ADVERTISEMENT

ಕಲಬುರಗಿ | 'ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ'

​ಪ್ರಜಾವಾಣಿ ವಾರ್ತೆ
Published 17 ಮೇ 2025, 14:21 IST
Last Updated 17 ಮೇ 2025, 14:21 IST
ಈರಣ್ಣಗೌಡ ಆರ್‌.ಪಾಟೀಲ
ಈರಣ್ಣಗೌಡ ಆರ್‌.ಪಾಟೀಲ   

ಕಲಬುರಗಿ: ‘ಜೇವರ್ಗಿಯಲ್ಲಿ ಸ್ಲಂ ಬೋರ್ಡ್‌ನಿಂದ ಮಂಜೂರಾದ ಮನೆಗಳಲ್ಲಿ ಕೆಲವು ಶ್ರೀಮಂತರ ಪಾಲಾದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿ ಐದು ತಿಂಗಳಾಗಿವೆ. ಆದರೆ, ಈತನಕವೂ ವರದಿ ನೀಡದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ಈರಣ್ಣಗೌಡ ಪಾಟೀಲ ಗುಳ್ಯಾಳ ಆಗ್ರಹಿಸಿದರು.

‘ಸ್ಲಂ ಬೋರ್ಡ್‌ನಿಂದ ಮಂಜೂರಾದ 1,150 ಮನೆಗಳಲ್ಲಿ ಕೆಲವು ಶ್ರೀಮಂತರ ಪಾಲಾಗಿವೆ. ಈ ಸಂಬಂಧ ತನಿಖೆಗೆ ಆಗ್ರಹಿಸಿ ಹೋರಾಟ ನಡೆಸಿದ ವೇಳೆ ಜಿಲ್ಲಾಧಿಕಾರಿ ಅವರು ನಗರಾಭಿವೃದ್ಧಿ ಇಲಾಖೆ ಕೋಶಾಧ್ಯಕ್ಷ ಮುನಾವರ್ ದೌಲಾ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದರು. ಆದರೆ, ಈತನಕ ತನಿಖೆ ನಡೆಯದಿರುವುದು ನೋಡಿದರೆ, ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಯತ್ನದಂತೆ ಕಾಣುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಂದೇಹ ವ್ಯಕ್ತಪಡಿಸಿದರು.

‘ಈ ಹಗರಣದ ತನಿಖೆ ಮಾಡಿಸುವಲ್ಲಿ ಶಾಸಕ ಅಜಯ್‌ ಸಿಂಗ್ ಸಂಪೂರ್ಣ ವಿಫಲರಾಗಿದ್ದಾರೆ. ಅವರು ಶಾಸಕ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಅಗತ್ಯ ಬಿದ್ದರೆ ಅಜಯ್‌ಸಿಂಗ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಬೆಂಗಳೂರಿಗೆ ತೆರಳಿ ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಮೇಘರಾಜ ಗರೂರು, ಮಹಾಂತಪ್ಪಗೌಡ ನಂದಿಹಳ್ಳಿ, ಗುರಣ್ಣಗೌಡ, ಸಂತೋಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.