ಅಫಜಲಪುರ: ತಾಲ್ಲೂಕಿನ ಘತ್ತರಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಪ್ರೌಢಶಾಲಾ ಕಟ್ಟಡ ಹಾಗೂ ಸುಮಾರು ₹5.75 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆಯನ್ನು ಶಾಸಕ ಎಂ.ವೈ.ಪಾಟೀಲ ಮಂಗಳವಾರ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ‘ಗ್ರಾಮದಲ್ಲಿ ನೂತನಾಗಿ ನಿರ್ಮಿಸಿರುವ ಪ್ರೌಢಶಾಲೆಗೆ ಭಾಗ್ಯವಂತಿ ದೇವಿ ‘ಅಕ್ಷರ ಜೋಳಿಗೆ’ ಸರ್ಕಾರಿ ಪ್ರೌಢಶಾಲೆ ಎಂದು ನಾಮಕರಣ ಮಾಡಲಾಗುತ್ತದೆ. ಸೊನ್ನ ಮಠದ ಶಿವಾನಂದ ಸ್ವಾಮೀಜಿ ಸರ್ಕಾರಿ ಪ್ರೌಢಶಾಲೆ ನಿವೇಶನ ಖರೀದಿಗಾಗಿ ಅಕ್ಷರ ಜೋಳಿಗೆ ಮುಖಾಂತರ ದೇಣಿಗೆ ಸಂಗ್ರಹ ಮಾಡಿ ನಿವೇಶನ ಖರೀದಿಸಿದ್ದಾರೆ. ಅದಕ್ಕೆ ಸರ್ಕಾರದಿಂದ ಸುಮಾರು ₹2 ಕೋಟಿ ವೆಚ್ಚದಲ್ಲಿ ನೂತನ ಪ್ರೌಢಶಾಲೆ ಕಟ್ಟಡ ನಿರ್ಮಾಣ ಮಾಡಲಾಗಿದೆ’ ಎಂದು ಅವರು ತಿಳಿಸಿದರು.
‘ನದಿಯಿಂದ ಪೋಲಾಗುವ ನೀರನ್ನು ರಕ್ಷಿಸಲು ಹೊಸದಾಗಿ ಹೈಡ್ರಾಲಿಕ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಕಳೆದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು ₹3500 ಕೋಟಿ ಅನುದಾನ ಅಭಿವೃದ್ಧಿಗಾಗಿ ಖರ್ಚು ಮಾಡಲಾಗಿದೆ. ಈಗಿನ ಅವಧಿಯಲ್ಲಿ ₹4500 ಕೋಟಿ ಅನುದಾನವನ್ನ ಅಭಿವೃದ್ಧಿ ಕಾಮಗಾರಿಗಾಗಿ ಖರ್ಚು ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕಾಧ್ಯಕ್ಷ ಪ್ರಕಾಶ ಜಮಾದಾರ, ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ ಹೂಗಾರ, ತಾ.ಪಂ. ಇಓ ವೀರಣ್ಣ ಕೌಲಗಿ, ತಹಶೀಲ್ದಾರ್ ಸಂಜೀವಕುಮಾರ ದಾಸರ, ವಲಯ ಅರಣ್ಯಾಧಿಕಾರಿ ರೇವಣಸಿದ್ದ ತಾವರಖೇಡ, ದೇವಸ್ಥಾನದ ಆಡಳಿತಾಧಿಕಾರಿ ಪ್ರಕಾಶ ಕುದರಿ, ಪ್ರಮುಖರಾದ ಪಪ್ಪು ಪಟೇಲ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಶರಣು ಕುಂಬಾರ, ಶಿವಾನಂದ ಗಾಡಿ ಸಾಹುಕಾರ, ಅರುಣಕುಮಾರ ಪಾಟೀಲ, ದಯಾನಂದ ದೊಡ್ಡಮನಿ, ಸುಭಾಷ ರೂಗಿ, ಎಸ್.ಎಸ್.ಪಾಟೀಲ, ಬಾಬುಸಾಹುಕಾರ ಅಮ್ಮಣ್ಣಿ, ವಿಠ್ಠಲ ನಾಟಿಕಾರ, ಸೈಪನಸಾಬ ಚಿಕ್ಕಳಗಿ, ಅಧಿಕಾರಿಗಳಾದ ಲಕ್ಷ್ಮಿಕಾಂತ ಬಿರಾದಾರ, ಬಾಬುರಾವ ಜ್ಯೋತಿ, ಎಸ್.ಎಚ್.ಗಡಗಿಮನಿ, ಸಂತೋಷ ಸಜ್ಜನ, ಯುವರಾಜ ಗಾಡಿ, ರಮೇಶ ಪಾಟೀಲ, ರಾಹುಲ ಕಾಂಬಳೆ, ಉಮೇಶ ಆಲೆಗಾಂವ, ಶಂಕರ ದ್ಯಾಮಣ್ಣ ಇತರರಿದ್ದರು.
ಹುಸಿಯಾದ ಸಚಿವರು ಬರುವ ನಿರೀಕ್ಷೆ
ಘತ್ತರಗಾ ಗ್ರಾಮದಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಅಡಿಗಲ್ಲು ಉದ್ಘಾಟನೆ ಹಾಗೂ ಭಾಗ್ಯವಂತಿ ದೇವಸ್ಥಾನ ಅಭಿವೃದ್ಧಿ ವೀಕ್ಷಣೆಗೆ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು ವಿಮಾನ ಹಾರಾಟಕ್ಕೆ ತೀವ್ರ ವಿಳಂಬವಾದ ಕಾರಣ ಬರಲಿಲ್ಲ ಇದರಿಂದಾಗಿ ಸಚಿವರ ಬರುವ ನಿರೀಕ್ಷೆಯಲ್ಲಿದ್ದ ಜನರ ನಿರೀಕ್ಷೆ ಹುಸಿಯಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಹಿಂಚಿಗೇರ ಹವಳಗಕ್ರಾಸ್ ಘತ್ತರಗಿ ಭಾಗ್ಯವಂತಿ ದ್ವಾರಬಾಗಿಲು ಹತ್ತಿರ ಜೆಸಿಬಿ ಬಳಸಿ ಹೂವಿನ ಹಾರ ಹಾಕಲು ಕಾರ್ಯಕರ್ತರು ತಯಾರಿ ಮಾಡಿಕೊಂಡಿದ್ದರು. ಆದರೆ ಸಚಿವರು ಬಾರದ ಕಾರಣ ಕಾರ್ಯಕರ್ತರ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು.
ಅಕ್ಷರ ಜೋಳಿಗೆ ಮೂಲಕ ಸಂಗ್ರಹಿಸಿದ ಹಣದಿಂದ ಖರೀದಿಸಿದ ಜಮೀನಿನಲ್ಲಿ ಕಡಿಮೆ ಅವಧಿಯಲ್ಲಿ ಶಾಸಕ ಎಂ.ವೈ.ಪಾಟೀಲರು ಪ್ರೌಢಶಾಲೆ ನಿರ್ಮಿಸಿದ್ದು ಸಂತಸ ತಂದಿದೆಶಿವಾನಂದ ಸ್ವಾಮೀಜಿ, ಸೊನ್ನ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.