ADVERTISEMENT

ಗುಲಬರ್ಗಾ ವಿ.ವಿ: ಕನ್ನಡ ಸಂಘದ ಚಟುವಟಿಕೆಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 17:24 IST
Last Updated 12 ನವೆಂಬರ್ 2019, 17:24 IST

ಕಲಬುರ್ಗಿ: ‘ಕನ್ನಡ ಕಟ್ಟುವ ಕೆಲಸ ಇಂದು ಭರದಿಂದ ಸಾಗಬೇಕಾಗಿದೆ. ಸಾಹಿತ್ಯ ಎನ್ನುವುದು ಮನುಷ್ಯನ ಕೊಳೆಯನ್ನು ತೊಳೆಯುವ ಸಾಧನವಾಗಿದೆ’ ಎಂದು ಕೇಂದ್ರೀಯ ವಿ.ವಿ. ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ, ಲೇಖಕ ಡಾ.ಬಸವರಾಜ ಡೋಣೂರ ಅಭಿಪ್ರಾಯಪಟ್ಟರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚಟುವಟಿಕೆಗಳ ವಾರ್ಷಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಷೇಕ್ಸ್‌ಪಿಯರ್‌, ಲಿಯೊ ಟಾಲ್‌ಸ್ಟಾಯ್, ಪಿ.ಬಿ.ಶೆಲ್ಲಿ ಮುಂತಾದವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಬುದ್ಧನ ಕರುಣೆಯ ಮಹತ್ವವನ್ನು ತಿಳಿಸಿದ ಡೋಣೂರ, ‘ಕರುಣೆ ನೀಡಿದವರು ಮತ್ತು ಪಡೆದವರು ಉದ್ಧಾರವಾಗುತ್ತಾರೆ. ದ್ವೇಷಿಸುವವನು ಸರ್ವನಾಶವಾಗುತ್ತಾನೆ’ ಎಂದು ಹೇಳಿದರು.

ADVERTISEMENT

‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ‘ದೇಸಿ ಸಾಂಸ್ಕೃತಿಕ ಸೊಗಡನ್ನು ಕನ್ನಡ ಅಧ್ಯಯನ ಸಂಸ್ಥೆ ಚೆನ್ನಾಗಿ ಬೆಳೆಸಿಕೊಂಡು ಬಂದಿದೆ. ನಮ್ಮ ಜನಪದ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ‌’ ಎಂದರು.

ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಚ್‌.ಟಿ.ಪೋತೆ, ‘ಕನ್ನಡ ಸಾಹಿತ್ಯ ಸಂಘದ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರು ಕೊಟ್ಟ ದೇಣಿಗೆಯಿಂದ ಸುಸಜ್ಜಿತ ಗ್ರಂಥಾಲಯ ಮಾಡಲು ಸಾಧ್ಯವಾಗಿದೆ. ವಿಶ್ವವಿದ್ಯಾಲಯವು ಭಾವಚಿತ್ರಗಳಿಗೆ ಅನುದಾನ ನೀಡಿದೆ. ಕನ್ನಡ ಸಾಹಿತ್ಯ ಸಂಘ ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ’ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ರಾಜೇಂದ್ರ ಯರನಾಳೆ, ಡಾ.ಎಂ.ಬಿ.ಕಟ್ಟಿ, ಡಾ.ಎಸ್‌.ಪಿ.ಮೇಲಕೇರಿ, ಡಾ.ಅನಿಲ, ಡಾ.ಸುವರ್ಣಾ ಹಿರೇಮಠ, ಡಾ.ಶಿವಗಂಗಾ, ಡಾ.ಶುಲಾಬಾಯಿ, ಬೆಂಗಳೂರಿನ ಡಾ.ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.