ADVERTISEMENT

‘ಮಹಿಳೆಯರಿಗೆ ಪ್ರಚೋದನೆ ನೀಡಿದವರನ್ನು ಬಂಧಿಸಿ’

ಫಾ.ಕ್ಲೀವನ್‌ ಮೇಲೆ ಲೈಂಗಿಕ ಆರೋಪ ಪ್ರಕರಣ; ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಬಗ್ಗೆ ಅನುಕಂಪವಿದೆ: ಫಾ.ಸ್ಟ್ಯಾನಿ ಲೊಬೊ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:08 IST
Last Updated 24 ಸೆಪ್ಟೆಂಬರ್ 2020, 14:08 IST

ಕಲಬುರ್ಗಿ: ‘ಫಾದರ್‌ ಕ್ಲೀವನ್‌ ಅವರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವ ಮಹಿಳೆಯ ಹಿಂದೆ ಪ್ರಚೋದನಕಾರಿ ಶಕ್ತಿ ಇರುವ ಅನುಮಾನವಿದೆ. ಮಹಿಳೆಯರನ್ನು ಪುಸಲಾಯಿಸಿ ಅಪರಾಧಿ ಪ್ರಕರಣಗಳಲ್ಲಿ ಎಳೆತಂದವರನ್ನು ಕೂಡಲೇ ಪತ್ತೆ ಮಾಡಬೇಕು’ ಎಂದು ಇಲ್ಲಿನ ಸೇಂಟ್ ಮೇರಿ ಚರ್ಚ್‌ನ ಮುಖ್ಯಗುರು ಫಾದರ್ ಸ್ಟ್ಯಾನಿ ಲೊಬೊ ಆಗ್ರಹಿಸಿದರು.

‘ಸೈಬರ್‌ ಅ‍‍ಪರಾಧ ಹಿನ್ನೆಲೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆಗೆ ಬಂದ ಮಹಿಳೆಯು ಕಮಿಷನರ್‌ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು ವಿಷಾದನೀಯ. ಈ ಮಹಿಳೆಯ ಬಗ್ಗೆ ನಮಗೆ ಅನುಕಂಪ ಮತ್ತು ಸಹಾನುಭೂತಿ ಇದೆ. ಆದರೆ, ನ್ಯಾಯದ ಮಾರ್ಗದ ಬದಲು ಅವರು ಅನುಚಿತ ಮಾರ್ಗ ಅನುಸರಿಸಿದ್ದು ವಿಷಾದನೀಯ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಸೇಂಟ್‌ ಮೇರಿ ಚರ್ಚ್‌ನ ಹಿಂದಿನ ಗುರುಗಳಾದ ಫಾದರ್‌ ವಿಜಯ್‌ ಅವರು ಮೇರಿ ವಿಲಿಯಮ್ಸ್‌ (50) ಎಂಬ ಮಹಿಳೆಯನ್ನು 2019ರಿಂದಲೇ ಅಡುಗೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಆದರೆ, ಕೆಲ ತಿಂಗಳಿಂದ ಅವರೊಂದಿಗೆ ಆಶಾ ಎಂಬ ಮಹಿಳೆ ಕೂಡ ಅಡುಗೆ ಕೋಣೆಗೆ ಬರಲು ಆರಂಭಿಸಿದರು. ಇದು ಗುರು ನಿವಾಸವಾದ್ದರಿಂದ ಇಲ್ಲಿ ಚರ್ಚ್‌ನ ನಿಯಮಗಳನ್ನು ಕಡ್ಡಾಯವಾಗಿ‍ಪಾಲಿಸಬೇಕಾಗುತ್ತದೆ. ಅಡುಗೆಗೆ ಒಬ್ಬರೇ ಮಹಿಳೆ ಇರಬೇಕು ಎಂಬುದು ನಿಯಮ. ಹಾಗಾಗಿ, ಯಾವುದೇ ಅನುಮತಿ, ಸಂಬಳ, ಅವಶ್ಯಕತೆ ಇಲ್ಲದೇ ಬರುತ್ತಿದ್ದ ಆಶಾ ಅವರನ್ನು ತಡೆಯಲಾಯಿತು’ ಎಂದರು.

