ADVERTISEMENT

ಕಲಬುರ್ಗಿ: ನಿರ್ಲಕ್ಷ್ಯಕ್ಕೆ ಒಳಗಾದ ನೀರಾವರಿ ಯೋಜನೆಗಳು

ಜಿಲ್ಲೆಯಲ್ಲಿ ಹಲವು ಜಲಾಶಯಗಳಿದ್ದರೂ ನೀರಾವರಿ ಗಗನ ಕುಸುಮ; ಜಮೀನುಗಳಿಗೆ ಬಾರದ ನೀರು, ರೈತರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 1:35 IST
Last Updated 30 ನವೆಂಬರ್ 2020, 1:35 IST
ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದ ವಿಹಂಗಮ ನೋಟ
ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದ ವಿಹಂಗಮ ನೋಟ   

ಕಲಬುರ್ಗಿ: ಜಿಲ್ಲೆಯಲ್ಲಿ ಒಟ್ಟು 6 ನೀರಾವರಿ ಯೋಜನೆಗಳಿದ್ದರೂ ಅದರ ಫಲ ರೈತರಿಗೆ ತಲುಪಿಲ್ಲ. ‘ಟೇಲ್‌ ಎಂಡ್’ ಮರೆತುಬಿಡಿ, ಜಲಾಶಯಕ್ಕೆ ಹೊಂದಿಕೊಂಡ ಎಷ್ಟೋ ಜಮೀನುಗಳಿಗೂ ನೀರು ಹರಿಯದ ಉದಾಹರಣೆಗಳಿವೆ. ಆದರೆ ಕಾಲುವೆ ನಿರ್ವಹಣೆ ಮತ್ತು ನಿರ್ಮಾಣಕ್ಕೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದು ನಡೆದೇ ಇದೆ.

ಅಮರ್ಜಾ, ಬೆಣ್ಣೆತೊರಾ, ಸೊನ್ನ ಭೀಮಾ ನೀರಾವರಿ ಯೋಜನೆ, ಚಂದ್ರಂಪಳ್ಳಿ, ಗಂಡೋರಿ ನಾಲಾ ಮತ್ತು ಕೆಳದಂಡೆ ಮುಲ್ಲಾಮಾರಿ ಯೋಜನೆಗಳು ಜಿಲ್ಲೆಯಲ್ಲಿವೆ. ನೂರಾರು ಕಿ.ಮೀ. ಕಾಲುವೆಗಳನ್ನು ನಿರ್ಮಿಸಲಾಗಿದೆ. ಕೆಳದಂಡೆ ಮುಲ್ಲಾಮಾರಿ ಯೋಜನೆ ಸುಧಾರಣೆಗಾಗಿ ಬಿಡುಗಡೆಯಾದ ₹ 125 ಕೋಟಿ ಮೊತ್ತದ ಕಾಮಗಾರಿ ಕಳಪೆಯಾಗಿದ್ದು ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದರು. ಇದರ ಸಮಗ್ರ ತನಿಖೆಗೂ ಆಗ್ರಹಿಸಿದ್ದರು. ಆದರೆ, ಚಿಂಚೋಳಿ ಉಪಚುನಾವಣೆ ಬಳಿಕ ಈ ವಿಚಾರ ಮರೆತೇ ಹೋಗಿದೆ.

ಜಿಲ್ಲೆಯ ಅತಿ ದೊಡ್ಡ ನೀರಾವರಿ ಯೋಜನೆಯಾದ ಬೆಣ್ಣೆತೊರಾ ಜಲಾಶಯದಿಂದ 80 ಕಿ.ಮೀ. ದೂರದವರೆಗೆ ಕಾಲುವೆ ನಿರ್ಮಿಸಲಾಗಿದೆ. ಅದಕ್ಕಾಗಿ ನೂರಾರು ಕೋಟಿ ಹಣ ವೆಚ್ಚ ಮಾಡಲಾಗಿದೆ. ಆದರೆ, ಮುಖ್ಯ ಕಾಲುವೆಗುಂಟ ಹರಿಯುವ ನೀರು ಕಿರುಗಾಲುವೆಗಳಿಗೆ ಹರಿಯುವುದೇ ಇಲ್ಲ ಎಂಬ ಆರೋಪ ರೈತರದ್ದು. ಇದರಿಂದ ಬೇಸಿಗೆಯಲ್ಲಿ ಕೃಷಿ ಚಟುವಟಿಕೆ ಮಾಡಲು ಸಾಧ್ಯವೇ ಆಗುವುದಿಲ್ಲ ಎಂದು ಅವರು ಹೇಳುತ್ತಾರೆ.

