ADVERTISEMENT

ಕಲಬುರಗಿ | ಶಿಷ್ಯವೇತನ ನಿಲುವು ಬದಲು: ಆರೋ‍ಪ

ಐಎಎಸ್‌, ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:55 IST
Last Updated 14 ಆಗಸ್ಟ್ 2025, 5:55 IST
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಐಎಎಸ್‌, ಕೆಎಎಸ್‌ ಪರೀಕ್ಷಾ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ನ್ಯಾಯಕ್ಕಾಗಿ ಆಗ್ರಹಿಸಿದರು
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಐಎಎಸ್‌, ಕೆಎಎಸ್‌ ಪರೀಕ್ಷಾ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ನ್ಯಾಯಕ್ಕಾಗಿ ಆಗ್ರಹಿಸಿದರು   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ ಎಸ್ಸಿ, ಎಸ್ಟಿ, ಒಬಿಸಿ ಅಭ್ಯರ್ಥಿಗಳಿಗೆ ಐಎಎಸ್‌, ಕೆಎಎಸ್‌ ಪರೀಕ್ಷೆಗಳ ಪೂರ್ವಭಾವಿ ತರಬೇತಿ ಅವಧಿಯಲ್ಲಿ ಶಿಷ್ಯವೇತನ ನೀಡುವ ನಿಲುವನ್ನು ಸರ್ಕಾರ ಬದಲಿಸಿದೆ’ ಎಂದು ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಐಎಎಸ್‌, ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಕೆಕೆಆರ್‌ಡಿಬಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಮೇ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.

‘ಆ ಅಧಿಸೂಚನೆಯ 10ನೇ ಅಂಶದಲ್ಲಿ ‘ಬಯೋಮೆಟ್ರಿಕ್‌ ಶಿಷ್ಯವೇತನವನ್ನು ಪ್ರತಿ ತಿಂಗಳು ತರಬೇತಿ ಸಂಸ್ಥೆ ಸಲ್ಲಿಸುವ ಹಾಜರಾತಿ ಅನ್ವಯ ಪಾವತಿಸುವುದಾಗಿ ತಿಳಿಸಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆಯಲು ಪ್ರವೇಶ ಪರೀಕ್ಷೆ ಬರೆದಿದ್ದರು. ಅದರಲ್ಲಿ 100 ಐಎಎಸ್‌, 400 ಕೆಎಎಸ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಿ ಆಗಸ್ಟ್‌ 13ರಂದು ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿತ್ತು. ಈಗ ನೋಡಿದರೆ ಶಿಷ್ಯವೇತನ ನೀಡಲ್ಲ ಎನ್ನುತ್ತಿದ್ದಾರೆ’ ಎಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಬಂದಿದ್ದ ಅಭ್ಯರ್ಥಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಅಲ್ಲದೇ, ಅರ್ಜಿ ಕರೆದಾಗ ತರಬೇತಿ ಎಲ್ಲಿ ನೀಡಲಾಗುತ್ತದೆ ಎಂಬ ವಿವರವೂ ಇರಲಿಲ್ಲ. ನಾವು ಸಮಾಜ ಕಲ್ಯಾಣ ಇಲಾಖೆ ಐಎಎಸ್‌, ಕೆಎಎಸ್‌ ಸಿದ್ಧತಾ ತರಬೇತಿಗೆ ಪರೀಕ್ಷೆ ನಡೆಸಿ, ಹೈದರಾಬಾದ್‌, ದೆಹಲಿ, ಧಾರವಾಡ, ಬೆಂಗಳೂರಿನಂಥ ಕೇಂದ್ರಗಳಿಗೆ ಕಳುಹಿಸುವಂತೆ ಇಲ್ಲಿಯೂ ಕಳಿಸಬಹುದು ಎಂದುಕೊಂಡು ಅರ್ಜಿ ಸಲ್ಲಿಸಿದ್ದೆವು. ಈಗ ತರಬೇತಿಗೆ ಆಯ್ಕೆಯಾದವ ಪಟ್ಟಿ ಪ್ರಕಟಿಸುವಾಗ ಕಲಬುರಗಿಯಲ್ಲೇ ತರಬೇತಿ ನಡೆಯಲಿದೆ ಎಂದು ತಿಳಿಸಲಾಗಿದೆ. ಈ ವಿಷಯ ಮೊದಲೇ ಹೇಳಿದ್ದರೆ, ಈ ಪರೀಕ್ಷೆಯೇ ಬರೆಯುತ್ತಿರಲಿಲ್ಲ. ಕಲಬುರಗಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಓದುವಂಥ ವಾತಾವರಣ, ವ್ಯವಸ್ಥೆ ಎಲ್ಲಿದೆ’ ಎಂದು ಕೊಪ್ಪಳ ಜಿಲ್ಲೆಯ ಕಾರಟಗಿ, ರಾಯಚೂರು ಜಿಲ್ಲೆಯ ಮಾನ್ವಿ, ಕಲಬುರಗಿ ಜಿಲ್ಲೆಯ ಚಿಂಚೋಳಿಯ ಅಭ್ಯರ್ಥಿಗಳು ಪ್ರಶ್ನಿಸಿದರು.

‘ತರಬೇತಿಗೆ ಆಯ್ಕೆಯಾದವರಿಗೆ ಶಿಷ್ಯವೇತನ ನೀಡಬೇಕು. ಈ ಅತ್ಯುನ್ನತ ತರಬೇತಿ ಕೇಂದ್ರ ಆಯ್ಕೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿ 50ಕ್ಕೂ ಅಧಿಕ ಅಭ್ಯರ್ಥಿಗಳು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಅವರಿಗೆ ಬುಧವಾರ ಮನವಿ ಸಲ್ಲಿಸಿ ಕೋರಿದ್ದಾರೆ.

‘ಎಕ್ಸ್’ ಖಾತೆಯಲ್ಲೂ ಅಸಮಾಧಾನ

ಶಿಷ್ಯವೇತನಕ್ಕೆ ಸಂಬಂಧಿಸಿದಂತೆ ಅಸಮಾಧಾನವನ್ನು ಅಭ್ಯರ್ಥಿಗಳು ‘ಎಕ್ಸ್’ ಖಾತೆಯಲ್ಲೂ ಬರೆದು ಸಮಾಜಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಕೆಕೆಆರ್‌ಡಿಬಿ ಕಾರ್ಯದರ್ಶಿ ಸೇರಿದಂತೆ ಹಲವರಿಗೆ  ಟ್ಯಾಗ್‌ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಇಲಾಖೆ ಇದು ಕೆಕೆಆರ್‌ಡಿಬಿ ವ್ಯಾಪ್ತಿಗೆ ಒಳಪಟ್ಟಿದ್ದು ಅಗತ್ಯ ಕ್ರಮಕ್ಕಾಗಿ ಕಲಬುರಗಿ ಜಿಲ್ಲಾಧಿಕಾರಿಗೆ ಟ್ಯಾಗ್‌ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.