ADVERTISEMENT

ಕಲ್ಯಾಣ ಕರ್ನಾಟಕ | ಮಳೆ ಅಬ್ಬರ: ಕೊಚ್ಚಿ ಹೋದ ಸೇತುವೆ

ಅಂಕೋಲಾ: ವಿದ್ಯುತ್ ತಂತಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 23 ಮೇ 2025, 4:23 IST
Last Updated 23 ಮೇ 2025, 4:23 IST
ಬೀದರ್ ಜಿಲ್ಲೆಯ ಬಸವಕಲ್ಯಾಣ ಮತ್ತು ಗೌರ ಗ್ರಾಮದ ನಡುವಿನ ಸೇತುವೆ ಮಳೆಗೆ ಕೊಚ್ಚಿ ಹೋಗಿದೆ
ಬೀದರ್ ಜಿಲ್ಲೆಯ ಬಸವಕಲ್ಯಾಣ ಮತ್ತು ಗೌರ ಗ್ರಾಮದ ನಡುವಿನ ಸೇತುವೆ ಮಳೆಗೆ ಕೊಚ್ಚಿ ಹೋಗಿದೆ   

ಕಲಬುರಗಿ/ಹುಬ್ಬಳ್ಳಿ : ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ವಿಜಯನಗರ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಯ ವಿವಿಧೆಡೆ ಗುರುವಾರ ಉತ್ತಮ ಮಳೆಯಾಯಿತು.

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಮಳೆ ಮತ್ತು ರಭಸದ ಗಾಳಿಗೆ ಮರಗಳು ಉರುಳಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ರಸ್ತೆಯ ಮೇಲೆ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಅಂಕೋಲಾ ತಾಲ್ಲೂಕಿನ ದಂಡೇಭಾಗದಲ್ಲಿ ಮಹಾಂತೇಶ ದೇವೇಂದ್ರ ಬಾನಾವಳಿಕರ (25) ಎಂಬುವರು ಮೃತಪಟ್ಟಿದ್ದಾರೆ.

ಹೊಸಪೇಟೆ ತಾಲ್ಲೂಕಿನ ವಡ್ಡರಹಳ್ಳಿ, ಪಿ.ಕೆ.ಹಳ್ಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಕಾಮಗಾರಿಯಿಂದ ಮಳೆ ನೀರು ನಿಂತು, 50 ಎಕರೆ ಬೆಳೆ ನಾಶವಾಗಿದೆ. ಮರಿಯಮ್ಮನಹಳ್ಳಿ ಸಮೀಪದ ತಾಳೆಬಸಾಪುರ ತಾಂಡಾದಲ್ಲಿ ಮನೆಯರ ಚಾವಣಿ ಹಾರಿಹೋಗಿದೆ. ಹೊಸಪೇಟೆ–ಬಳ್ಳಾರಿ ನಡುವಿನ ರಾಷ್ಟ್ರೀಯ ಹೆದ್ದಾರಿ–67 ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಮಲಾಪುರ ಕೆರೆಗೆ ಸಂಪರ್ಕ ಕಲ್ಪಿಸುವ ಹಳ್ಳ ಮುಚ್ಚಿಹೋಗಿದೆ. ಕೊಟ್ಟೂರು ತಾಲ್ಲೂಕಿನಲ್ಲಿ ಎರಡು ಮನೆಗಳು, ಹರಪನಹಳ್ಳಿ ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಒಂದು ಮನೆ ಹಾನಿಗೊಂಡಿದೆ.

ADVERTISEMENT

ಬೀದರ್ ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಧಾರಾಕಾರ ಮಳೆಯಾಗಿದೆ. ಸತತ ಮಳೆಗೆ ಬಸವಕಲ್ಯಾಣ ತಾಲ್ಲೂಕಿನ ಗೌರ ಗ್ರಾಮದಲ್ಲಿ ಸೇತುವೆ ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ರಸ್ತೆಯು ಬಸವಕಲ್ಯಾಣ, ಹುಲಸೂರ ಹಾಗೂ ಮಹಾರಾಷ್ಟ್ರದ ಶಹಾಜಹಾನಿ, ಔರಾದ್‌ಗೆ ಸಂಪರ್ಕ ಕಲ್ಪಿಸುತ್ತದೆ.

ಬಿರುಸಿನ ಮಳೆಗೆ ಔರಾದ್ ತಾಲ್ಲೂಕಿನ ಸುಂದಾಳ ಗ್ರಾಮದ ಬಸವರಾಜ ಅವರ ಅರ್ಧ ಎಕರೆಯಲ್ಲಿನ ನಿಂಬೆ ಗಿಡಗಳು ಹಾಳಾಗಿವೆ.

ಜಿಲ್ಲೆಯ ಹುಮನಾಬಾದ್, ಭಾಲ್ಕಿ ಹಾಗೂ ಔರಾರ್‌ನಲ್ಲಿ ಮಳೆ ಸುರಿದಿದೆ. ಬೀದರ್ ನಗರ ಹಾಗೂ ಸುತ್ತಲಿನ ಭಾಗಗಳಲ್ಲಿ ದಿನವಿಡೀ ಮಳೆ ಬಿಡುವು ಕೊಟ್ಟಿತ್ತು. ಸಂಜೆ ಪುನಃ ದಟ್ಟ ಕಾರ್ಮೋಡ ಕವಿದು ಮಳೆಯಾಗಿದೆ. ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಪರತಾಪುರದಲ್ಲಿ 16.4 ಸೆಂ.ಮೀ ಮಳೆಯಾದ ಬಗ್ಗೆ ಹವಾಮಾನ ಇಲಾಖೆಯ ವರದಿ ಹೇಳಿದೆ.

ಕಲಬುರಗಿಯ ವಿವಿಧೆಡೆ ಗುರುವಾರ ಮಳೆ ಸುರಿದಿದೆ. ಚಿಂಚೋಳಿ, ಕಾಳಗಿಯಲ್ಲಿ ಕೆಲಕಾಲ ಮಳೆಯಾಗಿದೆ. ಕಮಲಾಪುರದಲ್ಲಿ ತಾಲ್ಲೂಕಿನ ಶ್ರೀಚಂದ ಗ್ರಾಮದ ರೈತ ಸುಭಾಷ ಹಣಮಂತಪ್ಪ ಮೇತ್ರಿ (61) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅರ್ಧ ತಾಸು ಜಿಟಿಜಿಟಿಯಾಗಿ ಮಳೆಯಾಗಿದೆ.

ಹೊಸಪೇಟೆ ತಾಲ್ಲೂಕಿನ ಪಿ.ಕೆ.ಹಳ್ಳಿಯಲ್ಲಿ ಮಳೆನೀರು ಕೃಷಿ ಜಮೀನಿಗೆ ನುಗ್ಗಿದೆ  –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.