ADVERTISEMENT

‘ಅಫಜಲಪುರ ತಾಲ್ಲೂಕಿನ ಪ್ರಮುಖ ನೀರಾವರಿ ಯೋಜನೆಯಾದ ‘ಭೀಮಾ ಏತ ನೀರಾವರಿ ಯೋಜನೆ’ಯ ಕಾಲುವೆಗಳು ಬಹುತೇಕ ಹಾಳಾಗಿದ್ದು, ಅವುಗಳ ದುರಸ್ತಿಗಾಗಿ ನೀರಾವರಿ ನಿಗಮ ಅಗತ್ಯವಿದ್ದಷ್ಟು ಹಣ ಬಿಡುಗಡೆ ಮಾಡುವುದೇ ಇಲ್ಲ. ಆದ್ದರಿಂದ ಜಲಾಶಯದಿಂದ ಬಿಡುಗಡೆ ಮಾಡಿದ ನೀರು ‘ಟೇಲ್ ಎಂಡ್’ ತಲುಪುವುದೇ ಇಲ್ಲ. ರೈತರ ಹಿತಾಸಕ್ತಿಗೆಂದು ನಿರ್ಮಿಸಲಾದ ಈ ಜಲಾಶಯ ವ್ಯರ್ಥವಾಗಿದೆ’ ಎಂದು ಅತನೂರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಲತೀಫ್‌ ಪಟೇಲ್‌ ಆರೋಪಿಸುತ್ತಾರೆ.

ಚಿಂಚೋಳಿ ತಾಲ್ಲೂಕಿನಲ್ಲಿ ಎರಡು ಬೃಹತ್ ನೀರಾವರಿ ಯೋಜನೆಗಳು, 20 ಸಣ್ಣ ನೀರಾವರಿ ಕೆರೆಗಳು ಹಾಗೂ 7 ಬ್ರಿಜ್ ಕಂ ಬ್ಯಾರೇಜುಗಳಿವೆ. ಇವುಗಳಿಂದ ಸುಮಾರು 23,415 ಹೆಕ್ಟೇರ್ ನೀರುಣಿಸುವ ಗುರಿ ಹೊಂದಿವೆ. ಆದರೆ ತಾಲ್ಲೂಕಿಲ್ಲಿ ರೈತರು ಈ ನೀರು ಬಳಸಿಕೊಂಡು ನೀರಾವರಿ ಕೈಗೊಳ್ಳುತ್ತಿರುವುದು ದುರ್ಬೀನು ಹಿಡಿದು ಹುಡುಕುವಂತಹ ಸ್ಥಿತಿಯಿದೆ.

ಜಿಲ್ಲೆಯ ಯಶಸ್ವಿ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ ಚಂದ್ರಂಪಳ್ಳಿ ನೀರಾವರಿ ಯೋಜನೆಯಿಂದ 5,223 ಹೆಕ್ಟೇರ್, ತಾಲ್ಲೂಕಿನಲ್ಲಿರುವ 20 ಸಣ್ಣ ನೀರಾವರಿ ಕೆರೆಗಳಿಂದ 7,178 ಹೆಕ್ಟೇರ್ ಮತ್ತು 7 ಬ್ರಿಜ್ ಕಂ ಬ್ಯಾರೇಜುಗಳಿಂದ 301 ಹೆಕ್ಟೇರ್ ನೀರಾವರಿಯ ಗುರಿಯಿದೆ.

