ADVERTISEMENT

ಹಟಗಾರ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಸಮಾಜ ಸಂಘಟನೆಯಲ್ಲಿ ಯುವಕರು ಆಸಕ್ತರಾಗಲಿ: ಅಭಿನವ ರಾಮಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 6:30 IST
Last Updated 19 ಆಗಸ್ಟ್ 2025, 6:30 IST
ಕಲಬುರಗಿಯಲ್ಲಿ ಹಟಗಾರ ಸಮಾಜದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ರಾಮಲಿಂಗೇಶ್ವರ ಮಠದ ಅಭಿನವ ರಾಮಲಿಂಗ ಸ್ವಾಮೀಜಿ, ಶರಣು ಅಲ್ಲಮಪ್ರಭು ಪಾಟೀಲ, ಸಂಗಮನಾಥ ರೇವತಗಾಂವ ಇತರರು ಭಾಗವಹಿಸಿದ್ದರು
ಕಲಬುರಗಿಯಲ್ಲಿ ಹಟಗಾರ ಸಮಾಜದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ರಾಮಲಿಂಗೇಶ್ವರ ಮಠದ ಅಭಿನವ ರಾಮಲಿಂಗ ಸ್ವಾಮೀಜಿ, ಶರಣು ಅಲ್ಲಮಪ್ರಭು ಪಾಟೀಲ, ಸಂಗಮನಾಥ ರೇವತಗಾಂವ ಇತರರು ಭಾಗವಹಿಸಿದ್ದರು   

ಕಲಬುರಗಿ: ‘ಹೆಚ್ಚು ಹೆಚ್ಚು ಯುವಕರು ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಆಸಕ್ತಿಯನ್ನು ಪ್ರಧಾನವಾಗಿಸಿಕೊಳ್ಳಬೇಕು’ ಎಂದು ಅಕ್ಕಲಕೋಟ ತಾಲ್ಲೂಕಿನ ಸಲಗರದ ರಾಮಲಿಂಗೇಶ್ವರ ಮಠದ ಅಭಿನವ ರಾಮಲಿಂಗ ಸ್ವಾಮೀಜಿ ಸಲಹೆ ನೀಡಿದರು.

ಸ್ಥಳೀಯ ರಾಮಮಂದಿರ ರಸ್ತೆಯ ಕರುಣೇಶ್ವರ ನಗರದಲ್ಲಿರುವ ಜೈವೀರ ಹನುಮಾನ್ ದೇವಸ್ಥಾನ ಸಭಾಂಗಣದಲ್ಲಿ ಜಿಲ್ಲಾ ಹಟಗಾರ ಸಮಾಜ ಸಂಘದಿಂದ ಭಾನುವಾರ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯುವಕರಲ್ಲಿ ಸಮಾಜದ ಭವಿಷ್ಯ ಅಡಗಿದೆ ಎಂದು ಅವರು ತಿಳಿಸಿದರು.

‘ನೇಕಾರರು ಅಸಹನೀಯವಾಗಿ ಬದುಕುತ್ತಿದ್ದಾರೆ. ರೈತನಿಗಿದ್ದಷ್ಟೆ ಪ್ರಾಮುಖ್ಯತೆ ನೇಕಾರನಿಗೂ ಇದೆ. ಜಗತ್ತಿಗೆ ಬಟ್ಟೆಯನ್ನು ಕೊಟ್ಟ ನೇಕಾರರು ಇಂದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ. ಅವರ ಬದುಕು ಹಸನುಗೊಳಿಸಲು ಸಮಾಜ ಸಂಘಟನೆಯು ಬಲಗೊಳಿಸಬೇಕು’ ಎಂದರು.

ADVERTISEMENT

ಕಲಬುರಗಿಯ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಹೊಸಮನಿ ಮಾತನಾಡಿ, ‘ಕೈಮಗ್ಗ ಇಲಾಖೆಯ ಯೋಜನೆಗಳನ್ನು ನೇಕಾರರು ಸದ್ಬಳಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹತ್ವದ ಯೋಜನೆಗಳನ್ನು ರೂಪಿಸಿವೆ. ನೇಕಾರರಿಗೆ ಉದ್ಯೋಗ ಕೊಡುವಲ್ಲಿ ಜವಳಿ ಇಲಾಖೆ’ ನೆರವಾಗಲಿದೆ ಎಂದರು.

ಕಾಂಗ್ರೆಸ್ ಮುಖಂಡ ಶರಣು ಪಾಟೀಲ ಮಾತನಾಡಿ, ನೇಕಾರ ಬಾಂಧವರ ಶ್ರೇಯೋಭಿವೃದ್ಧಿಗೆ ಯಾವಾಗಲು ಸಿದ್ಧ ಎಂದರು.

ಸಂಶೋಧಕ, ಮಿದುಳು ವಿಜ್ಞಾನ ಶಿಕ್ಷಕ ಅಮರದೀಪ ಪಡಕೋಣಿ, ಕರ್ನಾಟಕ ರಾಜ್ಯ ಹಟಗಾರ ಸಮಾಜದ ಸಂಸ್ಥಾಪಕ ಅಧ್ಯಕ್ಷ ಆರ್.ಸಿ.ಘಾಳೆ, ಮಹಿಳಾ ಘಟಕದ ಉಪಾಧ್ಯಕ್ಷೆ ಶಾಮಲಾ ಮಂದೇವಾಲ ಮಾತನಾಡಿದರು. ಸಂಘದ ಅಧ್ಯಕ್ಷ ಶ್ರವಣಕುಮಾರ ಮುನ್ನೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಪುರಸ್ಕಾರ ಪಟ್ಟಿಯನ್ನು ಪ್ರತಿಭಾ ಪುರಸ್ಕಾರ ಸಂಚಾಲಕ ಬಸವರಾಜ ಚೆನ್ನಾ ಓದಿದರು. ಸೃಜನಾ ಮತ್ತು ಸಂಪದಾ ಪ್ರಾರ್ಥನೆ ಹಾಡಿದರು. ಪತ್ರಕರ್ತ ಸಂಗಮನಾಥ ರೇವತಗಾಂವ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಜಮಖಂಡಿ ವಂದಿಸಿದರು.

ಸಂಘದ ದಾನಿಗಳಾದ ಡಾ.ಇಂದ್ರಜಿತ ಚಂದಾ, ಮಲ್ಲಿಕಾರ್ಜುನ ಅಕ್ಕಾ, ಮಹಾದೇವ ಭಾವಿ, ಕ್ಷೀರಾಲಿಂಗ ರೂಗಿ, ವಿನೋದಕುಮಾರ ಜೇನವೇರಿ, ಅಶೋಕ ಮುನ್ನೊಳ್ಳಿ ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. 2025ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ದ್ವಿತೀಯ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ 23 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಎಂಟನೇ ತರಗತಿಯಲ್ಲಿ ಓದುತ್ತಿರುವ ವಿಸ್ಮಿತಾ ಬಡಿಗೇರ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಬಣ್ಣ, ಅಕ್ಷರಗಳನ್ನು ಗುರುತಿಸುವ ಕಲೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರಳಾದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.