ADVERTISEMENT

‘ಹೊಸದಾಗಿ ಬಂದ ಫಾದರ್‌ ಕ್ಲೀವನ್‌ ಅವರು ಆಶಾ ಅವರು ಅಡುಗೆ ಕೆಲಸಕ್ಕೆ ಬರಬಾರದು ಎಂದು ಕಡ್ಡಾಯವಾಗಿ ನಿಯಮ ಪಾಲಿಸಿದ್ದರಿಂದ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದರು. ಮೇರಿ ಹಾಗೂ ಆಶಾ ಅವರು ಗೆಳತಿಯರಾದ್ದರಿಂದ ಇಬ್ಬರೂ ಸೇರಿ ಕೆಲ ದಿನಗಳವರೆಗೆ ಫಾದರ್ ಕ್ಲೀವನ್‌ ಅವರೊಂದಿಗೆ ಜಗಳ ಆರಂಭಿಸಿದರು. ಬೆದರಿಕೆ ಹಾಕಿ, ‘ಕೆಲಸದ ಮೇಲೆ ಕುರುಕುಳ’ ಎಂದು‍ ಪ‍್ರಕರಣ ದಾಖಲಿಸಿದ್ದರು. ಇದರಲ್ಲಿ ಯಾವುದೇ ತರದ ಲೈಂಗಿಕ ದೌರ್ಜನ್ಯ ವಿಷಯವಿರಲಿಲ್ಲ’ ಎಂದು ಹೇಳಿದರು.

‘ಸೆ. 1ರಂದು ಸಿಸ್ಟರ್‌ ಮೇರಿ ಆ್ಯಂಟನಿ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಗುರುಗಳ ವಿರುದ್ಧ ಅಶ್ಲೀಲವಾಗಿ ಬರೆದು ಅವಮಾನ ಮಾಡಿದರು. ಈ ಬಗ್ಗೆ ಸೈಬರ್‌ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದರಿಂದ, ಆಶಾ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ಸಮರ್ಥವಾಗಿ ವಿಚಾರಣೆ ಎದುರಿಸುವ ಬದಲಾಗಿ ಅವರು ಆತ್ಮಹತ್ಯೆ ಯತ್ನದಂಥ ಕೆಲಸಕ್ಕೆ ಮುಂದಾಗಿದ್ದು ದುರದೃಷ್ಟಕರ’ ಎಂದೂ ಫಾದರ್‌ ಹೇಳಿದರು.‌

‘ಈ ಎಲ್ಲ ಘಟನಾವಳಿಗಳಿಂದ ಚರ್ಚ್‌ನ ಗುರುಗಳಿಗೆ, ಪಾದ್ರಿಗಳಿಗೆ, ಭಕ್ತರಿಗೆ ಹಾಗೂ ಕ್ರೈಸ್ತ ಸಮುದಾಯಕ್ಕೆ ಅತೀವ ನೋವಾಗಿದೆ. ಒಂದು ಸುಳ್ಳು ಆರೋಪ‍ವನ್ನು ಇಷ್ಟು ದೊಡ್ಡದು ಮಾಡಿದವರನ್ನು ಪೊಲೀಸರು ಪತ್ತೆ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಎಲ್ಲ ರೀತಿಯ ವಿಚಾರಣೆಗೂ ಚರ್ಚ್‌ನಿಂದ ನಾವೆಲ್ಲ ಸಿದ್ಧರಿದ್ದೇವೆ’ ಎಂದರು.

ಸೇಂಟ್ ಮೇರಿ ಪದವಿಪೂರ್ವ ಕಾಲೇಜಿನ ಮುಖ್ಯಸ್ಥ ಫಾದರ್‌ ಅನಿಲಪ್ರಸಾದ್‌, ಸೇವಾ ಸಂಭ್ರಮದ ನಿಯೋಜಿತ ನಿರ್ದೇಶಕ ಫಾದರ್‌ ಅನಿಲ‌ ವಿಕ್ಟರ್‌ ವಾಸ, ಸೇಂಟ್‌ ಜೋಸೆಫ್‌ ಕಾಲೇಜಿನ ಮುಖ್ಯಸ್ಥರಾದ ಸಿಸ್ಟರ್‌ ಆಗ್ನೇಸ್‌, ಸೇಂಟ್‌ ಮೇರಿ ಸ್ಕೂಲ್‌ ಮುಖ್ಯಸ್ಥರಾದ ಸಿಸ್ಟರ್‌ ಜಯಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.