‘ಕೆಳದಂಡೆ ಮುಲ್ಲಾಮಾರಿ ಯೋಜನೆಯಿಂದ 9,713 ಹೆಕ್ಟೇರ್ ನೀರಾವರಿ ಗುರಿಯಿದೆ. ಯೋಜನೆಯ ಕಾಲುವೆ ಜಾಲ ನವೀಕರಣಕ್ಕಾಗಿ ಸಿದ್ದರಾಮಯ್ಯ ಸರ್ಕಾರ ₹ 125 ಕೋಟಿ ಮಂಜೂರು ಮಾಡಿದೆ. ಇದರಿಂದ 3 ವರ್ಷಗಳಿಂದ ಕಾಮಗಾರಿ ನಡೆದಿದೆ. ರೈತರ ಜಮೀನಿಗೆ 3 ವರ್ಷಗಳಿಂದ ನೀರು ಹರಿದಿಲ್ಲ. ಜಲಾಶಯದ ತುಂಬಾ ನೀರಿದ್ದರೂ ರೈತರಿಗೆ ಕನ್ನಡಿಯೊಳಗಿನ ಗಂಟಿನಂತಾಗಿದೆ. ಸದ್ಯ ನೀರನ್ನು ಕಾಲುವೆಗೆ ಬಿಟ್ಟರೆ 15 ಕಿ.ಮೀ. ವರೆಗೆ ಮಾತ್ರ ನೀರು ಕೊಡಬಹುದು’ ಎನ್ನುತ್ತಾರೆ ಯೋಜನಾಧಿಕಾರಿಗಳು.

80 ಕಿ.ಮೀ. ಉದ್ದದ ಮುಖ್ಯ ಕಾಲುವೆಯ ನವೀಕರಣ ಕಾಮಗಾರಿ 11 ಕಿ.ಮೀ. ಆಯ್ದ ಸ್ಥಳಗಳಲ್ಲಿ ಬಾಕಿಯಿದೆ. ಜತೆಗೆ 64 ವಿತರಣಾ ನಾಲೆಗಳಿದ್ದು ಇದರಲ್ಲಿ 8 ನಾಲೆಗಳು ಮಾತ್ರ ಭಾಗಶಃ ಪೂರ್ಣಗೊಂಡಿವೆ. ಇನ್ನೂ 56 ವಿತರಣಾ ನಾಲೆಗಳ ನವೀಕರಣ ಬಾಕಿಯಿದೆ. ಹೊಲಗಾಲುವೆಗಳು ಇಲ್ಲವೇ ಇಲ್ಲ. ಹೀಗಾಗಿ ರೈತರ ಜಮೀನಿಗೆ ನೀರು ಹರಿಯುವುದು ಮರೀಚಿಕೆಯಾಗಿದೆ.

ಅನಾಥವಾದ ಚಂದ್ರಂಪಳ್ಳಿ ಯೋಜನೆ

ಚಂದ್ರಂಪಳ್ಳಿ ನೀರಾವರಿ ಯೋಜನೆ ಅನಾಥ ಪ್ರಜ್ಞೆಗೆ ಒಳಗಾಗಿದೆ. 5,223 ಹೆಕ್ಟೇರ್ ನೀರಾವರಿಯ ಗುರಿ ಹೊಂದಿರುವ ಯೋಜನೆಯ ಮುಖ್ಯ ಕಾಲುವೆಗಳು, ವಿತರಣೆ ನಾಲೆಗಳು ಹಾಗೂ ಹೊಲಗಾಲುವೆಗಳು ಹಾಳಾಗಿವೆ. ಯೋಜನೆಗೆ ಅಗತ್ಯ ಅನುದಾನ ಮತ್ತು ನಿರ್ವಹಣೆ ಅನುದಾನದ ಲಭ್ಯತೆ ಇಲ್ಲದ್ದರಿಂದ ಯೋಜನೆ ಸರ್ಕಾರದ ಅವಜ್ಞೆಗೆ ಒಳಗಾಗಿದೆ.

