ADVERTISEMENT

ಕಲಬುರಗಿ ಜನ ಒಳ್ಳೆಯವರ್‍ರೀ... ಎಂದಿದ್ದ ಎಚ್ಚೆಸ್ವಿ

ನೃಪತುಂಗನ ನಾಡಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ

ಮನೋಜ ಕುಮಾರ್ ಗುದ್ದಿ
Published 31 ಮೇ 2025, 5:49 IST
Last Updated 31 ಮೇ 2025, 5:49 IST
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 2020ರಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮ್ಮೇಳನಾಧ್ಯಕ್ಷ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರನ್ನು ಸನ್ಮಾನಿಸಿದ್ದರು
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 2020ರಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮ್ಮೇಳನಾಧ್ಯಕ್ಷ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರನ್ನು ಸನ್ಮಾನಿಸಿದ್ದರು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌   

ಕಲಬುರಗಿ: ‘ಕಲಬುರಗಿ ಜಿಲ್ಲೆಯ ಜನ ಬಹಳ ಒಳ್ಳೆಯವರ್‍ರೀ. ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸುವ ಸೌಭಾಗ್ಯ ದೊರೆತಿದ್ದು ನನ್ನ ಪಾಲಿಗೆ ಬಂದ ಮಹಾಭಾಗ್ಯ...’ ಎಂದು ಬಾಯ್ತುಂಬಾ ಹೊಗಳಿದ್ದ ಹಿರಿಯ ಕವಿ ಎಚ್‌.ಎಸ್.ವೆಂಕಟೇಶಮೂರ್ತಿ (ಎಚ್ಚೆಸ್ವಿ) ಅವರಿಗೂ ಕಲಬುರಗಿಗೆ ಬಿಡಿಸಲಾಗದ ನಂಟಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಇಹಲೋಕ ತ್ಯಜಿಸಿದ ವೆಂಕಟೇಶಮೂರ್ತಿ ಅವರ ಆ ನಂಟಿಗೆ ಕಾರಣವಾಗಿದ್ದು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ 2020ರ ಫೆಬ್ರುವರಿ 5, 6, 7ರಂದು ನಡೆದ ಕನ್ನಡ ಸಾಹಿತ್ಯ ಸಮ್ಮೇಳನ.

ಒಂದು ದಿನ ಮುಂಚೆಯೇ ತಮ್ಮ 20ಕ್ಕೂ ಹೆಚ್ಚು ಜನ ಕುಟುಂಬ ಸದಸ್ಯರೊಂದಿಗೆ ಕಲಬುರಗಿಗೆ ರೈಲಿನ ಮೂಲಕ ಬಂದಿಳಿದಿದ್ದ ವೆಂಕಟೇಶಮೂರ್ತಿ ಅವರು ಸರಳ, ಸಜ್ಜನಿಕೆಯ ಸ್ವಭಾಗದ ಮೂಲಕವೇ ಜಿಲ್ಲೆಯ ಸಾಹಿತ್ಯಾಸಕ್ತರು, ಜನಸಾಮಾನ್ಯರನ್ನು ಸೂಜಿಗಲ್ಲಿನಂತೆ ಸೆಳೆದಿದ್ದರು.

ADVERTISEMENT

ಮೂರು ದಿನಗಳ ಕಾಲ ಇಡೀ ದಿನ ನಡೆದ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ವೆಂಕಟೇಶಮೂರ್ತಿ ಅವರು ಸಮ್ಮೇಳನದ ಅಂಗವಾಗಿ ‘ಪ್ರಜಾವಾಣಿ’ ಹೊರತಂದಿದ್ದ ವಿಶೇಷ ಪುರವಣಿಯನ್ನು ಅಂದು ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ ಅವರೊಂದಿಗೆ ಸೇರಿ ಬಿಡುಗಡೆಗೊಳಿಸಿದ್ದರು.

