ADVERTISEMENT

ಬಡವರ ಹಸಿವು ನೀಗಿಸುವುದು ಸರ್ಕಾರದ ಕೆಲಸ: ಸಚಿವ ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 15:51 IST
Last Updated 22 ಜೂನ್ 2025, 15:51 IST
ಸೇಡಂನ ಸಚಿವ ಡಾ.ಶರಣಪ್ರಕಾಶ ಪಾಟೀಲ ಇಂದಿರಾ ಕ್ಯಾಂಟೀನ್ ಭಾನುವಾರ ಪಾಯಸ ಬಳಸುವ ಮೂಲಕ ಉದ್ಘಾಟಿಸಿದರು
ಸೇಡಂನ ಸಚಿವ ಡಾ.ಶರಣಪ್ರಕಾಶ ಪಾಟೀಲ ಇಂದಿರಾ ಕ್ಯಾಂಟೀನ್ ಭಾನುವಾರ ಪಾಯಸ ಬಳಸುವ ಮೂಲಕ ಉದ್ಘಾಟಿಸಿದರು   

ಸೇಡಂ: ‘ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉದ್ದೇಶ ಈಡೇರುತ್ತಿದೆ. ಜನರ ಬೇಡಿಕೆ ಈಡೇರಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ಭಾನುವಾರ ನಡೆದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಜನರಿಗೆ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಸೇಡಂ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು, ಸಿಸಿ ರಸ್ತೆ, ಚರಂಡಿ ಕಾಮಗಾರಿ, ಶಾಲಾ ಹಾಗೂ ಅಂಗನವಾಡಿ ಕಟ್ಟಡ ಕಾಮಗಾರಿ ನಡೆದಿವೆ. ತಾಲ್ಲೂಕು ಆಸ್ಪತ್ರೆಯನ್ನು 100ರಿಂದ 150 ಬೆಡ್‌ಗೆ ಮೇಲ್ದರ್ಜೆಗೇರಿಸಲಾಗಿದೆ. ಕುಡಿಯುವ ನೀರಿನ ನೂತನ ಟ್ಯಾಂಕ್‌ ನಿರ್ಮಾಣ, ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ಮಾತನಾಡಿ, ‘ಮಾನವನಿಗೆ ಬದುಕಲು ಆಹಾರ ಬಹಳ ಮುಖ್ಯವಾಗಿದೆ. ಸರ್ಕಾರ ರೀಯಾಯಿತಿ ದರದಲ್ಲಿ ಆಹಾರ ನೀಡಿ, ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಯೋಜನಾ ನಿರ್ದೇಶಕ ಮುನಾವರ ದೌಲಾ ಮಾತನಾಡಿ, ‘ಜಿಲ್ಲೆಯಲ್ಲಿ ಹಂತ ಎರಡರಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿ ಉದ್ಘಾಟಿಸುತ್ತಿದ್ದು, ಈಗಾಗಲೇ ಅಫಜಲಪುರ ಉದ್ಘಾಟಿಸಲಾಗಿದೆ’ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ ಹಾಜರಿದ್ದರು. ಕಲಾವಿದ ವೀರೇಂದ್ರ ಭಂಟನಳ್ಳಿ ಪ್ರಾರ್ಥಿಸಿದರು. ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಸ್ವಾಗತಿಸಿದರು. ಪೂಜಾ ಭಂಕಲಗಿ ನಿರೂಪಿಸಿದರು.

ಇಂದಿರಾ ಕ್ಯಾಂಟೀನ್ ಉದ್ಘಾಟನೆ!

‘ಹಿಂದೆ ಸಚಿವನಾಗಿದ್ದಾಗ 2017ರಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೆ. ಆದರೆ ಹಿಂದಿನ ಸರ್ಕಾರ ಉದ್ಘಾಟನೆಗೆ ಕಾಳಜಿ ತೋರಲಿಲ್ಲಿ. 8 ವರ್ಷಗಳ ಬಳಿಕ ಈಗ ಮತ್ತೆ ನಾನೇ ಉದ್ಘಾಟನೆ ಮಾಡಬೇಕಾಯಿತು‌. ನಮ್ಮ ಉದ್ದೇಶ ಸ್ಪಷ್ಟ ಮತ್ತು ನೇರವಾಗಿ ಬಡವರ ಶ್ರೇಯೋಭಿವೃದ್ಧಿ ಆಗಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು. ಎರಡೊತ್ತು ಊಟ ಒಂದೊತ್ತು ನಾಷ್ಟಾ! ಸರ್ಕಾರದ ಮಹಾದಾಸೆಯಾದ ಬಡವರ ಹಸಿವು ನೀಗಿಸುವಿಕೆಯ ಕಾರ್ಯವನ್ನು ದಿನದ ಮೂರೊತ್ತು ನೀಡಲಾಗುತ್ತದೆ. ಬೆಳಿಗ್ಗೆ ₹ 5 ಉಪಹಾರದ ವ್ಯವಸ್ಥೆ 300 ಟೋಕನ್ ಪ್ರಕಾರ. ನಂತರ ಮಧ್ಯಾಹ್ನ ಮತ್ತು ರಾತ್ರಿ ₹ 10ಕ್ಕೆ ಊಟ ಒದಗಿಸಲಾಗುತ್ತದೆ. ಆರಂಭದಲ್ಲಿ 300 ಟೋಕನ್ ಮೂಲಕ ಜನರಿಗೆ ವಿತರಿಸಲಾಗುತ್ತದೆ. ನಂತರ ಟೋಕನ್ ಸಂಖ್ಯೆ ಹೆಚ್ಚಿಸುವ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.