ಯೋಜನೆಯಲ್ಲಿ ಅನುದಾನ ಇಲ್ಲದ ಕಾರಣ ಎಂಜಿನಿಯರ್‌ಗಳು ಇಲ್ಲಿ ಕೆಲಸ ಮಾಡಲು ಇಷ್ಟಪಡದೇ ತಮ್ಮ ಪ್ರಭಾವ ಬಳಸಿಕೊಂಡು ಬೇರೆಡೆ ಹೋಗುತ್ತಿದ್ದಾರೆ. ವರ್ಗಾವಣೆ ಸಾಧ್ಯವಾಗದಿದ್ದರೆ ನಿಯೋಜನೆ ಮೇರೆಗೆ ಬೇರೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕೆಲವೇ ತಿಂಗಳುಗಳಲ್ಲಿ ಮೂವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಬದಲಾಗಿದ್ದಾರೆ. 4 ವರ್ಷದ ನಂತರ ಜಲಾಶಯ ಭರ್ತಿಯಾಗಿದೆ. ಆದರೆ, ನೀರಾವರಿಗೆ ಬಳಕೆಯಾಗುವ ನೀರಿನ ಪ್ರಮಾಣಕ್ಕಿಂತ ಹೆಚ್ಚು ನೀರು ವ್ಯರ್ಥ ಪೋಲಾಗುತ್ತಿದೆ.

ಕಲಬುರ್ಗಿ ಜಿಲ್ಲೆಯಲ್ಲಿನ ಬಹುತೇಕ ನೀರಾವರಿ ಯೋಜನೆಗಳು ರಾಜಕಾರಣಿಗಳು, ಎಂಜಿನಿಯರುಗಳು ಹಾಗೂ ಗುತ್ತಿಗೆದಾರರ ಹಣ ಗಳಿಕೆಗೆ ಮಾತ್ರ ಬಳಕೆಯಾಗಿವೆ. ₹ 5.5 ಕೋಟಿಯಲ್ಲಿ ಮುಗಿಯಬೇಕಿದ್ದ ಆಳಂದ ತಾಲ್ಲೂಕಿನ ಅಮರ್ಜಾ ನೀರಾವರಿ ಯೋಜನೆಗೆ ₹ 225 ಕೋಟಿ ಖರ್ಚಾಗಿದೆ. ಯೋಜನೆ ಯಶಸ್ಸಿಗೆ ಕಾಡಾ, ನೀರಾವರಿ, ಕೃಷಿ ಮತ್ತು ಕಂದಾಯ ಇಲಾಖೆಗಳ ಸಮನ್ವಯ ಇರಬೇಕು.

ಭೂಸ್ವಾಧೀನ ಮಾಡದೆ ಮತ್ತು ಕಾಲುವೆಗಳನ್ನು ನಿರ್ಮಿಸದೆ ಹೊಲಗಳಿಗೆ ನೀರು ಹರಿಸಬಹುದು ಎಂಬುದನ್ನು ತೆಲಂಗಾಣದ ಕಾಲಕಾಲೇಶ್ವರ ನೀರಾವರಿ ಯೋಜನೆ ತೋರಿಸಿಕೊಟ್ಟಿದೆ. 1000 ಎಚ್‌.ಪಿ. ಪಂಪ್‌ಸೆಟ್‌ಗಳನ್ನು ಬಳಸಿ ಅಲ್ಲಿನ ಸರ್ಕಾರ ಗೋದಾವರಿ ನದಿಗೆ ನೀರು ಹರಿಸಿದೆ.

–ಬಿ.ಆರ್‌. ಪಾಟೀಲ, ಮಾಜಿ ಶಾಸಕ

‘ನಿರ್ವಹಣೆ ಇಲ್ಲ’

ಅಫಜಲಪುರದ ಭೀಮಾ ಏತ ನೀರಾವರಿ ಯೋಜನೆಯ ನೀರು ಬಾದನಹಳ್ಳಿ, ಚವಡಾಪುರದ ಹೊಲಗಳಿಗೆ ಬರುವುದಿಲ್ಲ. 30–35 ವರ್ಷಗಳ ಹಿಂದೆ ನಿರ್ಮಾಣಗೊಂಡ ಕಾಲುವೆಗಳ ನಿರ್ವಹಣೆ ಸಮರ್ಪಕವಾಗಿರದ ಕಾರಣ ನೀರು ಹರಿಯುತ್ತಿಲ್ಲ. ಈ ಯೋಜನೆಯಡಿ 48 ಜೂನಿಯರ್‌ ಎಂಜಿನಿಯರ್‌ಗಳಿದ್ದು, ಅವರು ಕಾಲುವೆಗೆ ಭೇಟಿ ನೀಡಿದ್ದು–ನಿರ್ವಹಿಸಿದ್ದು ನೋಡಿಲ್ಲ.

