ADVERTISEMENT

ರೈತರಿಗೆ ₹500 ಕೋಟಿ ಸಾಲ ನೀಡುವ ಗುರಿ

ಕಲಬುರ್ಗಿ, ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 11:42 IST
Last Updated 7 ಏಪ್ರಿಲ್ 2021, 11:42 IST
ರಾಜಕುಮಾರ ಪಾಟೀಲ ತೆಲ್ಕೂರ
ರಾಜಕುಮಾರ ಪಾಟೀಲ ತೆಲ್ಕೂರ   

ಕಲಬುರ್ಗಿ: ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ರೈತರಿಗೆ ಈ ವರ್ಷ ₹500 ಕೋಟಿ ಹೊಸ ಸಾಲ ನೀಡುವ ಗುರಿ ಇದೆ ಎಂದು ಬ್ಯಾಂಕ್‌ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 15ರಿಂದ ಹೊಸ ಸಾಲ ಯೋಜನೆ ಜಾರಿಗೆ ಬರಲಿದೆ. ರೈತರಿಗೆ ₹3 ಲಕ್ಷದ ವರೆಗೆಬಡ್ಡಿ ರಹಿತ ಸಾಲ ನೀಡಲಾಗುವುದು. ಮಹಿಳಾ ಸ್ವಸಹಾಯ ಸಂಘಗಳಿಗೆ ಹೈನುಗಾರಿಕೆ, ಸ್ವ ಉದ್ಯೋಗ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆಗೆ ₹5 ಲಕ್ಷ ಸಾಲ ಕೊಡಲಾಗುವುದು ಎಂದರು.

ರೈತರಿಗೆ ಹೈನುಗಾರಿಕೆ, ತೋಟಗಾರಿಕೆಗೆ ₹3 ಬಡ್ಡಿ ದರದಲ್ಲಿ ₹10 ಲಕ್ಷದವರೆಗೆ ಮಧ್ಯಮಾವಧಿ ಬೆಳೆ ಸಾಲ ನೀಡಲಾಗುವುದು. ಗರಿಷ್ಠ ₹40 ಲಕ್ಷದವರೆಗೆ ವಾಣಿಜ್ಯ ಸಾಲವನ್ನು 10 ಸಾವಿರ ವ್ಯಾಪಾರಸ್ಥರಿಗೆ ನೀಡುವ ಯೋಜನೆ ಇದೆ. ರೈತರಿಗೆ ಚಿನ್ನದ ಮೇಲೆಯೂ ಸಾಲ ಪಡೆದುಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.

ADVERTISEMENT

ಬ್ಯಾಂಕ್‌ನ ಮುಖ್ಯ ಕಚೇರಿ ಮತ್ತು ಎಲ್ಲ ಶಾಖೆಗಳನ್ನು ಮುಂದಿನ ಒಂದು ವರ್ಷದ ಒಳಗೆ ನವೀಕರಣ ಮಾಡಲಾಗುವುದು. ಅಲ್ಲದೆ, ಹೊಸ ತಾಲ್ಲೂಕುಗಳಲ್ಲಿಯೂ ಶಾಖೆಗಳನ್ನು ತೆರೆಯಲಾಗುವುದು. ಸಿಬ್ಬಂದಿ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‌ಬ್ಯಾಂಕ್‌ನಲ್ಲಿ ಸದ್ಯ ₹325 ಕೋಟಿ ಷೇರು ಬಂಡವಾಳ ಇದೆ. ಹೊಸ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂದ ನಂತರ ರೈತರಿಂದ ಬರಬೇಕಿದ್ದ ₹130 ಕೋಟಿ ಸಾಲ ವಸೂಲಿ ಮಾಡಲಾಗಿದೆ. ಅಲ್ಲದೆ, ಅಪೆಕ್ಸ್ ಬ್ಯಾಂಕ್‌ಗೆ ಬಡ್ಡಿ ಸಮೇತ ₹197 ಕೋಟಿ ಸಾಲ ಮರುಪಾವತಿ ಮಾಡಲಾಗಿದೆ ಎಂದರು.

ಬ್ಯಾಂಕ್ ಉಳಿಸಲು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಹೀಗಾಗಿ ಅಪೆಕ್ಸ್‌ ಬ್ಯಾಂಕ್‌ನಿಂದ ಜಿಲ್ಲಾ ಡಿಸಿಸಿ ಬ್ಯಾಂಕ್‌ ಪುನರುಜ್ಜೀವನಕ್ಕೆ ಕಡಿಮೆ ಬಡ್ಡಿದರದಲ್ಲಿ ₹200 ಕೋಟಿ ಸಾಲ ನೀಡಲಿದೆ. ಅಲ್ಲದೆ, ₹300 ಕೋಟಿ ಹೆಚ್ಚುವರಿ ಸಾಲ ನೀಡಲು ಅಪೆಕ್ಸ್‌ ಬ್ಯಾಂಕ್‌ಗೆ ಮನವಿ ಮಾಡಲಾಗಿದೆ ಎಂದರು.

