ಕಲಬುರಗಿ: ರಾಮಮಂದಿರ ವೃತ್ತದಲ್ಲಿನ ಅಂಗಡಿಗಳಲ್ಲಿ ಭಾನುವಾರ ನಸುಕಿನ ಜಾವ 3.50ರ ಸುಮಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ನಾಲ್ಕು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯ ಅನಾಹುತದಿಂದ ₹ 1 ಕೋಟಿಗೆ ಹೆಚ್ಚು ಹಾನಿಯಾಗಿದೆ ಎಂದು ಮಳಿಗೆಗಳ ಮಾಲೀಕರು ಹೇಳಿದ್ದಾರೆ.
ರಾಮಮಂದಿರ ವೃತ್ತದ ಜೇವರ್ಗಿ ರಸ್ತೆ ಬದಿಯಲ್ಲಿನ ಟಿನ್ ಶೆಡ್‌ಗಳಲ್ಲಿ ಹಾಕಲಾಗಿದ್ದ ಎಲೆಕ್ಟ್ರಾನಿಕ್ಸ್, ಎಣ್ಣೆ ತೆಗೆಯುವ ಗಾಣ, ಹಾರ್ಡ್‌ವೇರ್ ಹಾಗೂ ಟೀ ಮಳಿಗೆಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಘಟನೆಯ ವಿವರ ಪಡೆದಿದ್ದಾರೆ.
ನಸುಕಿನ ಜಾವ 3.50ರ ಸುಮಾರಿಗೆ ಟಿನ್ ಶೆಡ್‌ಗಳ ಮಳಿಗೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಸಂಬಂಧಪಟ್ಟ ಮಾಲೀಕರಿಗೆ ತಿಳಿಸಿದೆ. ಅಗ್ನಿಶಾಮಕ ವಾಹನಗಳು ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಮಳಿಗೆಗಳಿಗೂ ವ್ಯಾಪಿಸಿಕೊಂಡಿತು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದರು.
ಮಳಿಗೆಗಳು ಒಂದಕ್ಕೊಂದು ಹೊಂದಿಕೊಂಡಿವೆ. ಹೀಗಾಗಿ, ಬೆಂಕಿ ಕ್ಷಿಪ್ರಗತಿಯಲ್ಲಿ ಎರಡೂ ಬದಿಯ ಮಳಿಗೆಗಳಿಗೂ ಹಬ್ಬಿತು. ಅಗ್ನಿಶಾಮಕದ ಸಿಬ್ಬಂದಿ 3 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು’ ಎಂದರು.
₹ 30 ಲಕ್ಷ ಹಾನಿ: ‘ಎಣ್ಣೆ ತೆಗೆಯುವ ನಾಲ್ಕು ಗಾಣದ ಯತ್ರಗಳು, ಎರಡು ಕ್ವಿಂಟಲ್ ಎಣ್ಣೆ, 20 ಕ್ವಿಂಟಲ್ ಕುಸುಬೆ ಕಾಳು, 20 ಕ್ವಿಂಟಲ್ ಕುಸುಬೆ ಹಿಂಡಿ ಸೇರಿ ₹ 30 ಲಕ್ಷದಷ್ಟು ಹಾನಿ ಸಂಭವಿಸಿದೆ. ಬೆಂಕಿ ಹೇಗೆ ತಗುಲಿತು ಎಂಬುದು ತಿಳಿಯುತ್ತಿಲ್ಲ. ಬೆಳಿಗ್ಗೆ ಬಂದು ನೋಡುವಷ್ಟರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ಮಳಿಗೆ ಸುಟ್ಟು ಹೋಗಿತ್ತು’ ಎಂದು ಮಾಲೀಕ ಶರಣುಗೌಡ ಪಾಟೀಲ ಅಲವತ್ತುಕೊಂಡರು.
₹ 50 ಲಕ್ಷ ಹಾನಿ: ‘ಹಾರ್ಡ್‌ವೇರ್ ಮಳಿಗೆಯಲ್ಲಿ ₹ 25 ಲಕ್ಷಕ್ಕೂ ಹೆಚ್ಚು ಸಾಮಗ್ರಿಗಳನ್ನು ಮಾರಾಟಕ್ಕಾಗಿ ಇರಿಸಿದ್ದೆವು. ಏಕಾಏಕಿ ಬೆಂಕಿಯಿಂದ ನಮ್ಮ ಕಣ್ಣೆದುರೇ ಸುಟ್ಟು ಭಸ್ಮವಾಯಿತು. ಕುರ್ಚಿ, ಟಿನ್ ಶೀಟ್‌ಗಳು, ಟೀ ಅಂಗಡಿಯಲ್ಲಿ ಫ್ರಿಜ್ ಸೇರಿ ಸುಮಾರು ₹ 50 ಲಕ್ಷದಷ್ಟು ಹಾನಿಯಾಗಿದೆ’ ಎಂದು ಅಂಗಡಿಗಳ ಮಾಲೀಕ ಸೂರ್ಯಕಾಂತ ಹೇಳಿದರು.
‘ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿನ ನೀರಿನ ಮೋಟಾರ್, ಕೊಳವೆ ಬಾವಿ ಮೋಟರ್‌ಗಳು, ಪೈಪ್‌ಗಳು, ವಿದ್ಯುತ್ ಜೋಡಣೆಯ ಉಪಕರಣಗಳು ಸೇರಿ ಅಂದಾಜು ₹ 80 ಲಕ್ಷದಷ್ಟು ಹಾನಿಯಾಗಿದೆ. ಟಿನ್ ಶೆಡ್‌ಗಳಲ್ಲಿ ಮಳಿಗೆ ನಿರ್ಮಿಸಿದ್ದರಿಂದ ವಿಮೆಗೆ ಪರಿಗಣಿಸಲಿಲ್ಲ. ಈಗ ಮಳಿಗೆಯೇ ಸುಟ್ಟು ಹೋಗಿದೆ’ ಎಂದು ಮಾಲೀಕ ಬೇಸರ ವ್ಯಕ್ತಪಡಿಸಿದರು. ನಾಲ್ಕು ಮಳಿಗೆಗಳಿಂದ ₹ 1 ಕೋಟಿಗೂ ಹೆಚ್ಚು ಸಾಮಗ್ರಿಗಳಿಗೆ ಹಾನಿಯಾಗಿದೆ ಎಂದು ಮಾಲೀಕರು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.