ADVERTISEMENT

ಜೆಸ್ಕಾಂ ಗ್ರಾಹಕರಿಗೆ ಮೊಬೈಲ್ ಆ್ಯಪ್

ಬಿಲ್ ಪಾವತಿ ಮತ್ತಿತರ ಕೆಲಸಗಳಿಗೆ ಕಚೇರಿಗೆ ಎಡತಾಕುವ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 1:51 IST
Last Updated 7 ನವೆಂಬರ್ 2020, 1:51 IST
ರಾಹುಲ್ ಪಾಂಡ್ವೆ
ರಾಹುಲ್ ಪಾಂಡ್ವೆ   

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)ಯು ತನ್ನ ಗ್ರಾಹಕರಿಗಾಗಿ ಡಿಸೆಂಬರ್ ಅಂತ್ಯದೊಳಗಾಗಿ ಮೊಬೈಲ್ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

ಇದರಿಂದಾಗಿ ಬಿಲ್ ಪಾವತಿ, ಮೀಟರ್‌ನಲ್ಲಿನ ದೋಷ, ವಿದ್ಯುತ್ ವ್ಯತ್ಯಯದ ಬಗ್ಗೆ ವಿಚಾರಿಸಲು ಕಚೇರಿಗೆ ಹೋಗುವ ಅಗತ್ಯ ಇರುವುದಿಲ್ಲ. ಅಪ್ಲಿಕೇಶನ್‌ ಅಭಿವೃದ್ಧಿಗಾಗಿ ವಿವಿಧ ಸಾಫ್ಟ್‌ವೇರ್ ಕಂಪೆನಿಗಳನ್ನು ಸಂಪರ್ಕಿಸಲು ಮುಂದಾಗಿರುವ ಜೆಸ್ಕಾಂ ಶೀಘ್ರ ಈ ಸಂಬಂಧ ಟೆಂಡರೆ ಕರೆಯಲಿದೆ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.

ಜೆಸ್ಕಾಂ ಈಗಾಗಲೇ ಗ್ರಾಹಕರಿಗೆ ಕೇಂದ್ರ ಇಂಧನ ಸಚಿವಾಲಯ ರೂಪಿಸಿರುವ ‘ಊರ್ಜಾ ಮಿತ್ರ’ ಆ್ಯಪ್ ಹಾಗೂ ಎಸ್‌ಎಂಎಸ್‌ ಮೂಲಕ ವಿದ್ಯುತ್ ವ್ಯತ್ಯಯದ ಮಾಹಿತಿ ನೀಡುತ್ತಿದೆ.

ADVERTISEMENT

2019ರ ಅಂಕಿ ಅಂಶಗಳ ಪ್ರಕಾರ ಜೆಸ್ಕಾಂ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಒಟ್ಟಾರೆ 28,88,893 ವಿದ್ಯುತ್ ಗ್ರಾಹಕರಿದ್ದಾರೆ. ಅವರ ಪೈಕಿ 8,69,647 ಗ್ರಾಹಕರು ಕಲಬುರ್ಗಿ ವಲಯದಲ್ಲೇ ಇದ್ದರೆ, 11,17,599 ಸಂಪರ್ಕಗಳನ್ನು ಬಳ್ಳಾರಿ ವಲಯದಲ್ಲಿ ನೀಡಲಾಗಿದೆ. 9,01,647 ಸಂಪರ್ಕಗಳನ್ನು ವಿವಿಧ ಕಲ್ಯಾಣ ಯೋಜನೆಗಳಡಿ ನೀಡಲಾಗಿದೆ. 2474 ಎಚ್‌.ಟಿ. ಗ್ರಾಹಕರ ಪೈಕಿ 1768 ಗ್ರಾಹಕರು ಬಳ್ಳಾರಿ ವಲಯದಲ್ಲಿದ್ದರೆ, 707 ಸಂಪರ್ಕಗಳನ್ನು ಕಲಬುರ್ಗಿ ವಲಯದಲ್ಲಿ ನೀಡಲಾಗಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಈಗಾಗಲೇ ಆ್ಯಪ್ ಹೊಂದಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಮೆಸ್ಕಾಂ) ಅಪ್ಲಿಕೇಶನ್ ಪರಿಚಯಿಸಲು ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ ಅಂತ್ಯದೊಳಗಾಗಿ ಜೆಸ್ಕಾಂ ಆ್ಯಪ್ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಿದೆ ಎಂದು ಪಾಂಡ್ವೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.