ಕಲಬುರಗಿ: ಒಳಮೀಸಲಾತಿ ಜಾರಿಗಾಗಿ ರಾಜ್ಯ ಸರ್ಕಾರ ನಡೆಸುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಕಾರ್ಯವನ್ನು ಜೂನ್ 30ಕ್ಕೆ ಅಂತಿಮಗೊಳಿಸಬೇಕು ಎಂದು ಶೋಷಿತ ಜನಜಾಗೃತಿ ವೇದಿಕೆ ಆಗ್ರಹಿಸಿದೆ.
ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ‘ಸಮೀಕ್ಷೆಗಾಗಿ ನೇಮಿಸಿರುವ ನ್ಯಾ.ನಾಗಮೋಹನದಾಸ್ ಆಯೋಗವು ಮೇ 5ರಿಂದ ಮನೆ ಸಮೀಕ್ಷೆ ಪ್ರಾರಂಭ ಮಾಡಿದ್ದು, ಮೂರು ಬಾರಿ ಅವಧಿ ವಿಸ್ತರಣೆಯಾಗಿದೆ. ಜೂನ್ 22ಕ್ಕೆ ಪರಿಶಿಷ್ಟ ಜಾತಿ ಜನರ ಸಮೀಕ್ಷೆ ರಾಜ್ಯದಲ್ಲಿ ಶೇ 91ರಷ್ಟು ಆಗಿದೆ. ಜಿಲ್ಲೆಯಲ್ಲಿಯೂ ಸಹ ಶೇ 94ರಷ್ಟು ಸಮೀಕ್ಷೆಯಾಗಿದೆ. ಸಮೀಕ್ಷೆಯನ್ನು ಜೂನ್ 30ಕ್ಕೆ ಅಂತಿಮಗೊಳಿಸಬೇಕು. ಪದೇ ಪದೇ ದಿನಾಂಕ ವಿಸ್ತರಣೆ ಮಾಡಿದರೆ ಹೋರಾಟಗಾರರಿಗೆ ಒಳಮೀಸಲಾತಿ ಜಾರಿಯಾಗುವುದೋ ಇಲ್ಲವೊ ಎಂಬ ಅನುಮಾನ ಮೂಡುತ್ತದೆ’ ಎಂದರು.
‘ಒಳಮೀಸಲಾತಿ ಸಮೀಕ್ಷೆ ವರದಿಯನ್ನು ಜುಲೈ ಮೊದಲನೇ ವಾರದಲ್ಲಿಯೇ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಒಪ್ಪಿಸಬೇಕು. ಸರ್ಕಾರ ಅದನ್ನು ಅಂಗೀಕರಿಸಿ ಕೂಡಲೇ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ತರಬೇಕು. ವಿಳಂಬ ನೀತಿ ಅನುಸರಿಸಿದರೆ ತೀವ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಲಕ್ಕಪ್ಪ ಜವಳಿ, ರಾಮಚಂದ್ರ ಕಾಂಬಳೆ, ರಾಜು ಹದನೂರ, ಗಣೇಶ ಕಟ್ಟಿಮನಿ, ಗುರುನಾಥ ಭಂಡಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.