ADVERTISEMENT

ಹಡಪದ ಸಮಾಜ ಅಭಿವೃದ್ಧಿ ಮಂಡಳಿ ರಚಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 14:30 IST
Last Updated 22 ಸೆಪ್ಟೆಂಬರ್ 2020, 14:30 IST
ಹಡಪದ (ಕ್ಷೌರಿಕ) ಸಮಾಜದ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಸೇವಾ ಸಂಘದ ಕಾರ್ಯಕರ್ತರು ಕಲಬುರ್ಗಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡಿದರು
ಹಡಪದ (ಕ್ಷೌರಿಕ) ಸಮಾಜದ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಸೇವಾ ಸಂಘದ ಕಾರ್ಯಕರ್ತರು ಕಲಬುರ್ಗಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡಿದರು   

ಕಲಬುರ್ಗಿ: ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಹಡಪದ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಕ್ಷೌರಿಕ (ಹಡಪದ) ಸಮಾಜ ಸೇವಾ ಸಂಘದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹಡಪದ ಸಮಾಜವನ್ನು ಪ್ರವರ್ಗ 1ರಲ್ಲಿ ಸೇರಿಸಬೇಕು. ಬಸವ ಕಲ್ಯಾಣದಲ್ಲಿರುವ ಹಡಪದ ಅಪ್ಪಣ್ಣನವರ ಗವಿಯನ್ನು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಿಕೊಂಡು ಅಭಿವೃದ್ಧಿಪಡಿಸಬೇಕು. ಹಡಪದ ಅಪ್ಪಣ್ಣ ಹಾಗೂ ಹಡಪದ ಲಿಂಗಮ್ಮನವರ ಜನ್ಮಸ್ಥಳಗಳಾದ ಮಸಬಿನಾಳ ಹಾಗೂ ದೆಗಿನಾಳವನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.

ಹಡಪದ ಸಮಾಜದ ವ್ಯಕ್ತಿಯನ್ನು ಯಾವುದಾದರೂ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕು. ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿಯಲ್ಲಿರುವ ಹಡಪದ ಅಪ್ಪಣ್ಣನವರ ಪೀಠದ ಅಭಿವೃದ್ಧಿಗಾಗಿ ₹ 1 ಕೋಟಿ ಬಿಡುಗಡೆ ಮಾಡಬೇಕು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿರುವ ಅಪ್ಪಣ್ಣನವರ ಪೀಠಕ್ಕೆ ಸಮುದಾಯ ಭವನ ಕಟ್ಟಲು ನಿವೇಶನ ಮಂಜೂರು ಮಾಡಿ ₹ 1 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಪ್ಪಣ್ಣ ಹಾಗೂ ಲಿಂಗಮ್ಮ ಅವರು ಬರೆದ ವಚನಗಳನ್ನು ಪಠ್ಯ‍ಪುಸ್ತಕದಲ್ಲಿ ಅಳವಡಿಸಬೇಕು. ಕಲಬುರ್ಗಿಯಲ್ಲಿ ಹಡಪದ ಅಪ್ಪಣ್ಣನವರ ಸಮುದಾಯ ಭವನ ಕಟ್ಟಲು ₹ 50 ಲಕ್ಷ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ, ಕಾರ್ಯಾಧ್ಯಕ್ಷ ಭಗವಂತ ಹೊನ್ನಕಿರಣಗಿ, ಪ್ರಧಾನ ಕಾರ್ಯದರ್ಶಿ ರಮೇಶ ಹಡಪದ ನೀಲೂರ, ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷ ಆನಂದ ಖೇಳಗಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಸೂಗುರ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ಯುವ ಘಟಕದ ಅಧ್ಯಕ್ಷ ಮಹಾಂತೇಶ ಇಸ್ಲಾಮಪೂರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸೂಗುರ, ತಾಲ್ಲೂಕು ಅಧ್ಯಕ್ಷ ಸುನೀಲ ಬಾಗಹಿಪ್ಪರಗಾ, ಚಂದ್ರಶೇಖರ ತೊನಸಹಳ್ಳಿ, ಅಪ್ಪಾರಾವ ಬಟಗೇರಾ, ಮಂಜುನಾಥ ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.