ವಿವಿಧ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ಪುಸ್ತಕ ಪ್ರೇಮಿಗಳೊಂದಿಗೆ ಸಂವಾದಿಸಿದ್ದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿದ್ದರು. ಜಿಲ್ಲೆಯ ಧಾರ್ಮಿಕ, ಐತಿಹಾಸಿಕ ತಾಣಗಳ ಬಗ್ಗೆ ಮಾಹಿತಿ ಪಡೆದಿದ್ದ ಎಚ್ಚೆಸ್ವಿ ಅವರು ತಮಗೆ ಸಿಕ್ಕ ಅಲ್ಪ ಅವಧಿಯಲ್ಲಿಯೇ ಗಾಣಗಾಪುರಕ್ಕೆ ಭೇಟಿ ನೀಡಿ ದತ್ತ ಪಾದುಕೆಗಳ ದರ್ಶನ ಪಡೆದಿದ್ದರು. ಬಸವಕಲ್ಯಾಣಕ್ಕೆ ತೆರಳಿ ಕಲ್ಯಾಣ ಕ್ರಾಂತಿ ನಡೆದ ಪಟ್ಟಣವನ್ನು ಕಂಡು ಆನಂದಿಸಿದ್ದರು.

ಕಲಬುರಗಿಯ ಸೌಹಾರ್ದ ಪರಂಪರೆಯನ್ನು ಮೆಚ್ಚಿಕೊಂಡಿದ್ದ ಎಚ್ಚೆಸ್ವಿ ಅವರು ಇಲ್ಲಿ ಕನ್ನಡ, ಉರ್ದು, ಮರಾಠಿ ಭಾಷೆಗಳು ಹಿತವಾಗಿ ಬೆರೆತಿವೆ. ಎಷ್ಟೊಂದು ಶರಣರು, ಸೂಫಿ ಸಂತರು, ದಾಸರು ಇಲ್ಲಿ ಆಗಿ ಹೋಗಿದ್ದಾರೆ. ಈ ಭಾಷೆ, ಧರ್ಮದ ಸೌಹಾರ್ದತೆಯ ಮುಂದೆ ಇಲ್ಲಿನ ಬಿಸಿಲು ಏನೇನೂ ಅಲ್ಲ ಎಂದು ಸಮ್ಮೇಳನಕ್ಕೂ ಮುನ್ನ ‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನದಲ್ಲಿ ಸಾರಿದ್ದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಭೇಟಿ ನೀಡಿದ್ದ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರನ್ನು ಪ್ರೊ.ಎಚ್.ಟಿ.ಪೋತೆ ಕಲ್ಯಾಣರಾವ್ ಪಾಟೀಲ ಸ್ವಾಮಿರಾವ್ ಕುಲಕರ್ಣಿ ಶ್ರೀಶೈಲ ನಾಗರಾಳ ಬರಮಾಡಿಕೊಂಡಿದ್ದರು

ಅಖಂಡ ಭಾರತ ಪ್ರತಿಪಾದಿಸಿದ್ದ ಕವಿ

ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಸಂವಾದದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಎಚ್.ಎಸ್. ವೆಂಕಟೇಶಮೂರ್ತಿ ಅವರು ಭಾರತವನ್ನು ಅಖಂಡವಾಗಿಯೇ ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಬೇಕು ಎಂದು ಪ್ರತಿಪಾದಿಸಿದ್ದರು. ಆಗ ಭಾರಿ ಸುದ್ದಿಯಾಗಿದ್ದ ಸಿಎಎ ಎನ್‌ಆರ್‌ಸಿ ಕಾಯ್ದೆಗಳ ಬಗ್ಗೆ ಸಾಹಿತಿ ಶ್ರೀಶೈಲ ನಾಗರಾಳ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಎಚ್ಚೆಸ್ವಿ ಅವರು ‘ಭಾರತವನ್ನು ಯಾವ ರೀತಿಯಲ್ಲಿಯೂ ಎರಡಾಗಿ ಒಡೆಯಬಾರದು. ಅಮರ್ತ್ಯಸೇನ್‌ ಅವರು ಹೇಳುವಂತೆ ಎಲ್ಲರನ್ನೂ ಎಲ್ಲವನ್ನೂ ದೇಶ ಒಳಗೊಳ್ಳುವಂತಿರಬೇಕು. ಮಹಾತ್ಮ ಗಾಂಧೀಜಿ ಡಾ.ಬಿ.ಆರ್‌. ಅಂಬೇಡ್ಕರ್‌ ಕನಸನ್ನು ನನಸು ಮಾಡುವ ಜವಾಬ್ದಾರಿಯನ್ನು ನಾವು ಹೊರಬೇಕು’ ಎನ್ನುವ ಮೂಲಕ ಪರೋಕ್ಷವಾಗಿ ಧರ್ಮಾಧಾರಿತ ರಾಷ್ಟ್ರೀಯ ಪೌರತ್ವ ನೋಂದಣಿ ಅಗತ್ಯವಿಲ್ಲ ಎಂದು ಹೇಳಿದರು. ‘ನಾನು ಆಂತರ್ಯದಲ್ಲಿ ಸ್ತ್ರೀ ಪಕ್ಷಪಾತಿ. ಸೀತೆ ದ್ರೌಪದಿ ಹಾಗೂ ಊರ್ಮಿಳೆಯರು ಖಾಸಗಿಯಾಗಿ ನನಗೆ ಬಹಳ ಆಪ್ತವಾದ ಮಹಿಳೆಯರು. ರಾಮಾಯಣದ ಸೀತೆ ಬಹಳ ಶೋಷಣೆಗೆ ಒಳಗಾದಳು. ಮಹಿಳೆ ಯಾವಾಗಲೂ ಶೋಷಣೆಗೆ ಒಳಗಾಗುತ್ತಲೇ ಇರಬೇಕೇ? ಅದಕ್ಕಾಗಿಯೇ ಮಹಾಭಾರತದ ವ್ಯಾಸರು ಸೃಷ್ಟಿಸಿದ ದ್ರೌಪದಿಯು ಪ್ರತಿಭಟಿಸಲು ಶುರು ಮಾಡಿದಳು. ಹಾಗಾಗಿ ಸೀತೆಯ ಸಮಸ್ಯೆಗೆ ಪರಿಹಾರವಾಗಿ ದ್ರೌಪದಿ ಕಾಣಿಸುತ್ತಾಳೆ. ಇದು ನನ್ನ ಕವಿತೆ ನಾಟಕಗಳಲ್ಲಿಯೂ ವ್ಯಕ್ತವಾಗಿದೆ’ ಎಂದು ಸಂವಾದದಲ್ಲಿ ತಿಳಿಸಿದ್ದರು.