₹10 ಕೋಟಿ ಷೇರು ಬಂಡವಾಳವನ್ನು ಮುಖ್ಯಮಂತ್ರಿ ಅವರು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ₹60 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಲಾಗಿದೆ. ಬ್ಯಾಂಕ್‌ಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲು ನಬಾರ್ಡ್ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಹೇಳಿದರು.

711 ಸುಸ್ತಿ ಸಾಲಗಾರಿದ್ದಾರೆ. ಅವರ ಪೈಕಿ 309 ಜನರ ಪೈಕಿ ಮೊಕದ್ದಮೆ ದಾಖಲಿಸಲಾಗಿದೆ. ಉಳಿದವರ ವಿರುದ್ಧ ಈ ತಿಂಗಳ ಒಳಗೆ ಮೊಕದ್ದಮೆ ಹೂಡಲಾಗುವುದು. ಆರು ತಿಂಗಳ ಒಳಗೆ ಸಂಪೂರ್ಣವಾಗಿ ಸಾಲ ವಸೂಲಿ ಮಾಡಲಾಗುವುದು ಎಂದರು.

ಬ್ಯಾಂಕ್‌ ಸ್ಥಾಪನೆಯಾಗಿ 104 ವರ್ಷವಾಗಿದೆ. 10 ಶಾಖೆಯನ್ನು ಹೊಂದಿದೆ. 103 ಸಿಬ್ಬಂದಿ ಇದ್ದಾರೆ. ವಿವಿಧ ಕಾರಣಗಳಿಂದ ರೈತರಿಗೆ ಸಾಲದ ವಿತರಣೆ ನಿಂತು ಹೋಗಿತ್ತು. ಬ್ಯಾಂಕ್‌ನ ಸ್ಥಿತಿಗತಿ ಸರಿ ಇರಲಿಲ್ಲ. ಈ ಹಂತಹಂತವಾಗಿ ಬ್ಯಾಂಕ್‌ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ಸಂಚಾರಿ ಬ್ಯಾಂಕ್‌ಗೆ ಶೀಘ್ರ ಚಾಲನೆ: ಮನೆ ಮನೆಗೆ ಬ್ಯಾಂಕ್ ಸೇವೆ ಎಂಬ ಯೋಜನೆ ಅಡಿ ಎರಡು ಸಂಚಾರ ಬ್ಯಾಂಕ್‌ ವಾಹನ ಸೇವೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

ಅದರಲ್ಲಿ ಎಟಿಎಂ ಸೇರಿದಂತೆ ಬ್ಯಾಂಕ್‌ನ ಎಲ್ಲ ಸೌಲಭ್ಯ ಇರುತ್ತದೆ. ಹಣ್ಣ ಕಟ್ಟುವುದು, ಪಡೆಯುವುದು, ವಿದ್ಯುತ್ ಬಿಲ್, ಕಂದಾಯ ಬಿಲ್‌ ಕಟ್ಟಲು ವ್ಯವಸ್ಥೆ ಮಾಡಲಾಗುವುದು ಎಂದರು.

ಸಂಚಾರ ಬ್ಯಾಂಕ್ ಯಾವ ದಿನ ಯಾವ ಗ್ರಾಮಕ್ಕೆ ಹೋಗಬೇಕು ಎಂಬ ಬಗ್ಗೆ ವೇಳಾಪಟ್ಟಿ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಸಿಬ್ಬಂದಿಗೆ ನಾಲ್ಕು ವರ್ಷದಿಂದ ಇನ್‌ಕ್ರಿಮೆಂಟ್ ನೀಡಿರಲಿಲ್ಲ. ಈ ಬಾರಿ ಯುಗಾದಿ ಹಬ್ಬಕ್ಕೆ ಇನ್‌ಕ್ರಿಮೆಂಟ್ ನೀಡಲಾಗುವುದು. ಅಲ್ಲದೆ, ಸಿಬ್ಬಂದಿಗೆ ಎರಡು ಜತೆ ಸಮವಸ್ತ್ರವನ್ನು ನೀಡಲಾಗುವುದು. ಬ್ಯಾಂಕ್‌ ಅಭಿವೃದ್ಧಿ ದೃಷ್ಟಿಯಿಂದ ತರಬೇತಿ ನೀಡಲಾಗುವುದು ಎಂದರು.

ಶಾಸಕ ಬಸವರಾಜ ಮತ್ತಿಮೂಡ, ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ವ್ಯವಸ್ಥಾಪಕ ನಿರ್ದೇಶಕ ನಿಂಬಾಳ, ನಿರ್ದೇಶಕರಾದ ಶರಣಬಸಪ್ಪ ಕಾಡಾದಿ, ಶಣಬಸಪ್ಪ ಅಷ್ಟಗಿ, ಸಿದ್ದರಾಮ ರೆಡ್ಡಿ, ಅಶೋಕ ನಾವಳೇಶ್ವರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.