ಶ್ರೀಮಂತ ಬಿರಾದಾರ

ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ, ಅಫಜಲಪುರ

ನೀರಾವರಿ ಯೋಜನೆ ವಿಫಲ

ನೀರು ಬಳಕೆದಾರರ ಸಂಘ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ನೀರಾವರಿ ಯೋಜನೆ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ ಇರುವ ಕಾರಣ ನೀರಾವರಿ ಯೋಜನೆ ವಿಫಲವಾಗುತ್ತವೆ.

ಅಶೋಕ ಪಾಟೀಲ, ಅಧ್ಯಕ್ಷ, ನೀರು ಬಳಕೆದಾರರ ಸಹಕಾರ ಸಂಘ-1 ಚಿಂಚೋಳಿ

ಜಮೀನಿಗೆ ಬಾರದ ನೀರು

ಕಲುಬುರ್ಗಿ ನೀರಾವರಿ ವೃತ್ತದಲ್ಲಿ 9 ನೀರಾವರಿ ಯೋಜನೆಗಳು ಆರಂಭಗೊಂಡು ದಶಕಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಜಮೀನಿಗೆ ನೀರು ಹರಿದು ಬಂದಿಲ್ಲ. ರೈತರಿಗೂ ಪ್ರಯೋಜನವಾಗಿಲ್ಲ.

-ಭೀಮಶೆಟ್ಟಿ ಮುಕ್ಕಾ, ನೀರಾವರಿ ಯೋಜನೆಗಳ ಹೋರಾಟಗಾರ

ಹುದ್ದೆ 5, ಎಂಟು ಜನ ಎಂಜಿನಿಯರ್‌ಗಳು!

ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಗೆ ಸರ್ಕಾರ ಅನುದಾನ ಮಂಜೂರು ಮಾಡುತ್ತಿದ್ದಂತೆ ವಿವಿಧೆಡೆಯಿದ್ದ ಪ್ರಭಾವಿ ಎಂಜಿನಿಯರ್‌ಗಳು ನಿಯೋಜನೆ ಮೇರೆಗೆ ಬಂದಿದ್ದಾರೆ.

ಯೋಜನೆಗೆ ಸಹಾಯಕ ಎಂಜಿನಿಯರ್‌ ಹುದ್ದೆಗಳು 5 ಮಂಜೂರಾದರೆ, ಇಲ್ಲಿ 8 ಮಂದಿ ಇದ್ದಾರೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆ 1 ಇದ್ದರೆ, ಸದ್ಯ ಇಬ್ಬರು ಕರ್ತವ್ಯದಲ್ಲಿದ್ದಾರೆ. 8 ಸಹಾಯಕ ಎಂಜಿನಿಯರ್‌ಗಳಲ್ಲಿ ನಾಲ್ವರು ಯೋಜನೆಗೆ ವರ್ಗವಾಗಿ ಬಂದರೆ, ಉಳಿದ ನಾಲ್ವರು ನಿಯೋಜನೆ ಮೇರೆಗೆ ಬಂದಿದ್ದಾರೆ.

‘ಇಲ್ಲಿರುವ ಎಂಜಿನಿಯರ್‌ಗಳನ್ನು ಬೇರೆಡೆ ನಿಯೋಜಿಸಿ, ಬೇರೆಡೆ ಎಂಜಿನಿಯರ್‌ಗಳನ್ನು ಇಲ್ಲಿಗೆ ನಿಯೋಜಿಸಲು ನಿಯಮದ ಅವಕಾಶವಿಲ್ಲ. ಆದರೆ, ಪ್ರಭಾವಕ್ಕೆ ಮಣಿದು ಇಂತಹ ಆದೇಶಗಳು ಮಾಡಲಾಗುತ್ತಿದೆ’ ಎಂದು ಮೂಲಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.