ಎಚ್.ಎಸ್.ವೆಂಕಟೇಶಮೂರ್ತಿಯವರು ತಮ್ಮ ಮದುವೆಯಲ್ಲಿ ಸಡಗರ ಸಂಭ್ರಮ ನೋಡಲಿಲ್ಲ ಕಲಬುರಗಿ ಸಮ್ಮೇಳನದಲ್ಲಿ ಅದನ್ನು ಅನುಭವಿಸಿದೆ ಎಂದು ಭಾವುಕರಾಗಿ ಹೇಳುವ ಮೂಲಕ ಜಿಲ್ಲೆಯ ಬಗ್ಗೆ ಪ್ರೀತಿಯನ್ನು ಹಂಚಿಕೊಂಡಿದ್ದರುವೀರಭದ್ರ ಸಿಂಪಿಕಸಾಪ ನಿಕಟಪೂರ್ವ ಅಧ್ಯಕ್ಷ ನೂರರಷ್ಟು ಕೃತಿಗಳ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ ಎಚ್‌.ಎಸ್. ವೆಂಕಟೇಶಮೂರ್ತಿ ಭಾವಗೀತೆಗಳ ಮೂಲಕ ಜನಪ್ರಿಯ ಕವಿ. ಇವರ ಹೆಜ್ಜೆಗಳು ಉರಿಯ ಉಯ್ಯಾಲೆ ನಾಟಕಗಳನ್ನು ನೂತನ ವಿದ್ಯಾಲಯದಲ್ಲಿ ಪ್ರದರ್ಶಿದಾಗ ಸಾಂಸ್ಕೃತಿಕ ಉತ್ಸವಕ್ಕೆ ಅತಿಥಿಗಳಾಗಿ ಆಗಮಿಸಿದ್ದರುಸ್ವಾಮಿರಾವ್ ಕುಲಕರ್ಣಿಸಾಹಿತಿ ಎಚ್ಎಸ್‌ವಿ ಬುದ್ಧನ ಕುರಿತು ಮೌಲಿಕ ಕಾವ್ಯ ಬರೆದಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಮ್ಮೇಳನಕ್ಕೊಂದು ಮೆರಗು ತಂದಿದ್ದರು. ಭೇಟಿಯಾದಾಗಲೆಲ್ಲ ಕನ್ನಡ ಅಧ್ಯಯನ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಕೇಳಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರುಪ್ರೊ.ಎಚ್.ಟಿ. ಪೋತೆನಿರ್ದೇಶಕ ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ವಿ.ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.