುಂಗಾರು ಹಂಗಾಮಿನ ಮೊದಲ ಹಬ್ಬ ಕಾರಹುಣ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಬುಧವಾರ ಬೆಳಗ್ಗೆ ರೈತರು ಪಟ್ಟಣದ ಷಣ್ಮುಖ ಶಿವಯೋಗಿ ವಿರಕ್ತ ಮಠದ ಆವರಣ, ಕನಕದಾಸ ವೃತ್ತದ ಬಳಿ ಇರುವ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಎತ್ತುಗಳ ಮೈತೊಳೆದು ಕೋಡುಗಳಿಗೆ ಕೆಂಪು, ನೀಲಿ, ಹಳದಿ, ಹಸಿರು ಬಣ್ಣ ಹಚ್ಚಿ ಮೈಗೆ ಅವರವರ ಇಷ್ಟದ ಪ್ರಕಾರದ ಬಣ್ಣ ಹಚ್ಚಿದ್ದರು. ಆಲಂಕಾರಿಕ ವಸ್ತುಗಳಾದ ಗೆಜ್ಜೆಸರ, ಹಣೆಕಟ್ಟು ಮೊಗಡಾ, ರಿಬ್ಬನ್, ಬಲೂನ್ ಕಟ್ಟಿ ಶೃಂಗರಿಸಿ ಪೂಜೆ ಸಲ್ಲಿಸಿದರು.

ಕೆಲ ಯುವ ರೈತರು ತಮ್ಮ ನೆಚ್ಚಿನ ನಾಯಕರ, ಹೋರಾಟಗಾರರ, ಚಲನಚಿತ್ರ ನಟರ ಭಾವಚಿತ್ರ, ಹೆಸರನ್ನು ಎತ್ತಿನ ಮೇಲೆ ಬರೆಸಿ, ಅಭಿಮಾನ ತೋರಿದರು. ಕೆಲವರು ಜೈ ಆರ್‌ಸಿಬಿ ಎಂದು ಬರೆದು ಅಭಿಮಾನ ವ್ಯಕ್ತಪಡಿಸಿದರು. ಮಧ್ಯಾಹ್ನದಿಂದ ಎತ್ತುಗಳ ಓಡಾಟ, ಮೆರವಣಿಗೆ ನಡೆಯಿತು. ಸಂಜೆ ಸುಮಾರಿಗೆ ದುಗ್ಗನಕಟ್ಟೆ ಬಳಿಯ ಹೂಗಾರ ಮನೆಯಿಂದ ಅಗಸಿಗೆ ಮೆರವಣಿಗೆ ಮೂಲಕ ಕುಂಭ ಬರುತ್ತಿದ್ದಂತೆ ಹತ್ತಾರು ಎತ್ತುಗಳು ಓಡಿ ಬಂದು ಕರಿ ಹರಿಯಲಾಯಿತು. ನಂತರ ಹನುಮಾನ ದೇವರ ಗುಡಿಯಲ್ಲಿ ಭಾರ ಎತ್ತುವ ಹಾಗೂ ವಿವಿಧ ಸ್ಪರ್ಧೆಗಳು ನಡೆದವು.

ADVERTISEMENT

ಊರಿನ ಪ್ರಮುಖರಾದ ಷಣ್ಮುಖಪ್ಪಗೌಡ ಮಾಲಿಪಾಟೀಲ, ಸೋಮಣ್ಣ ಕಲ್ಲಾ, ಯಶವಂತರಾಯ ಕೋಳಕೂರ, ದಂಡಪ್ಪಗೌಡ ಪೊಲೀಸ್ ಪಾಟೀಲ, ಸಿದ್ರಾಮಪ್ಪಗೌಡ ಹಳಿಮನಿ, ಪಂಚಯ್ಯಸ್ವಾಮಿ ಮಠಪತಿ, ಬಸಯ್ಯಸ್ವಾಮಿ ಸ್ಥಾವರಮಠ, ಶರಣಗೌಡ ಪೂಜಾರಿ, ರಾಮಣ್ಣ ಪೂಜಾರಿ, ರಾಜು ತಳವಾರ, ಭೀಮು ತಳವಾರ, ಚಂದ್ರು ಕೊಡಚಿ, ಯೂನೂಸ್ ಬಾಗವಾನ, ಅನೀಲ ರಾಂಪೂರ ಸೇರಿ ಸಾವಿರಾರು ಜನ ವಾಲ್ಗೊಂಡಿದ್ದರು. ಜೇವರ್ಗಿ ಪೊಲೀಸ್ ಠಾಣೆ ಪಿಎಸ್‌ಐ ಗಜಾನಂದ ಬಿರಾದಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಜೇವರ್ಗಿ ಪಟ್ಟಣದ ಷಣ್ಮುಖ ಶಿವಯೋಗಿಗಳ ಮಠದ ಆವರಣದಲ್ಲಿ ಎತ್ತುಗಳಿಗೆ ವಿವಿಧ ತರಹದ ಬಣ್ಣ ಹಚ್ಚಿ ಶೃಂಗರಿಸಿ ಸಂಭ್ರಮಿಸಿದ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.